ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದು, ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ಇದೆ. ಪ್ರಧಾನಿಗೆ ರಾಜ್ಯದ ಸಂಸದರೆಲ್ಲಾ ಸೇರಿ ಒತ್ತಡ ಹಾಕಿದರೆ ಪರಿಹಾರ ಸಿಗಲಿದೆ: ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ
ಬೆಂಗಳೂರು(ಜ.14): ರಾಜ್ಯ ಎದುರಿಸುತ್ತಿರುವ ಕಾವೇರಿ ಜಲಸಂಕಷ್ಟವನ್ನು ಪರಿಹಾರ ಮಾಡುವ ಶಕ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾತ್ರ ಇದ್ದು, ರಾಜ್ಯದ 28 ಸಂಸದರು ರಾಜಕೀಯ ಬಿಟ್ಟು ಒಟ್ಟಾಗಿ ಹೋರಾಟ ಮಾಡಬೇಕು. ಇದರಲ್ಲಿ ಯಾವುದೇ ರಾಜಕೀಯ ಇರಬಾರದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಶನಿವಾರ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಲೋಕಸಭೆ ಚುನಾವಣೆ ಬಳಿಕ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದು, ಜಲ ಸಂಕಷ್ಟಕ್ಕೆ ಪರಿಹಾರ ನೀಡಲಿದ್ದಾರೆ ಎನ್ನುವ ವಿಶ್ವಾಸ ಇದೆ. ಪ್ರಧಾನಿಗೆ ರಾಜ್ಯದ ಸಂಸದರೆಲ್ಲಾ ಸೇರಿ ಒತ್ತಡ ಹಾಕಿದರೆ ಪರಿಹಾರ ಸಿಗಲಿದೆ. ತಮಿಳುನಾಡಿನಲ್ಲಿ 40 ಸಂಸದರಿದ್ದರೂ ರಾಜಕೀಯ ಒಗ್ಗಟ್ಟು ಪ್ರದರ್ಶಿಸಬೇಕು. ಮೋದಿ ಅವರಿಗೆ ನಮಗೆ ಆಗಿರುವ ಅನ್ಯಾಯ ಮನ ಮುಟ್ಟುವಂತೆ ನಾವು ಒಟ್ಟಾಗಿ ಹೋರಾಡಬೇಕು. ಇದರಲ್ಲಿ ರಾಜಕೀಯ ಇರಬಾರದು ಎಂದು ಒತ್ತಾಯಿಸಿದರು.
ಮೇಕೆದಾಟು ಯೋಜನೆ: ತಮಿಳ್ನಾಡು ಕ್ಯಾತೆಗೆ ಮಾಜಿ ಪ್ರಧಾನಿ ದೇವೇಗೌಡ ಕಿಡಿ
ಪ್ರತಿ ವರ್ಷ ತಮಿಳುನಾಡು ಕಾವೇರಿ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರದ ಮುಂದೆ ಕರ್ನಾಟಕದಿಂದ ನೀರು ಕೊಡಿಸಿ ಎಂದು ಅರ್ಜಿ ಹಾಕುತ್ತದೆ. ನಮ್ಮ ಬಳಿ ನೀರು ಇಲ್ಲದಿದ್ದರೂ ನೀರು ಬಿಡಿ ಎನ್ನುತ್ತದೆ ರಾಜ್ಯದ ಅಧಿಕಾರಿಗಳು ಏನೇ ವಾದ ಮಾಡಿದರೂ ಪ್ರಯೋಜನವಾಗಿಲ್ಲ, ಕಾವೇರಿ ಪ್ರಾಧಿಕಾರದವರು ಯಾವತ್ತು ಕೂಡ ನಮ್ಮ ರಾಜ್ಯಕ್ಕೆ ಬಂದು ನೀರು ಎಷ್ಟು ಇದೆ ಅಂತ ನೋಡಿಲ್ಲ, ನಾನು ಸಾಯುವವರೆಗೂ ಕಾವೇರಿ ಬಗ್ಗೆ ಹೋರಾಟ ಮಾಡುತ್ತೇನೆ. ರಾಜ್ಯದ ಜನರಿಗೆ ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂದರು.
