ಭೀಕರ ದುರಂತ : ಒಂದೇ ಕುಟುಂಬದ 9 ಮಂದಿ ಸಮುದ್ರಪಾಲು

ಕಾರವಾರದ ದೋಣಿ ದುರಂತವು ಅತ್ಯಂತ ಭೀಕರವಾಗಿ ತಟ್ಟಿದೆ. ಒಂದೇ ಕುಟುಂಬದ 9 ಮಂದಿ ಸಾವಿಗೀಡಾಗಿದ್ದಾರೆ. 

Karwar Boat Tragedy 9 Members Of One Family Killed

ಕಾರವಾರ :  13ರ ಬಾಲಕ ಗಣೇಶ ಸೋಮವಾರ ಮಧ್ಯಾಹ್ನದಿಂದ ಅಳುತ್ತಲೇ ಇದ್ದಾನೆ. ಊಟ, ತಿಂಡಿ ಮಾಡದೆ ರೋಧಿಸುತ್ತಿದ್ದಾನೆ. ಆದರೆ ಅಮ್ಮ, ಅಪ್ಪ ಸೇರಿದಂತೆ ಜಾತ್ರೆಗೆ ಹೋದ 12 ಮಂದಿಯಲ್ಲಿ 9 ಮಂದಿ ಮರಳಲಾರದ ಲೋಕಕ್ಕೆ ಹೋಗಿದ್ದಾರೆ. ತಬ್ಬಲಿಯಾದ ಬಾಲಕನನ್ನು ಸಂತೈಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ.

ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕಿನ ಎತ್ತಿನಹಳ್ಳಿಯ ಒಂದೇ ಕುಟುಂಬ (ಎರಡು ಮನೆ)ದ 12 ಜನರು ಸೋಮವಾರ ಕೂರ್ಮಗಡ ಜಾತ್ರೆಗೆ ತೆರಳಿದ್ದರು. ಅವರಲ್ಲಿ ಬದುಕುಳಿದ ಗಣೇಶನ ಮನೆಯ ಎಲ್ಲರೂ ಮೃತಪಟ್ಟರೆ, ಇನ್ನೊಂದು ಮನೆಯ ಜಾತ್ರೆಗೆ ಬಾರದೆ ಇದ್ದ ಒಬ್ಬರನ್ನು ಬಿಟ್ಟರೆ ಎಲ್ಲರೂ ನೀರು ಪಾಲಾಗಿದ್ದಾರೆ. 

ಈ ಘಟನೆಯಲ್ಲಿ ನಾಪತ್ತೆಯಾದವರಿಗಾಗಿ ಇಂಡಿಯನ್ ಕೋಸ್ಟಲ್ ಗಾರ್ಡ್ ಹಾಗೂ ನೇವಿಯಿಂದ ಶೋಧ ಕಾರ್ಯ ನಡೆಸಲಾಗುತ್ತಿದೆ. 

ಪರಶುರಾಮ ಬೆಳಗಲಕೊಪ್ಪ, ಪತ್ನಿ ಭಾರತಿ, ಹೆಣ್ಣು ಮಕ್ಕಳಾದ ಸಂಜೀವಿನಿ ಮತ್ತು ಸೌಜನ್ಯ, ಗಂಡು ಮಕ್ಕಳಾದ ಸಂದೀಪ ಹಾಗೂ ಗಣೇಶ ಜಾತ್ರೆಗೆ ತೆರಳಿದ್ದು, ಇವರಲ್ಲಿ ಗಣೇಶ ಮಾತ್ರ ಬದುಕಿದ್ದಾನೆ. ಪರಶುರಾಮನ ಸಹೋದರನ ಪತ್ನಿ ನಿರ್ಮಲಾ ಸೋಮಪ್ಪ ಬೆಳವಲಕೊಪ್ಪ, ಮಕ್ಕಳಾದ ಕಿರಣ, ಅರುಣ, ಕೀರ್ತಿ ನೀರು ಪಾಲಾಗಿದ್ದಾರೆ. ಪರಶುರಾಮನ ಸಹೋದರ ಸೋಮಪ್ಪ ಊರಲ್ಲೇ ಇದ್ದುದರಿಂದ ಬಚಾವಾಗಿದ್ದಾನೆ.

ಅಯ್ಯಪ್ಪನ ಪ್ರಸಾದ ನೀಡಲು ಬಂದವರು

ಕನಕ ಎಂಬಾತ ಈ ಕುಟುಂಬದ ಸಂಬಂಧಿ. ಈತ ಇಲ್ಲಿನ ಬೋಟ್‌ನಲ್ಲಿ ಕೆಲಸಕ್ಕಿದ್ದ. ಪರಶುರಾಮ ಬೆಳಗಲಕೊಪ್ಪ ಶಬರಿಮಲೆ ಯಾತ್ರೆಗೆ ಹೋಗಿ ಊರಿಗೆ ಮರಳಿದ್ದ. ಕನಕನಿಗೆ ಪ್ರಸಾದ ಕೊಟ್ಟು ಬರೋಣ ಎಂದು ತನ್ನ ಪತ್ನಿ ಮಕ್ಕಳು, ತಮ್ಮನ ಪತ್ನಿ ಹಾಗೂ ಮಕ್ಕಳನ್ನು ಒಟ್ಟು 10 ಜನರೊಂದಿಗೆ ಕಾರವಾರಕ್ಕೆ ಬರುತ್ತಿದ್ದ. ಆದರೆ ಜಾತ್ರೆಯ ಬಗ್ಗೆ ಇವರಿಗೂ ಏನೂ ಗೊತ್ತಿರಲಿಲ್ಲ. ಅಂಕೋಲಾ ಬಳಿ ಬಂದು ಪರಶುರಾಮ ತನ್ನ ಸಂಬಂಧಿ ಕನಕನಿಗೆ ದೂರವಾಣಿ ಕರೆ ಮಾಡಿದಾಗ ‘ಇಂದು ಜಾತ್ರೆ ಇದೆ. ಹೋಗಿ ಆಮೇಲೆ ಮನೆಗೆ ಬರೋಣ’ ಎಂದ. ‘ಜಾತ್ರೆಗೆ ಬೇಡ. ನಿಮ್ಮ ಮನೆಗೆ ಬರುತ್ತೇವೆ’ ಎಂದರೂ ಕನಕ ಜಾತ್ರೆಗೆ ಬರುವಂತೆ ಒತ್ತಾಯಿಸಿದಾಗ ಸಮ್ಮತಿಸಿದ್ದಾರೆ. ನಡುವೆ ರಾಕ್‌ ಗಾರ್ಡನ್‌ಗೆ ಭೇಟಿ ನೀಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

ಬಚಾವು ಮಾಡಿದ್ದು ಶಾಸಕಿ ರೂಪಾಲಿ ನಾಯ್ಕ: ಎಲ್ಲರೂ ಸೇರಿ ಕೂರ್ಮಗಡ ನರಸಿಂಹ ಜಾತ್ರೆಯಲ್ಲಿ ಖುಷಿ ಪಟ್ಟು ಮರಳುವಾಗ ದುರಂತ ಉಂಟಾಗಿದೆ. ಬೋಟಿನಲ್ಲಿದ್ದ ಎಲ್ಲರೂ ನೀರಿನಲ್ಲಿ ಬಿದ್ದಾಗ ಶಾಸಕಿ ರೂಪಾಲಿ ನಾಯ್ಕ ತಮ್ಮ ಬೋಟಿಗೆ ಸಿಕ್ಕವರನ್ನು ಹತ್ತಿಸಿಕೊಂಡಿದ್ದಾರೆ. ಆ ಸಂದರ್ಭದಲ್ಲಿ ಗಣೇಶ, ಕನಕ ಹಾಗೂ ಕನಕನ ಪತ್ನಿ ಅವರು ರೂಪಾಲಿ ಅವರಿದ್ದ ಬೋಟ್‌ ಏರಿದ್ದರಿಂದ ಬಚಾವಾಗಿದ್ದಾರೆ. ಆ ಸಂದರ್ಭದಲ್ಲಿ ಈ ಕುಟುಂಬದ ಜತೆ ಯಾರಿದ್ದರು, ಅವರು ಏನಾದರು ಎಂಬ ಮಾಹಿತಿಯೂ ಇರಲಿಲ್ಲ. ಆದರೆ ಗಣೇಶನ ಆಕ್ರಂದನ ಮುಗಿಲು ಮುಟ್ಟಿತ್ತು. ತನ್ನ ತಾಯಿ ಹಾಗೂ ಇನ್ನಿತರರನ್ನು ನೆನೆದು ನೆನೆದು ಆತ ಅಳುತ್ತಿದ್ದ. ಶಾಸಕಿ ರೂಪಾಲಿ ನಾಯ್ಕ ಸಮಾಧಾನ ಪಡಿಸಲು ಪ್ರಯತ್ನಿಸಿದರು. ಆದರೆ ಆತನ ಅಳು ನಿಲ್ಲುತ್ತಲೇ ಇರಲಿಲ್ಲ. ಕಾರವಾರದಿಂದ ಹೊರಟಿದ್ದ ಕನಕ ಮತ್ತು ಆತನ ಪತ್ನಿಯನ್ನು ರಕ್ಷಿಸಲಾಗಿದೆ. ಆದರೆ ಅವರ ಜೊತೆಯಲ್ಲಿ ಬಂದಿದ್ದ 9 ಜನರು ಸಮುದ್ರ ಪಾಲಾಗಿದ್ದಾರೆ.

ಪರಶುರಾಮನ ಮನೆಯಲ್ಲಿ ಬಾಲಕ ಗಣೇಶ ಬದುಕಿದ್ದರೆ, ಸೋಮಪ್ಪ ಜಾತ್ರೆಗೆ ಬರದೆ ಬಚಾವಾಗಿದ್ದರೂ ಮನೆಯಲ್ಲಿದ್ದ ಎಲ್ಲರನ್ನೂ ಕಳೆದುಕೊಂಡಿದ್ದಾನೆ. ಕಾರವಾರಕ್ಕೆ ಮಂಗಳವಾರ ಬಂದ ಸೋಮಪ್ಪ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಮಾತೆ ಹೊರಡುತ್ತಿರಲಿಲ್ಲ. ಆದರೆ ಗಣೇಶ ನಿರಂತರವಾಗಿ ಅಮ್ಮಾ ಅಮ್ಮಾ ಅಮ್ಮಾ ಎಂದು ಅತ್ತು ಅತ್ತು ಧ್ವನಿ ಕ್ಷೀಣಗೊಂಡಿತ್ತು.

ಹಾವೇರಿಯ ಶಿಗ್ಗಾವಿಯಿಂದ ಈ ಎರಡು ಕುಟುಂಬಗಳ ಆಪ್ತರು, ಸಂಬಂಧಿಗಳು ಸೇರಿ ಊರಿನ ಸುಮಾರು 50ರಷ್ಟು ಜನರು ಮಂಗಳವಾರ ಸಂಜೆ ಆಗಮಿಸಿದ್ದಾರೆ. ಗಣೇಶನನ್ನು ಸಮಾಧಾನ ಪಡಿಸಲು ಯಾರಿಂದಲೂ ಸಾಧ್ಯವಾಗುತ್ತಿಲ್ಲ. ಹಲವರ ಮೃತದೇಹ ಪತ್ತೆಯಾಗಿದೆ. ಕೆಲವರ ದೇಹ ಪತ್ತೆಯಾಗಬೇಕಿದೆ. ಕಾರವಾರದ ಜಾತ್ರೆ ಹಾವೇರಿಯನ್ನೂ ತಲ್ಲಣಗೊಳಿಸಿದೆ.

ವರದಿ : ವಸಂತಕುಮಾರ್‌ ಕತಗಾಲ

Latest Videos
Follow Us:
Download App:
  • android
  • ios