ಪ್ರತಿ ವಾರ 400ಕ್ಕೂ ಹೆಚ್ಚು ಜನ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್‌) ಸೋಂಕಿಗೆ ತುತ್ತಾಗುವ ಅಂದಾಜು  ‘ಲೈಪೊಸೋಮಲ್‌ ಆ್ಯಂಫೋಟೆರಿಸಿನ್‌ ಬಿ’ ಔಷಧದ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ರಾಜ್ಯ ಸರ್ಕಾರದಿಂದ ಹೈಕೋರ್ಟ್‌ಗೆ ಮಾಹಿತಿ

ಬೆಂಗಳೂರು (ಮೇ.25): ರಾಜ್ಯದಲ್ಲಿ ಪ್ರತಿ ವಾರ 400ಕ್ಕೂ ಹೆಚ್ಚು ಜನ ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್‌) ಸೋಂಕಿಗೆ ತುತ್ತಾಗುವ ಅಂದಾಜಿದೆ. ಇದರ ಚಿಕಿತ್ಸೆಗೆ ಅಗತ್ಯವಿರುವ ‘ಲೈಪೊಸೋಮಲ್‌ ಆ್ಯಂಫೋಟೆರಿಸಿನ್‌ ಬಿ’ ಔಷಧದ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ವಿವರಿಸಿದೆ.

ಕೊರೋನಾ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿದಂತೆ ಸಲ್ಲಿಸಿರುವ ಲಿಖಿತ ಹೇಳಿಕೆಯಲ್ಲಿ ಸರ್ಕಾರ ಈ ವಿಷಯ ತಿಳಿಸಿದೆ.

ಬ್ಲ್ಯಾಕ್‌ ಆಯ್ತು ಈಗ ಅದಕ್ಕೂ ಭಯಾನಕ ವೈಟ್ ಫಂಗಸ್ ಕಾಟ : ಯಾರಿಗೆ ಅಪಾಯ ... 

ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಪ್ರಕರಣಗಳು ಪತ್ತೆಯಾಗುತ್ತಿದ್ದಂತೆ ಮೇ 12ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕಪ್ಪು ಶಿಲೀಂಧ್ರ ರೋಗ ತಗುಲಿರುವವರಿಗೆ ಕನಿಷ್ಠ 10 ರಿಂದ 12 ದಿನ ಚಿಕಿತ್ಸೆ ನೀಡಬೇಕಾದ ಅಗತ್ಯವಿದೆ. ಈ ಚಿಕಿತ್ಸಾ ಅವಧಿಯಲ್ಲಿ ಪ್ರತಿ ರೋಗಿಗೆ 50 ವಯಲ್‌ಗಳು ಅಗತ್ಯವಿರಲಿವೆ. ಈ ಅಧಾರದಲ್ಲಿ 20 ಸಾವಿರ ವಯಲ್‌ಗಳನ್ನು ಪೂರೈಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ ಎಂದು ತಿಳಿಸಿದೆ.

ಅಲ್ಲದೆ, ಖಾಸಗಿ ಔಷಧ ತಯಾರಕರಾದ ಮೈಲಾನ್‌ ಫಾರ್ಮಾಸ್ಯುಟಿಕಲ್ಸ್‌ನಿಂದ 450, ಭಾರತ್‌ ಸೀರಮ್‌ ಮತ್ತು ವಾಕ್ಸಿನ್ಸ್‌ ಸಂಸ್ಥೆಯಿಂದ 600 ಸೇರಿ ಒಟ್ಟು 1,050 ವಯಲ್‌ಗಳನ್ನು ಕರ್ನಾಟಕ ರಾಜ್ಯ ಔಷಧ ಪೂರೈಕೆ ನಿಗಮದ ಮುಖಾಂತರ ಖರೀದಿಗೆ ಮುಂದಾಗಿದ್ದೇವೆ. ಮೇ 17ಕ್ಕೆ ಒಟ್ಟು 450 ವಯಲ್‌ಗಳನ್ನು ಸ್ವೀಕರಿಸಿದ್ದು ರಾಜ್ಯ ವಾರ್‌ರೂಮ್‌ ಮೂಲಕ ನಿರ್ವಹಣೆ ಮಾಡಲಾಗುತ್ತಿದೆ ಎಂದು ಲಿಖಿತ ಹೇಳಿಕೆಯಲ್ಲಿ ತಿಳಿಸಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona