* ವಿಶ್ವವನ್ನೇ ವ್ಯಾಪಿಸಿದ್ದ ಕೊರೋನಾ ವೈರಸ್* ಕೊರೋನಾದಿಂದ ಸತ್ತವರ ಸಂಖ್ಯೆ ಮುಚ್ಚಿಡುತ್ತಿರುವ ಬಿಜೆಪಿ: ಆಶಿಕ್‌* ವಸ್ತು ಸ್ಥಿತಿ ಒಪ್ಪಿಕೊಂಡು ಮೃತರ ಕುಟುಂಬಕ್ಕೆ ಪರಿಹಾರ ನೀಡಿ

ಬೆಂಗಳೂರು(ಮೇ.16): ಬಿಜೆಪಿಯು ಕೊರೋನಾದಿಂದ ಆದ ಸಾವುಗಳ ಸಂಖ್ಯೆಯನ್ನು ಮುಚ್ಚಿಡುತ್ತಿರುವುದು ವಿಶ್ವ ಆರೋಗ್ಯ ಸಂಸ್ಥೆಯ ವರದಿಯಿಂದ ಬಹಿರಂಗಗೊಂಡಿದೆ. ಇನ್ನಾದರೂ ವಾಸ್ತವ ಸಾವಿನ ಸಂಖ್ಯೆಯನ್ನು ಬಹಿರಂಗಗೊಳಿಸಿ ಪ್ರತಿಯೊಂದು ಕುಟುಂಬಕ್ಕೂ ತಲಾ .4 ಲಕ್ಷ ಪರಿಹಾರ ನೀಡಬೇಕು ಎಂದು ರಾಜ್ಯ ಯುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆಶಿಕ್‌ಗೌಡ ಒತ್ತಾಯಿಸಿದ್ದಾರೆ.

ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರವು ದೇಶದಲ್ಲಿ ಕೊರೋನಾದಿಂದ 5.27 ಲಕ್ಷ ಮಂದಿ ಮಾತ್ರ ಸಾವನ್ನಪ್ಪಿರುವುದಾಗಿ ಸುಳ್ಳು ಹೇಳಿದೆ. 40 ಲಕ್ಷ ಮಂದಿ ಸಾವನ್ನಪ್ಪಿರುವುದು ವಿಶ್ವ ಸಂಸ್ಥೆ ವರದಿಯಿಂದ ಬಹಿರಂಗಗೊಂಡಿದೆ. ರಾಜ್ಯದಲ್ಲೂ ಕೇವಲ 40 ಸಾವಿರ ಮಂದಿ ಮೃತಪಟ್ಟಿರುವುದಾಗಿ ಹೇಳುತ್ತಿದ್ದು, ಕನಿಷ್ಠ 50 ಸಾವಿರ ಮಂದಿ ಮೃತಪಟ್ಟಿರುತ್ತಾರೆ. ಅಷ್ಟೂಮಂದಿಗೆ ತಲಾ .4 ಲಕ್ಷ ಪರಿಹಾರ ನೀಡಬೇಕು. ಇಲ್ಲದಿದ್ದರೆ ಯುವ ಕಾಂಗ್ರೆಸ್‌ನಿಂದ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ರಾಹುಲ್‌ಗಾಂಧಿ ಎಚ್ಚರಿಸುತ್ತಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೋನಾ ನಿಯಂತ್ರಣದಲ್ಲಿ ವಿಫಲವಾದವು. ಇದರಿಂದ ಆಕ್ಸಿಜನ್‌, ಚಿಕಿತ್ಸೆ ದೊರೆಯದೆ ಜನರು ಹಾದಿ ಬೀದಿಯಲ್ಲೇ ನರಳಾಡಿ ಸಾಯುವಂತಾಯಿತು. ರಾಜ್ಯದ ಚಾಮರಾಜ ನಗರದ ಒಂದೇ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಇಲ್ಲದೆ 34 ಮಂದಿ ನರಳಾಡಿ ಸತ್ತರು. ಇಂತಹ ವೈಫಲ್ಯಗಳನ್ನು ಮರೆಮಾಚಲು ಬಿಜೆಪಿ ಸರ್ಕಾರ ಸಾವುಗಳನ್ನು ಮುಚ್ಚಿಡುವ ಹೀನ ಕೃತ್ಯಕ್ಕೆ ಇಳಿದಿದೆ ಎಂದು ಕಿಡಿಕಾರಿದರು.

ಜತೆಗೆ ಈಗಿನ ಬೆಲೆ ಏರಿಕೆಗಳಲ್ಲಿ ಸರ್ಕಾರ ನೀಡುವ .50 ಸಾವಿರ ಪರಿಹಾರದಿಂದ ಯಾರ ಜೀವನ ಸುಧಾರಿಸಲು ಸಾಧ್ಯ? ಇನ್ನು ರಾಜ್ಯವು 40 ಸಾವಿರ ಮಂದಿ ಮೃತಪಟ್ಟಿದ್ದರೆ 27 ಸಾವಿರ ಮಂದಿಗೆ ಮಾತ್ರ ಪರಿಹಾರ ನೀಡಿದೆ. ಇದರಲ್ಲೂ ಹಲವರಿಗೆ ಚೆಕ್‌ಬೌನ್ಸ್‌ ಆಗಿದೆ. ನಿರುದ್ಯೋಗ, ಬೆಲೆ ಏರಿಕೆಯಿಂದ ನರಳುತ್ತಿರುವ ಜನರಿಗೆ ಬೋಗಸ್‌ ಪ್ಯಾಕೇಜ್‌ ಘೋಷಿಸಿ ಕೈಚೆಲ್ಲಿರುವ ಕೇಂದ್ರ, ರಾಜ್ಯ ಸರ್ಕಾರಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು. ಯುವ ಕಾಂಗ್ರೆಸ್‌ ಬೆಂಗಳೂರು ಕೇಂದ್ರ ಅಧ್ಯಕ್ಷ ಅಗಸ್ಟಿನ್‌, ಯುವ ಕಾಂಗ್ರೆಸ್‌ ರಾಜ್ಯ ಕಾರ್ಯದರ್ಶಿ ಇಲಾಯಿ ಹಾಜರಿದ್ದರು.