ನವದೆಹಲಿ[ಫೆ.06]: ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಕಳೆದ ವರ್ಷದ ರೈಲ್ವೆ ಬಜೆಟ್‌ನಲ್ಲಿ ನೀಡಿದ್ದಕ್ಕಿಂತ ಶೇ.24ರಷ್ಟುಅಂದರೆ ಒಟ್ಟಾರೆ .3085 ಕೋಟಿ ಅನುದಾನವನ್ನು ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿದೆ. ಜತೆಗೆ, ಹೊಸ ಆರು ರೈಲುಗಳೂ ರಾಜ್ಯಕ್ಕೆ ಸಿಗಲಿವೆ ಎಂದು ರೈಲ್ವೇ ಖಾತೆಯ ರಾಜ್ಯ ಸಚಿವ ಸುರೇಶ್‌ ಅಂಗಡಿ ಹೇಳಿದ್ದಾರೆ.

ರೈಲ್ವೇ ಭವನದಲ್ಲಿ ಸಂಸದರಾದ ಪ್ರತಾಪ್‌ ಸಿಂಹ ಮತ್ತು ಬಿ.ವೈ.ರಾಘವೇಂದ್ರ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ರಾಜ್ಯದಲ್ಲಿನ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ರಾಜ್ಯಕ್ಕೆ ಅನುದಾನ ನೀಡಲಾಗಿದೆ. ಆದರೆ ಯೋಜನಾವಾರು ಅನುದಾನದ ಬಗ್ಗೆ ಮಾಹಿತಿ ಸದ್ಯ ನಮ್ಮ ಬಳಿ ಇಲ್ಲ. ಈ ಅಂಕಿ-ಅಂಶಗಳನ್ನು ಒಳಗೊಂಡಿರುವ ‘ಗುಲಾಬಿ ಪುಸ್ತಕ’(ಪಿಂಕ್‌ಬುಕ್‌) ಇನ್ನೂ ನಮ್ಮ ಕೈ ಸೇರಿಲ್ಲ ಎಂದು ಹೇಳಿದರು.

2022ರೊಳಗೆ ರಾಜ್ಯದಲ್ಲಿನ ಎಲ್ಲ ಡಬ್ಲಿಂಗ್‌ ಮತ್ತು ವಿದ್ಯುದೀಕರಣ ಕಾಮಗಾರಿಗಳು ಮುಕ್ತಾಯಗೊಳ್ಳಲಿದೆ. ಆ ಬಳಿಕ ರಾಜ್ಯದಲ್ಲಿ ವೇಗ ಮತ್ತು ಅತಿ ವೇಗದ ರೈಲುಗಳನ್ನು ಓಡಿಸಲು ಕ್ರಮ ಕೈಗೊಳ್ಳಲಿದ್ದೇವೆ. ಈ ವರ್ಷ ರಾಜ್ಯಕ್ಕೆ 6 ಹೊಸ ರೈಲುಗಳು ಸಿಗಲಿದ್ದು ಇವುಗಳನ್ನು ಯಾವ ಮಾರ್ಗದಲ್ಲಿ ಓಡಿಸಬೇಕು ಎಂದು ಮುಂದಿನ ದಿನಗಳಲ್ಲಿ ನಿರ್ಧರಿಸಲಾಗುವುದು ಎಂದರು ಅಂಗಡಿ.

ಮೈಸೂರಿನ ನಾಗನಹಳ್ಳಿಯಲ್ಲಿ ಸ್ಯಾಟಲೈಟ್‌ ರೈಲ್ವೆ ನಿಲ್ದಾಣ ಸ್ಥಾಪಿಸಲು ಅನುಮೋದನೆ ನೀಡಲಾಗಿದೆ. ಕೋಲಾರ ಕೋಚ್‌ ಫ್ಯಾಕ್ಟರಿ ಕಾಮಗಾರಿಗೆ .400 ಕೋಟಿ ಹೆಚ್ಚು ಹಣ ನೀಡಲಾಗಿದೆ. ಶಿವಮೊಗ್ಗದಲ್ಲಿ ಕೋಚ್‌ ಡಿಪೋ ಸ್ಥಾಪಿಸಲಾಗುವುದು ಎಂದು ಅಂಗಡಿ ಮಾಹಿತಿ ನೀಡಿದರು.

ಬೆಳಗಾವಿ-ಧಾರವಾಡ ನೇರ ರೈಲು ಮಾರ್ಗ ಘೋಷಿಸಲಾಗಿದೆ. ಮೈಸೂರು-ಕುಶಾಲನಗರ ಮಾರ್ಗಕ್ಕೆ ಅನುಮತಿ ನೀಡಲಾಗಿದೆ, ಬೀದರ್‌-ನಾಂದೇಡ್‌ ನಡುವಿನ 155 ಕಿ.ಮೀ. ಕಾಮಗಾರಿಗೆ ಒಪ್ಪಿಗೆ ಸೂಚಿಸಲಾಗಿದೆ. ಲೋಂಡಾ-ಬೆಂಗಳೂರು ರೈಲು ಮಾರ್ಗದ ಡಬ್ಲಿಂಗ್‌ ಅನ್ನು ಪ್ರಕಟಿಸಲಾಗಿದೆ. ಶಿವಮೊಗ್ಗ-ತಿರುಪತಿ, ಶಿವಮೊಗ್ಗ-ಚೆನ್ನೈ ರೈಲಿಗೂ ಅನುಮತಿ ನೀಡಲಾಗಿದೆ. ಜತೆಗೆ, ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ಮಧ್ಯೆ.1100 ಕೋಟಿಗಳಲ್ಲಿ ರೈಲ್ವೇ ಮಾರ್ಗ ನಿರ್ಮಾಣವನ್ನು ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಅಂಗಡಿ ಹೇಳಿದರು.

ಬೆಂಗಳೂರು ಉಪನಗರ ರೈಲಿಗೆ ಕೇಂದ್ರದ ಅನುದಾನ ಬರೋದು ಅನುಮಾನ?

ಇದೇ ವೇಳೆ, ಹುಬ್ಬಳ್ಳಿ-ಬೆಂಗಳೂರಿನ ಮಧ್ಯೆ ರೈಲು ಪ್ರಯಾಣದ ಅವಧಿಯನ್ನು 5 ಗಂಟೆಗೆ ಇಳಿಸಲಾಗುವುದು ಎಂದು ಅಂಗಡಿ ಮಾಹಿತಿ ನೀಡಿದರು.

- 2022ರೊಳಗೆ ಎಲ್ಲ ಡಬ್ಲಿಂಗ್‌, ವಿದ್ಯುದೀಕರಣ ಕಾಮಗಾರಿ ಮುಕ್ತಾಯ

- ಕೋಲಾರ ಕೋಚ್‌ ಫ್ಯಾಕ್ಟರಿ ಕಾಮಗಾರಿಗೆ .400 ಕೋಟಿ ಅನುದಾನ

- ಮೈಸೂರಲ್ಲಿ ಸ್ಯಾಟಲೈಟ್‌ ರೈಲ್ವೆ ನಿಲ್ದಾಣ, ಶಿವಮೊಗ್ಗದಲ್ಲಿ ಕೋಚ್‌ ಡಿಪೋ

- ಬೆಳಗಾವಿ-ಧಾರವಾಡ ನೇರ ಮಾರ್ಗ, ಮೈಸೂರು-ಕುಶಾಲನಗರ ಮಾರ್ಗಕ್ಕೆ ಅನುಮತಿ

- ಹೊಸ 6 ಹೊಸ ರೈಲುಗಳನ್ನು ಎಲ್ಲಿ ಓಡಿಸಬೇಕೆಂದು ಮುಂದೆ ತೀರ್ಮಾನ