ಕರ್ನಾಟಕದಲ್ಲಿ ಇನ್ನೂ ನಾಲ್ಕು ದಿನ ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ಮಳೆಯಾಗಲಿದೆ ಎಂದು ತಿಳಿಸಿದೆ.
ಬೆಂಗಳೂರು (ಏ.21): ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದಿರುವ ವಾತಾವರಣ ಮುಂದುವರಿಯಲಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದಲ್ಲಿ ಮಳೆ ಆರ್ಭಟಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (India Meteorological Department) ಹೇಳಿದೆ. ಬಂಗಾಳ ಕೊಲ್ಲಿ (Bay of Bengal) ಹಾಗೂ ಅರಬ್ಬಿ ಸಮುದ್ರದಲ್ಲಿ ಏಕಕಾಲದಲ್ಲಿ ಉಂಟಾಗಿರುವ ಮೇಲ್ಮೈ ಸುಳಿಗಾಳಿಯಿಂದಾಗಿ ದಕ್ಷಿಣದ ಬಹುತೇಕ ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಈಗಾಗಲೇ ಸಣ್ಣ ಪ್ರಮಾಣದ ಮಳೆಯಾಗುತ್ತಿದೆ. ಆದರೆ, ಸುಳಿಗಾಳಿಯ ಪರಿಣಾಮದಿಂದಾಗಿ ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನಗಳ ಕಾಲ ಮುಂದುವರಿಯಲಿದೆ. ಬುಧವಾರ ವಿವಿಧೆಡೆ ಭಾರಿ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಹಾಸನದಲ್ಲಿ ಇಂದಿನಿಂದ ಏಪ್ರಿಲ್ 24ರವರೆಗೆ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಏಪ್ರಿಲ್ 22 ರಿಂದ 24ರವರೆಗೆ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ ನಾಲ್ಕು ದಿನಗಳ ಕಾಲ ಮೋಡ ಮುಸುಕಿದ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಗುರುವಾರ ಸಂಜೆಯ ವೇಳೆಗೆ ತುಂತುರು ಮಳೆಯಾಗುವ ಸಾಧ್ಯತೆಯೂ ಇದೆ.
ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಬಹುತೇಕ ರಾಜ್ಯಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಬೀದರ್, ಕಲಬುರಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡದಲ್ಲಿ ಮುಂದಿನ 72 ಗಂಟೆ ಯೆಲ್ಲೋ ಅಲರ್ಟ್ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರಿನಲ್ಲಿ ಇನ್ನೂ ಒಂದು ವಾರ ಮಳೆ ನಿಲ್ಲುವ ಲಕ್ಷಣಗಳಿಲ್ಲ. ಮೋಡ ಮುಸುಕಿದ ವಾತಾವರಣ ಇರುವುದು ನಿಶ್ಚಿತ ಎಂದು ಮಾಹಿತಿ ನೀಡಿದೆ.
ಏಪ್ರಿಲ್ 14ರಿಂದ 20ರವರೆಗೆ ರಾಜ್ಯದಲ್ಲಿ ವಾಡಿಕೆಯ 8 ಮಿ.ಮೀ ಬದಲಾಗಿ 28 ಮಿ.ಮೀ ಮಳೆ ಸುರಿದಿದೆ.ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 34.1 ಡಿಗ್ರಿ ಸೆಲ್ಸಿಯಸ್ ಇದ್ದು, ಕನಿಷ್ಠ ಉಷ್ಣಾಂಶ 23.2 ಡಿಗ್ರಿ ಸೆಲ್ಸಿಯಸ್ ಇದೆ.
ಅಕಾಲಿಕ ಮಳೆಗೆ ನೆಲಕಚ್ಚಿದ ಮೆಕ್ಕೆಜೋಳ: ಕೋಟೆನಾಡಿನ ರೈತರ ಬದುಕು ಅತಂತ್ರ
ಏಪ್ರಿಲ್ 19, 21, 22 ಮತ್ತು 23 ರಂದು ಅಸ್ಸಾಂ-ಮೇಘಾಲಯದಲ್ಲಿ ಚದುರಿದಂತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. 19ನೇ ಏಪ್ರಿಲ್, 2022 ರಂದು ಅಸ್ಸಾಂ-ಮೇಘಾಲಯ ಮತ್ತು ಮಣಿಪುರ-ಮಿಜೋರಾಂನಲ್ಲಿ ಗುಡುಗು ಸಹಿತ (ಗಾಳಿಯ ವೇಗ ಗಂಟೆಗೆ 50-60 ಕಿಮೀ ಇರಲಿದೆ) ಮತ್ತು ಪ್ರತ್ಯೇಕ ಸ್ಥಳಗಳಲ್ಲಿ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಟ್ವೀಟ್ ಮೂಲಕ ಎಚ್ಚರಿಸಿದೆ. ಮಂದಿನ ನಾಲ್ಕು ದಿನಗಳಲ್ಲಿ ದಕ್ಷಿಣದ ಕೇರಳ ರಾಜ್ಯದಲ್ಲಿ ವ್ಯಾಪಕ ಮಳೆಯಾಗಬಹುದು ಎಂದು ಹೇಳಲಾಗಿದ್ದು, ಕರ್ನಾಟಕ , ಆಂಧ್ರ ಕರಾವಳಿ ಹಾಗೂ ತೆಲಂಗಾಣದಲ್ಲಿ ಹೆಚ್ಚಿನ ಮಳೆಯಾಗಬಹುದು ಎಂದಿದೆ.
Bengaluru Rains: ಎರಡೇ ದಿನದ ಮಳೆಗೆ ಕೆರೆಯಂತಾದ ಕೆಂಪೇಗೌಡ ಲೇಔಟ್!
ಬಂಗಾರಪೇಟೆಯಲ್ಲಿ ಈಗಾಗಲೇ ಆಲಿಕಲ್ಲು ಮಳೆ, ಕೃಷಿ ನಷ್ಟ: ಬಂಗಾರಪೇಟೆ ತಾಲೂಕಿನಲ್ಲಿ ಸೋಮವಾರ ಸಂಜೆ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ರೈತರು ಬೆಳೆದ ಮಾವು ಸೇರಿದಂತೆ ಹಲವಾರು ವಾಣಿಜ್ಯ ಬೆಳೆಗಳು ನಾಶವಾಗಿದ್ದು, ರೈತರಿಗೆ ಲಕ್ಷಾಂತರ ರೂ ನಷ್ಟಉಂಟಾಗಿದೆ. ತಾಲೂಕುನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಬಿಸಿಲಿನ ನಡುವೆ ಸಂಜೆಯಾದರೆ ಗಾಳಿಯೊಂದಿಗೆ ಮಳೆಯಾಗುತ್ತಿದೆ. ಮೊದಲ ದಿನ ಅಲಿಕಲ್ಲಿನಿಂದ ಸುರಿದ ಮಳೆಗೆ ಟೊಮೆಟೋ, ಎಲೆಕೋಸು, ಚೆಂಡೂವು, ಹಿಪ್ಪುನೇರಳೆ ಸೇರಿ ವಿವಿಧ ತರಕಾರಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ. ಸೋಮವಾರ ಸಂಜೆ ಬಿರುಗಾಳಿಯೊಂದಿಗೆ ಸುರಿದ ಮಳೆಗೆ ತಾಲ್ಲೂಕಿನಲ್ಲಿ 13.54 ಹೆಕ್ಟರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿದೆ.