ನೈಋತ್ಯ ಮಾನ್ಸೂನ್ ವಾಪಸ್ಸಾಗುತ್ತಿದ್ದರೂ, ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಮುಂದುವರಿಯಲಿದೆ. ಬಂಗಾಳಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತದ ಸಾಧ್ಯತೆಯಿದ್ದು, ಅಕ್ಟೋಬರ್ 2ರಂದು ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗಲಿದೆ.
ಬೆಂಗಳೂರು (ಸೆ.30): ನೈಋತ್ಯ ಮಾನ್ಸೂನ್ ಮಾರುತಗಳು ವಾಪಸ್ಸಾಗುತ್ತಿರುವ ನಡುವೆಯೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 3 ದಿನಗಳ ಕಾಲ ವಿವಿಧೆಡೆ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ವಿಶೇಷವಾಗಿ ಅಕ್ಟೋಬರ್ 2ರಂದು ಉತ್ತರ ಮತ್ತು ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ 'ಗುಡುಗು ಸಹಿತ ಸಾಧಾರಣ ಮಳೆಯಾಗುವ' ಮತ್ತು ಗಂಟೆಗೆ 30-40 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆಯನ್ನು ನೀಡಲಾಗಿದೆ.
ಸೆಪ್ಟೆಂಬರ್ 30ರಂದು, ನೈಋತ್ಯ ಮಾನ್ಸೂನ್ ಮಾರುತಗಳು ವಾಪಸ್ ಹೋಗುವಾಗ ವೆರಾವಲ್, ಭರೂಚ್, ಉಜ್ಜಯಿನಿ, ಝಾನ್ಸಿ, ಷಹಜಹಾನ್‌ಪುರ ಮೂಲಕ ಹಾದುಹೋಗುತ್ತಿದೆ. ಗುಜರಾತ್ ಕರಾವಳಿ, ಕಚ್ ಕೊಲ್ಲಿ ಹಾಗೂ ನೆರೆಹೊರೆಯಲ್ಲಿ ಗುರುತಿಸಲಾದ ಕಡಿಮೆ ಒತ್ತಡದ ಪ್ರದೇಶವು ಪಶ್ಚಿಮ-ವಾಯುವ್ಯಕ್ಕೆ ಚಲಿಸುತ್ತಿದ್ದು, ಮುಂದಿನ 12 ಗಂಟೆಗಳಲ್ಲಿ ಇದು ವಾಯುಭಾರ ಕುಸಿತವಾಗಿ ತೀವ್ರಗೊಂಡು, ಈಶಾನ್ಯ ಅರೇಬಿಯನ್ ಸಮುದ್ರದ ಕಡೆಗೆ ಚಲಿಸುವ ಸಾಧ್ಯತೆಯಿದೆ.
ಬಂಗಾಳ ಕೊಲ್ಲಿಯಲ್ಲಿ ಹೊಸ ವಾಯುಭಾರ ಕುಸಿತದ ಭೀತಿ:
ಕರ್ನಾಟಕದ ಮಳೆಯ ಮೇಲೆ ಪರಿಣಾಮ ಬೀರಬಹುದಾದ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಲಿರುವ ಹೊಸ ವ್ಯವಸ್ಥೆ. ಉತ್ತರ ಅಂಡಮಾನ್ ಸಮುದ್ರದಲ್ಲಿ ಇಂದು (ಸೆ.30) ಹೊರಹೊಮ್ಮಲಿರುವ ಮೇಲ್ಮೈ ಸುಳಿಗಾಳಿಯ ಪ್ರಭಾವದಿಂದಾಗಿ, ಅಕ್ಟೋಬರ್ 1ರ ಸುಮಾರಿಗೆ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ 'ಕಡಿಮೆ ಒತ್ತಡದ ಪ್ರದೇಶ' ರೂಪುಗೊಳ್ಳುವ ಸಾಧ್ಯತೆಯಿದೆ. ಇದು ಪಶ್ಚಿಮ-ವಾಯುವ್ಯ ದಿಕ್ಕಿಗೆ ಚಲಿಸಿ, ಅಕ್ಟೋಬರ್ 2ರ ಸುಮಾರಿಗೆ 'ವಾಯುಭಾರ ಕುಸಿತವಾಗಿ ತೀವ್ರಗೊಳ್ಳುವ' ನಿರೀಕ್ಷೆಯಿದೆ. ಈ ವ್ಯವಸ್ಥೆಯು ಅಕ್ಟೋಬರ್ 3ರ ಬೆಳಗಿನ ಜಾವದಲ್ಲಿ ದಕ್ಷಿಣ ಒಡಿಶಾ-ಉತ್ತರ ಆಂಧ್ರಪ್ರದೇಶದ ಕರಾವಳಿಯನ್ನು ದಾಟುವ ಸಾಧ್ಯತೆಯಿದೆ.
ಮುಂದಿನ ಮೂರು ದಿನಗಳ ಕರ್ನಾಟಕದ ಹವಾಮಾನ ಮುನ್ಸೂಚನೆ:
ಸೆಪ್ಟೆಂಬರ್ 30ರ ಹವಾಮಾನ:
ಕರಾವಳಿ: ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವೆಡೆ ಹಗುರದಿಂದ ಸಾಧಾರಣ ಮಳೆ.
ಉತ್ತರ ಒಳನಾಡು: ಬೆಳಗಾವಿ, ಧಾರವಾಡದಲ್ಲಿ ಸಾಧಾರಣ ಮಳೆ, ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆ. ಎಲ್ಲೆಡೆ 30-40 ಕಿ.ಮೀ ವೇಗದ ಗಾಳಿ ಇರಲಿದೆ.
ದಕ್ಷಿಣ ಒಳನಾಡು: ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಒಂದು ಅಥವಾ ಎರಡು ಸ್ಥಳಗಳಲ್ಲಿ ಸಾಧಾರಣ ಮಳೆ, ಬೆಂಗಳೂರು ನಗರ ಸೇರಿದಂತೆ ಉಳಿದೆಡೆ ಹಗುರ ಮಳೆ.
ಅಕ್ಟೋಬರ್ 1ರ ಹವಾಮಾನ:
ಕರಾವಳಿ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ.
ಉತ್ತರ ಒಳನಾಡು: ಬೆಳಗಾವಿ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆ.
ದಕ್ಷಿಣ ಒಳನಾಡು: ಮಲೆನಾಡು ಭಾಗದಲ್ಲಿ ಸಾಧಾರಣ ಮಳೆ, ಉಳಿದ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಅಕ್ಟೋಬರ್ 2ರ ಹವಾಮಾನ (ಹೆಚ್ಚಿನ ಮಳೆಯ ಸಾಧ್ಯತೆ): ಈ ದಿನ ರಾಜ್ಯದಾದ್ಯಂತ ಮಳೆ ಹೆಚ್ಚಾಗುವ ಸಂಭವವಿದೆ.
ಕರಾವಳಿ: ದಕ್ಷಿಣ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿ ಮೂರೂ ಕರಾವಳಿ ಜಿಲ್ಲೆಗಳ ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಸಾಧಾರಣ ಮಳೆ.
ಉತ್ತರ ಒಳನಾಡು: ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳ ಹಲವೆಡೆ ಗುಡುಗು ಸಹಿತ ಸಾಧಾರಣ ಮಳೆ/ಬಿರುಗಾಳಿ (30-40 ಕಿ.ಮೀ).
ದಕ್ಷಿಣ ಒಳನಾಡು: ಬಳ್ಳಾರಿ, ಬೆಂಗಳೂರು (ಗ್ರಾ/ನ), ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಬಿರುಗಾಳಿ (30-40 ಕಿ.ಮೀ) ಸಹಿತ ಗುಡುಗು ಮಳೆ.
ರೈತರು ಹಾಗೂ ಸಾರ್ವಜನಿಕರು ಹವಾಮಾನ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕೆಂದು ಇಲಾಖೆ ಮನವಿ ಮಾಡಿದೆ.
