ಬೆಂಗಳೂರು(ಆ.08): ಅನಾರೋಗ್ಯ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಜ್ಯ ವಕ್ಫ್ ಬೋರ್ಡ್‌ ಅಧ್ಯಕ್ಷ ಜನಾಬ್‌ ಡಾ.ಮುಹಮ್ಮದ್‌ ಯೂಸುಫ್‌ ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ನಿಧನರಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಶುಕ್ರವಾರ ಮುಂಜಾನೆ ಮುಹಮ್ಮದ್‌ ಯೂಸುಫ್‌ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಯೂಸುಫ್‌ ಅವರನ್ನು ಈ ಮೊದಲು ಕುಟುಂಬ ಸದಸ್ಯರು ಕನಕಪುರ ರಸ್ತೆಯ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯದಲ್ಲಿ ಚೇತರಿಕೆ ಕಂಡುಬರದ ಹಿನ್ನೆಲೆಯಲ್ಲಿ ಅವರನ್ನು ಕಳೆದ 10 ದಿನಗಳ ಹಿಂದೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅಲ್ಪ ಕಾಲದ ಅನಾರೋಗ್ಯದ ಹಿನ್ನೆಲೆಯಲ್ಲಿ ಮುಹಮ್ಮದ್‌ ಯೂಸುಫ್‌ ಅವರು ನಗರದ ಮಣಿಪಾಲ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಅವರು ಶುಕ್ರವಾರ ನಸುಕಿನ ಜಾವ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರ ಅಂತ್ಯಸಂಸ್ಕಾರ ಬೆಂಗಳೂರಿನ ಗೋವಿಂದಪುರದಲ್ಲಿ ಅವರೇ ನಿರ್ಮಿಸಿರುವ ಮುಝಮ್ಮಿಲ್‌ ಮಸೀದಿಯ ಕಬರ್‌ಸ್ಥಾನದಲ್ಲಿ ನಡೆಯಲಿದೆ ಎಂದು ಸದಸ್ಯ ಎನ್‌.ಕೆ.ಎಂ. ಶಾಫಿ ಸ ಆದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಿಎಂ ಸೇರಿ ಗಣ್ಯರ ಸಂತಾಪ: ಮುಹಮ್ಮದ್‌ ಯೂಸುಫ್‌ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಯೂಸುಫ್‌ ಅವರ ನಿಧನದ ಸುದ್ದಿ ದುಃಖಕರ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬ, ಬಂದುಬಳಗದ ಎಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ಗಣ್ಯರು ಟ್ವೀಟ್‌ ಮಾಡಿದ್ದಾರೆ.