ಒಕ್ಕಲಿಗ ಸ್ವಾಮೀಜಿಗೆ ಮಾರಕ ಕ್ಯಾನ್ಸರ್ ಕಾಯಿಲೆ; ಮಠ ಬಿಟ್ಟು ಎಲ್ಲಿಗೂ ಹೋಗಲಾಗಲ್ಲ!
ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ರದ್ದುಗೊಳಿಸಬೇಕೆಂಬ ಹೇಳಿಕೆ ನೀಡಿದ್ದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ಪೊಲೀಸರ ವಿಚಾರಣೆಗೆ ಹಾಜರಾಗಲು ಅಸಮರ್ಥತೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು (ಡಿ.02): ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ರದ್ದುಗೊಳಿಸಬೇಕೆಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ತಾವು ಮಾರಕ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ವೈದ್ಯರ ಸೂಚನೆಯಂತೆ ಚಿಕಿತ್ಸೆ ಪಡೆಯುತ್ತಿದ್ದೇನೆ. ಹೀಗಾಗಿ, ನಾನು ಪೊಲೀಸರ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಪೊಲೀಸರ ನೋಟೀಸ್‌ಗೆ ಉತ್ತರ ನೀಡಿದ್ದಾರೆ.
ವಕ್ಫ್ ಮಂಡಳಿಯಿಂದ ರೈತರ ಭೂಮಿ, ಮಠ, ಮಂದಿರಗಳ ಭೂಮಿಯನ್ನು ವಶಕ್ಕೆ ಪಡೆದು ವಕ್ಫ್ ಆಸ್ತಿ ಎಂದು ದಾಖಲೆ ಮಾಡಿಕೊಳ್ಳಲಾಗುತ್ತಿದೆ. ಈ ಸರ್ಕಾರ ಅವರನ್ನು ಓಲೈಕೆ ಮಾಡುತ್ತಿದೆ. ಹೀಗಾಗಿ, ಮುಸ್ಲಿಂ ಸಮುದಾಯಕ್ಕೆ ಮತದಾನ ಹಕ್ಕನ್ನೇ ಕೊಡಬಾರದು ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲಿಯೇ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದರ ಅನುಸಾರ ಪೊಇಲೀಸರು ಸ್ವಾಮೀಜಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದರು. ಇದರ ಬೆನ್ನಲ್ಲಿಯೇ ಪೊಲೀಸ್ ನೋಟೀಸ್‌ಗೆ ಸ್ವಾಮೀಜಿ ಉತ್ತರ ನೀಡಿದ್ದು, ಇದರಲ್ಲಿ ತಮಗೆ ಮಾರಕ ಕ್ಯಾನ್ಸರ್ ಕಾಯಿಲೆ ಇರುವುದಾಗಿ ತಿಳಿಸಿದ್ದಾರೆ.
ಉಪ್ಪಾರಪೇಟೆ ಠಾಣೆ ಪೊಲೀಸರ ನೋಟಿಸ್ ಗೆ ಚಂದ್ರಶೇಖರನಾಥ ಸ್ವಾಮೀಜಿ ಅವರು, ನನಗೆ 81 ವರ್ಷ ವಯಸ್ಸು ಆಗಿದೆ. ನನಗೆ ಮಾರಕ ಕ್ಯಾನ್ಸರ್ ಖಾಯಿಲೆ ಇದೆ. ಇದಕ್ಕೆ ವೈದ್ಯರ ಸಲಹೆಯಂತೆ ಪ್ರತಿದಿನ ಚಿಕಿತ್ಸೆ ಪಡೆಯುತ್ತಿದ್ದೇನೆ. ಇನ್ನು ಕಳೆದ ಮೂರ್ನಾಲ್ಕು ದಿನಗಳಿಂದೀಚೆಗೆ ವೈದ್ಯರು ತಪಾಸಣೆ ಮಾಡಿ 10 ದಿನಗಳ ಕಾಲ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ಹೀಗಾಗಿ, ನಾನು ನೀವು ಸೂಚಿಸಿದಂತೆ ಸೋಮವಾರ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಂದ್ರಶೇಖರ ಸ್ವಾಮೀಜಿ ಮುಟ್ಟಲು ಬಂದರೆ ಒಕ್ಕಲಿಗ ಸಮುದಾಯ ತಿರುಗಿ ಬೀಳಲಿದೆ: ಆರ್.ಅಶೋಕ ಎಚ್ಚರಿಕೆ
ಮುಂದುವರೆದು, ಇದೇ ಡಿಸೆಂಬರ್ 18ರ ವೇಳೆಗೆ ವೈದ್ಯರು ಸೂಚಿಸಿದಂತೆ 10 ದಿನಗಳ ಮೆಡಿಕೇಷನ್ ಅವಧಿ ಮುಗಿಯಲಿದ್ದು, ಡಿ.18ರ ಮಧ್ಯಾಹ್ನ 3 ಗಂಟೆಗೆ ನನ್ನ ಆರೋಗ್ಯದಲ್ಲಿ ಚೇತರಿಕೆ ಆಗಿದ್ದರೆ ವಿಚಾರಣೆಗೆ ಹಾಜರಾಗುತ್ತೇನೆ. ಒಂದು ವೇಳೆ ಆಗಲೂ ಆರೋಗ್ಯ ಹದಗೆಟ್ಟಿದ್ದರೆ ಬರಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ತನಿಖಾಧಿಕಾರಿಗಳಿಗೆ ತುರ್ತು ವಿಚಾರಣೆ ಮಾಡುವುದು ಇದ್ದರೆ, ನಮ್ಮ ಮಠಕ್ಕೆ ಬಂದು ಹೇಳಿಕೆ ದಾಖಲಿಸಲು ನನ್ನ ಅಭ್ಯಂತರವಿಲ್ಲ. ನಾನು ಈಗಾಗಲೇ ಬಾಯಿ ತಪ್ಪಿನಿಂದ ಆಗಿದ್ದು ಅಂತ ಕ್ಷಮೆ ಕೇಳಿದ್ದೇನೆ. ಇದನ್ನು ಮುಂದುವರೆಸದೇ ಪ್ರಕರಣವನ್ನು ಮುಕ್ತಾಯಗೊಳಿಸುವಂತೆ ಮನವಿ ಮಾಡುತ್ತೇನೆ ಎಂದು ಒಕ್ಕಲಿಗ ಮಠದ ಚಂದ್ರಶೇಖರನಾಥ ಸ್ವಾಮೀಜಿ ಪತ್ರದಲ್ಲಿ ತಿಳಿಸಿದ್ದಾರೆ.