2ನೇ ಅಲೆ ಮುನ್ಸೂಚನೆ: ಸಿಎಂ| ನಾಳೆ ಮೋದಿ ಜತೆ ಸಂವಾದ| ಪರಿಸ್ಥಿತಿ ಗಮನಿಸಿ ಶಾಲೆ- ಕಾಲೇಜು ಬಂದ್, ಕರ್ಫ್ಯೂನಂತಹ ಕಠಿಣ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ| ಕೊರೋನಾ ಕೈಮೀರಿದರೆ ಕಠಿಣ ಕ್ರಮ ಅನಿವಾರ್ಯ| ಲಾಕ್‌ಡೌನ್, ಕರ್ಫ್ಯೂ ಬೇಡ ಎಂದರೆ ನಿಯಮ ಪಾಲಿಸಿ: ತಜ್ಞರ ಸಭೆ ಬಳಿಕ ಎಚ್ಚರಿಕೆ
ಬೆಂಗಳೂರು(ಮಾ.16): ರಾಜ್ಯದಲ್ಲಿ ಇತ್ತೀಚೆಗೆ ಸೋಂಕು ಹೆಚ್ಚಳವಾಗುತ್ತಿರುವುದು ಕೊರೋನಾ ಎರಡನೇ ಅಲೆಯ ಸ್ಪಷ್ಟಸೂಚನೆ. ಹೀಗಾಗಿ, ಲಾಕ್‌ಡೌನ್, ರಾತ್ರಿ ಕಫä್ರ್ಯನಂತಹ ಕಠಿಣ ನಿಯಮಗಳು ಜಾರಿಯಾಗುವುದು ಬೇಡ ಎಂಬ ಭಾವನೆಯಿದ್ದರೆ ಕೋವಿಡ್ ನಿಯಮಾವಳಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ.
ಹೀಗಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಡಿನ ಜನತೆಗೆ ಸ್ಪಷ್ಟಸಂದೇಶ ನೀಡಿದ್ದಾರೆ. ಜತೆಗೆ, ಇನ್ನು ಒಂದು ವಾರದೊಳಗೆ ರಾಜ್ಯದ ಕೋವಿಡ್ ಪರಿಸ್ಥಿತಿ ನಿಯಂತ್ರಣಕ್ಕೆ ಬರದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದೂ ಎಚ್ಚರಿಸಿದ್ದಾರೆ. ಮಾಸ್ಕ್ ತೊಡುವುದು, ಸಾಮಾಜಿಕ ಅಂತರ ಪಾಲಿಸುವಂತಹ ನಿಯಮಗಳ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ ಎಂದು ಮನವಿ ಮಾಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ರಾಜ್ಯದ ಕೋವಿಡ್ ಸ್ಥಿತಿಗತಿ ಕುರಿತು ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮಾ.17ರಂದು ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಆ ವೇಳೆಗೆ ರಾಜ್ಯದ ಪರಿಸ್ಥಿತಿಯನ್ನು ನೋಡಿಕೊಂಡು ಪ್ರಧಾನಿಯವರ ಜತೆ ಸಮಾಲೋಚಿಸಿ ಶಾಲಾ-ಕಾಲೇಜು ಬಂದ್, ಕಫä್ರ್ಯನಂತಹ ಕಠಿಣ ಕ್ರಮಗಳ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದು ಎರಡನೇ ಅಲೆಯ ಸ್ಪಷ್ಟಸೂಚನೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಕೋವಿಡ್ ಆಸ್ಪತ್ರೆಗಳು, ಆಮ್ಲಜನಕ ಪೂರೈಕೆ, ಕೋವಿಡ್ ಕಾಳಜಿ ಕೇಂದ್ರಗಳ ಸಿದ್ಧತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಖಾಸಗಿ ಆಸ್ಪತ್ರೆಯಲ್ಲಿ ಈ ಹಿಂದಿನಂತೆ ಸರ್ಕಾರ ಶಿಫಾರಸು ಮಾಡಿದ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಮರುಜಾರಿಗೊಳಿಸುವ ಕುರಿತು ಚಿಂತನೆಯಿದೆ ಎಂದರು.
ಸಭೆ- ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನ ಸೇರುವುದಿದ್ದರೆ ಬ್ಯಾಚ್ ರೂಪದಲ್ಲಿ ಭಾಗವಹಿಸಲಿ. ಆದರೆ ಯಾವ ಕಾರಣಕ್ಕೂ ಒಂದೇ ಸಮಯದಲ್ಲಿ 500ಕ್ಕಿಂತ ಹೆಚ್ಚು ಜನರು ಸೇರಲು ಅವಕಾಶವಿಲ್ಲ. ಒಂದು ವೇಳೆ ಮಿತಿಗಿಂತ ಹೆಚ್ಚು ಜನ ಸೇರಿದರೆ ದೊಡ್ಡವರು, ಚಿಕ್ಕವರು ಎನ್ನುವ ಪ್ರಶ್ನೆಯೇ ಇಲ್ಲದೇ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಒಂದು ವಾರದ ಮಟ್ಟಿಗೆ ಮಾಸ್ಕ್ ದಂಡವನ್ನು ಹೆಚ್ಚಿಸುವುದಿಲ್ಲ. ಆದರೆ ಜನರ ಸಹಕಾರ ಸಿಗದಿದ್ದರೆ ದಂಡದ ಮೊತ್ತ ಹೆಚ್ಚಿಸಲಾಗುವುದು. ಮಂಗಳವಾರದಿಂದ ಬಿಗಿ ಕ್ರಮ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಕಳೆದ ಹದಿನಾಲ್ಕು ದಿನಗಳಿಂದ ರಾಜ್ಯದ ಪಾಸಿಟಿವಿಟಿ ದರ ಹೆಚ್ಚಾಗಿದೆ. ಅದರಲ್ಲೂ ಬೆಂಗಳೂರಿನ ಜನರು ಲಾಕ್‌ಡೌನ್ ಮತ್ತೆ ಜಾರಿ ಆಗುವುದು ಬೇಡ ಎಂಬ ಅಪೇಕ್ಷೆ ಇಟ್ಟುಕೊಂಡಿದ್ದರೆ ನೀವೇ ಎಚ್ಚರಿಕೆಯಿಂದಿರಬೇಕು. ಜಾತ್ರೆ, ಸಮಾರಂಭಗಳಲ್ಲಿ ಶೇ.80ರಷ್ಟು ಮಾಸ್ಕ್ ಹಾಕುವುದು ನಿಂತುಹೋಗಿದೆ. ಈ ಹಿಂದಿದ್ದ ಜಾಗೃತಿ ಹೋಗಿದೆ. ಈಗ ಹಿಂದಿನ ಸ್ಥಿತಿಯೇ ಮರುಕಳಿಸಿರುವುದರಿಂದ ಹಿಂದಿನಂತೆ ಬಿಗಿ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.
ಬೀದರ್, ಕಲಬುರಗಿ, ದಕ್ಷಿಣ ಕನ್ನಡ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು, ಉಡುಪಿ ಜಿಲ್ಲೆಯಲ್ಲಿ ಪಾಸಿಟಿವ್ ದರ ಹೆಚ್ಚಾಗಿದೆ. ಈ ಜಿಲ್ಲೆಗಳಲ್ಲಿ ಲಸಿಕೆ ನೀಡುವ ಪ್ರಮಾಣ ಹೆಚ್ಚಿಸಬೇಕು. ಅಪಾರ್ಟ್‌ಮೆಂಟ್, ಹಳ್ಳಿ, ಕೊಳೆಗೇರಿಗಳಲ್ಲಿ ಮತದಾರರ ಪಟ್ಟಿಆಧರಿಸಿ ಹಿರಿಯ ನಾಗರಿಕರನ್ನು ಗುರುತಿಸಿ ಲಸಿಕೆ ನೀಡಬೇಕು. ರೋಟರಿ ಕ್ಲಬ್, ಲಯನ್ಸ್ ಕ್ಲಬ್ ಮುಂತಾದ ಸ್ವಯಂ ಸೇವಾ ಸಂಘಟನೆಗಳ ನೆರವಿನೊಂದಿಗೆ ರಾಜ್ಯದಲ್ಲಿ ಪ್ರತಿದಿನ ಕನಿಷ್ಠ ಮೂರು ಲಕ್ಷ ಮಂದಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಸಿ.ಎನ್.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಸುಧಾಕರ್, ಮುಖ್ಯ ಕಾರ್ಯದರ್ಶಿ ರವಿಕುಮಾರ್, ಆರೋಗ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಡಾ.ಸಿ.ಎನ್.ಮಂಜುನಾಥ್, ಡಾ.ವಿ.ರವಿ, ಡಾ.ಗಿರಿಧರ್ ಬಾಬು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.
