Asianet Suvarna News Asianet Suvarna News

ಕೋವಿಡ್‌ಗೆ ಬಲಿಯಾದ ಬಡವರಿಗೆ 1 ಲಕ್ಷ ನೆರವು!

* ಬಿಪಿಎಲ್‌ನವರಿಗೆ ಪರಿಹಾರ: ಸರ್ಕಾರ ಆದೇಶ

* ಕೋವಿಡ್‌ಗೆ ಬಲಿಯಾದ ಬಡವರಿಗೆ 1 ಲಕ್ಷ ನೆರವು

* ದುಡಿಯುವ ಸದಸ್ಯರು ಮೃತಪಟ್ಟರೆ ಮಾತ್ರ ಪರಿಹಾರ

* ಕುಟುಂಬದ ಹಲವರು ಮೃತರಾದರೂ ಒಂದೇ ಪರಿಹಾರ

* ‘ಕೋವಿಡ್‌ ಸಾವು’ ಎಂದು ವೈದ್ಯರ ದೃಢೀಕರಣ ಕಡ್ಡಾಯ

Karnataka to give Rs 1 lakh to BPL COVID 19 victims families pod
Author
Bangalore, First Published Jul 9, 2021, 7:47 AM IST

ಬೆಂಗಳೂರು(ಜು.09): ಕೊರೋನಾದಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಕ್ಕೆ 1 ಲಕ್ಷ ರು. ಪರಿಹಾರ ನೀಡುವ ಕುರಿತು ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಈ ವೇಳೆ ಬಿಪಿಎಲ್‌ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟರೆ ಮಾತ್ರ ಪರಿಹಾರ ಒದಗಿಸಬೇಕು. ಒಂದು ಕುಟುಂಬದಲ್ಲಿ ಕೊರೋನಾದಿಂದ ಎಷ್ಟೇ ಮಂದಿ ಮೃತಪಟ್ಟಿದ್ದರೂ ಒಬ್ಬರಿಗೆ ಮಾತ್ರ ಪರಿಹಾರ ನೀಡಬೇಕು. ಜತೆಗೆ ಕೊರೋನಾ ಸೋಂಕಿನಿಂದಲೇ ಮೃತಪಟ್ಟಿರುವುದಾಗಿ ಆರೋಗ್ಯಾಧಿಕಾರಿಗಳು ದೃಢೀಕರಿಸಿದರೆ ಮಾತ್ರ ಪರಿಹಾರ ನೀಡಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ನಿರ್ದೇಶಕರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ನಿರ್ದೇಶನ ನೀಡಿದ್ದಾರೆ.

ಆದರೆ, ದುಡಿಯುವ ವ್ಯಕ್ತಿಯನ್ನು ಗುರುತಿಸುವ ಮಾನದಂಡಗಳನ್ನು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಕೊರೋನಾದಿಂದಲೇ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಲು ಐಸಿಎಂಆರ್‌ ಮಾನ್ಯತೆ ಪಡೆದ ಪರೀಕ್ಷೆಯಲ್ಲಿ ಕೊರೋನಾ ಸೋಂಕಿತನಾಗಿರುವುದು ದೃಢಪಟ್ಟಿರಬೇಕು. ಜತೆಗೆ ಮನೆ, ಕೊರೋನಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಎಸ್‌3 ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿದ ಕೊರೋನಾ ಪಾಸಿಟಿವ್‌ ವರದಿಯನ್ನು ವೈದ್ಯರು ದೃಢೀಕರಿಸಿರಬೇಕು ಎಂದು ಹೇಳಲಾಗಿದೆ.

ಪರಿಹಾರಕ್ಕೆ ಷರತ್ತುಗಳು:

1 ಲಕ್ಷ ರು. ಪರಿಹಾರ ನೀಡಲು 2021-22ನೇ ಸಾಲಿನ ಆಯವ್ಯಯದ ನೂತನ ಸಾಮಾಜಿಕ ಭದ್ರತೆ ಪಿಂಚಣಿ ಅಡಿ ವೆಚ್ಚ ಭರಿಸಲು ಅವಕಾಶ ನೀಡಲಾಗಿದೆ.

ಇದೇ ವೇಳೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಕೊರೋನಾದಿಂದ ಮರಣ ಹೊಂದಿದ್ದರೂ ಒಬ್ಬ ಸದಸ್ಯರಿಗೆ ಮಾತ್ರ 1 ಲಕ್ಷ ರು. ಪರಿಹಾರ ನೀಡಬೇಕು. ಕೊರೋನಾ ತಾಂತ್ರಿಕ ಸಲಹಾ ಸಮಿತಿ ಕೊರೋನಾ ಮರಣ ದೃಢೀಕರಿಸಲು ನೀಡಿರುವ ಮಾನದಂಡಗಳ ಆಧಾರದ ಮೇಲೆ ದೃಢಪಡಿಸಿರುವಂತಹ ಸಾವಿನ ಪ್ರಕರಣಗಳಿಗೆ ಮಾತ್ರ ಪರಿಹಾರ ಪಾವತಿಸಬೇಕು. ಜಿಲ್ಲಾಧಿಕಾರಿಗಳು ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟಂತಹ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆಯಬೇಕು.

ಜಿಲ್ಲಾ ವೈದ್ಯಾಧಿಕಾರಿಗಳು ನೀಡಿರುವ ಮೃತ ವ್ಯಕ್ತಿಗಳ ಮಾಹಿತಿಯ ಆಧಾರದ ಮೇಲೆ ಮೃತರ ಕಾನೂನು ಬದ್ಧ ವಾರಸುದಾರರನ್ನು, ಕುಟುಂಬದ ಸದಸ್ಯರನ್ನು ನಿಯಮಾನುಸಾರ ಗುರುತಿಸಿ ದೃಢಪಡಿಸಿಕೊಂಡ ನಂತರವಷ್ಟೇ ವಾರಸುದಾರರಿಂದ ಅಧಿಕೃತ ಗುರುತು ಪತ್ರ ಮತ್ತು ಬ್ಯಾಂಕ್‌ ವಿವರಗಳನ್ನು ಜಿಲ್ಲಾಧಿಕಾರಿಗಳು ಪಡೆಯಬೇಕು.

ಈ ವಿವರಗಳನ್ನು ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಕಳುಹಿಸಬೇಕು. ನಿರ್ದೇಶನಾಲಯ ಆರ್‌ಟಿಜಿಎಸ್‌/ನೆಫ್ಟ್‌ ಮೂಲಕವೇ ಹಣ ವರ್ಗಾವಣೆ ಮಾಡಬೇಕು. ಈ ಬಗ್ಗೆ ಪ್ರತಿ ವಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಬೇಕು. ಯಾವುದೇ ಲೋಪ ಕಂಡು ಬಂದರೂ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು ಎಂದು ಕಂದಾಯ ಇಲಾಖೆ ಆಯುಕ್ತ ಮಂಜುನಾಥ ಪ್ರಸಾದ್‌ ಆದೇಶದಲ್ಲಿ ತಿಳಿಸಿದ್ದಾರೆ.

Follow Us:
Download App:
  • android
  • ios