ಉತ್ತರ ಒಳನಾಡು ಮತ್ತು ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಿದ್ದು, ತಾಪಮಾನದಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಕಲಬುರಗಿಯಂತಹ ಜಿಲ್ಲೆಗಳಲ್ಲಿ ತಾಪಮಾನ ಗಣನೀಯವಾಗಿ ಇಳಿದಿದ್ದು, ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಇದು ನಿರಾಳತೆ ತಂದಿದೆ.

ಬೆಂಗಳೂರು (ಮೇ.9): ಉತ್ತರ ಒಳನಾಡು, ಕರಾವಳಿ ಸೇರಿ ರಾಜ್ಯದ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಿರುವುದರಿಂದ ಶುಕ್ರವಾರದಂದು ಎಲ್ಲಾ ಜಿಲ್ಲೆಗಳಲ್ಲಿ ತಾಪಮಾನದಲ್ಲಿ 3 ರಿಂದ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಇಳಿಕೆಯಾಗಿದೆ. ಭಾರೀ ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಸ್ವಲ್ಪ ನಿರಾಳರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕರಾವಳಿಯ ಮಂಗಳೂರು ವಿಮಾನ ನಿಲ್ದಾಣ ಮತ್ತು ಶಕ್ತಿನಗರದಲ್ಲಿ ತಾಪಮಾನವು ಗರಿಷ್ಠ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆಯಾಗಿದೆ. ಹೊನ್ನಾವರ, ವಿಜಯಪುರ, ಹಾವೇರಿ, ಕೊಪ್ಪಳ ಮತ್ತು ದಾವಣಗೆರೆ ಜಿಲ್ಲೆಗಳಲ್ಲೂ ಉಷ್ಣಾಂಶ ಇಳಿಕೆಯಾಗಿದೆ.

ಉತ್ತರ ಒಳನಾಡಿನ ಕಲಬುರಗಿ, ಬೀದರ್ ಮತ್ತಿತರ ಜಿಲ್ಲೆಗಳಲ್ಲಿ 43 ಡಿಗ್ರಿ ಸೆಲ್ಸಿಯಸ್‌ವರೆಗೆ ಇರುತ್ತಿದ್ದ ಗರಿಷ್ಠ ತಾಪಮಾನ, ಶುಕ್ರವಾರದಂದು ಕಲಬುರಗಿಯಲ್ಲಿ ಗರಿಷ್ಠ 38.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೀದರ್‌ನಲ್ಲಿ 37.8, ಬಳ್ಳಾರಿ 37.3, ವಿಜಯಪುರ ಮತ್ತು ಧಾರವಾಡದಲ್ಲಿ ತಲಾ 37 ಹಾಗೂ ಬಾಗಲಕೋಟೆಯಲ್ಲಿ 36.9 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ದಕ್ಷಿಣ ಒಳನಾಡಿನ ಮೂಡಿಗೆರೆ, ಬೆಂಗಳೂರು ಜಿಕೆವಿಕೆ ಮತ್ತು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 32.6 ಡಿಗ್ರಿ ಸೆಲ್ಸಿಯಸ್, ಚಂದೂರಾಯನಹಳ್ಳಿಯಲ್ಲಿ 33.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ಮುಂದಿನ ಎರಡು ದಿನ ರಾಜ್ಯದ ವಿವಿಧೆಡೆ ಭಾಗಶಃ ಮೋಡ ಮುಸುಕಿದ ವಾತಾವರಣ ಇರಲಿದ್ದು, ತಾಪಮಾನದಲ್ಲಿ ಗಮನಾರ್ಹ ಬದಲಾವಣೆ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.