* ಕರಾವಳಿ, ಮಲೆನಾಡು ಅರಣ್ಯಗಳಲ್ಲಿ ನಿಷೇಧಿತ ತುರಾಯ ಫೋನ್‌ ಲೊಕೇಶನ್‌,* ಒಂದು ವಾರದಲ್ಲಿ ರಾಜ್ಯದ 4 ಕಡೆ ಸ್ಯಾಟಲೈಟ್‌ ಫೋನ್‌ ಕರೆ ಪತ್ತೆ* ಯಾರು, ಯಾಕಾಗಿ ಬಳಸುತ್ತಿದ್ದಾರೆ ಎಂಬುದು ಇನ್ನೂ ನಿಗೂಢ

ಮಂಗಳೂರು(ಸೆ.16): ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ದಾಳಿ ಬಳಿಕ ಸದ್ದಡಗಿದ್ದ ನಿಷೇಧಿತ ಸ್ಯಾಟಲೈಟ್‌ ಫೋನ್‌ಗಳು ಮತ್ತೆ ರಿಂಗಣಿಸಲು ಶುರು ಮಾಡಿವೆ. ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ದಟ್ಟಅರಣ್ಯ ಪ್ರದೇಶಗಳಲ್ಲಿ ಸ್ಯಾಟಲೈಟ್‌ ಫೋನ್‌ ಕರೆಯ ಲೊಕೇಶನ್‌ ಕಂಡುಬಂದಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆಮಾಡಿದೆ. ಕಳೆದ ಒಂದು ವಾರದಲ್ಲಿ ನಾಲ್ಕು ಕಡೆಗಳಲ್ಲಿ ಇಂತಹ ಫೋನ್‌ ಕರೆಯ ಲೊಕೇಶನ್‌ ಪತ್ತೆಯಾಗಿದ್ದು, ಕೇಂದ್ರ ಗೃಹ ಇಲಾಖೆಗೆ ಗುಪ್ತಚರ ಅಧಿಕಾರಿಗಳು ಮಾಹಿತಿ ರವಾನಿಸಿದ್ದಾರೆ.

ಇತ್ತೀಚೆಗೆ ಶ್ರೀಲಂಕಾದಿಂದ ಐಸಿಸ್‌ ಪ್ರೇರಿತ 12 ಮಂದಿ ಶಂಕಿತ ಉಗ್ರರು ಭಾರತದ ಕರಾವಳಿಗೆ ನುಸುಳಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಗುಪ್ತಚರ ಇಲಾಖೆಯಿಂದ ಹೈಅಲರ್ಟ್‌ ಸೂಚನೆ ಬಂದಿತ್ತು. ಭಾರತದ ಕರಾವಳಿಯಾದ್ಯಂತ ಅಲರ್ಟ್‌ ಮಾಡಲು ಸೂಚಿಸಲಾಗಿತ್ತು. ಇದರ ಬೆನ್ನಲ್ಲೇ ಕಳೆದ ಒಂದು ವಾರದಲ್ಲಿ ನಿಷೇಧಿತ ಸ್ಯಾಟಲೈಟ್‌ ಫೋನ್‌ ಕರಾವಳಿಯಲ್ಲಿ ಸದ್ದುಮಾಡಿದೆ.

ಕರಾವಳಿಯ ಉತ್ತರ ಕನ್ನಡ ಹಾಗೂ ದ.ಕ. ಮತ್ತು ಮಲೆನಾಡಿನ ಚಿಕ್ಕಮಗಳೂರು ಜಿಲ್ಲೆಗಳ ದಟ್ಟಾರಣ್ಯದಲ್ಲಿ ನಿಷೇಧಿತ ತುರಾಯಾ ಸ್ಯಾಟಲೈಟ್‌ ಫೋನ್‌ ರಿಂಗ್‌ ಆಗಿದೆ. ಇಲ್ಲಿಂದ ವಿದೇಶಕ್ಕೆ ಕನೆಕ್ಟ್ ಆಗಿರುವುದನ್ನು ಗುಪ್ತಚರ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ತುರಾಯಾ ಸ್ಯಾಟಲೈಟ್‌ ಫೋನ್‌ ಬಳಕೆಯನ್ನು ಭಾರತದಲ್ಲಿ ನಿಷೇಧಿಸಲಾಗಿದ್ದರೂ, ರಾಜ್ಯದ ಕರಾವಳಿಯಲ್ಲಿ ಹಲವು ಬಾರಿ ಸಂಪರ್ಕ ಆಗಿರುವುದನ್ನು ಗುಪ್ತಚರ ಇಲಾಖೆ ದೃಢಪಡಿಸಿದೆ.

ಇತ್ತೀಚೆಗೆ ಲಂಕಾ ಮೂಲದ 12 ಮಂದಿ ಶಂಕಿತರು ಪಾಕಿಸ್ಥಾನ ಅಥವಾ ಸಿರಿಯಾಕ್ಕೆ ತೆರಳುವ ಉದ್ದೇಶದಿಂದ ಭಾರತದ ಕರಾವಳಿಗೆ ಬಂದಿದ್ದಾರೆ ಎಂದು ಗುಪ್ತಚರ ಇಲಾಖೆ ಹೇಳಿತ್ತು. ತಮಿಳು ಮೀನುಗಾರರ ಸೋಗಿನಲ್ಲಿ ಶಂಕಿತರು ಬಂದಿದ್ದರು ಎನ್ನುವ ಮಾಹಿತಿ ಇತ್ತಾದರೂ, ಅದನ್ನು ಪತ್ತೆ ಮಾಡಲು ಗುಪ್ತಚರ ಇಲಾಖೆಗಾಗಲೀ, ಪೊಲೀಸರಿಗಾಗಲೀ ಸಾಧ್ಯವಾಗಿಲ್ಲ. ಪತ್ತೆ ಮಾಡಿದರೂ ಅದರ ಬಗ್ಗೆ ಯಾವುದೇ ಮಾಹಿತಿ ಅಧಿಕೃತವಾಗಿ ನೀಡಿಲ್ಲ. ಇದರ ನಡುವಲ್ಲೇ ತುರಾಯ ಫೋನ್‌ ಸದ್ದು ಮಾಡಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಉಗ್ರರ ಸ್ಲೀಪರ್‌ಸೆಲ್‌ ಸಕ್ರಿಯವಾಗಿರುವ ಬಗ್ಗೆ ಶಂಕೆ ಮೂಡುವಂತಾಗಿದೆ.

ಎರಡು ತಿಂಗಳ ಹಿಂದೆ ಎನ್‌ಐಎ ಅಧಿಕಾರಿಗಳು ಉಗ್ರ ಸಂಘಟನೆಗಳ ಜೊತೆ ನಂಟಿನ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಡೆಗಳಲ್ಲಿ ದಾಳಿ ನಡೆಸಿದ್ದರು. ಮಂಗಳೂರಿನ ಉಳ್ಳಾಲ ಮತ್ತು ಭಟ್ಕಳದಲ್ಲಿ ಇಬ್ಬರು ವ್ಯಕ್ತಿಗಳನ್ನು ಉಗ್ರರ ಜೊತೆಗಿನ ಸಂಪರ್ಕದ ಹಿನ್ನೆಲೆಯಲ್ಲಿ ಬಂಧಿಸಿದ್ದರು. ಇದರ ಬೆನ್ನಲ್ಲೇ ಲಂಕಾ ಮೂಲದವರು ಕೇರಳ ಅಥವಾ ಕರ್ನಾಟಕದ ಕರಾವಳಿಗೆ ಧಾವಿಸಿದ ಮಾಹಿತಿ ಬಂದಿತ್ತು. ಇಂಥ ಬೆಳವಣಿಗೆ ಬೆನ್ನಲ್ಲೇ ಕರಾವಳಿಯಲ್ಲಿ ತುರಾಯ ಸ್ಯಾಟಲೈಟ್‌ ಫೋನ್‌ ಸದ್ದು ಮಾಡಿರುವುದು ಆತಂಕ ಮೂಡುವಂತಾಗಿದೆ.

ತುರಾಯ ಫೋನ್‌ ಬಳಕೆ ನಿಗೂಢ!

ಕರಾವಳಿಯಲ್ಲಿರುವ ಉಗ್ರರ ಸ್ಲೀಪರ್‌ ಸೆಲ್‌ಗಳಿಂದಲೇ ಈ ಸ್ಯಾಟಲೈಟ್‌ ಫೋನ್‌ ಸಂಪರ್ಕ ಆಗುತ್ತಿದೆಯಾ ಎಂಬ ಬಗ್ಗೆ ಗುಪ್ತಚರ ಅಧಿಕಾರಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ. ತುರಾಯ ಫೋನ್‌ ಬಳಕೆ ಮಾಡಿದಲ್ಲಿ ಅದನ್ನು ಯಾರು ಬಳಕೆ ಮಾಡಿದ್ದಾರೆ ಮತ್ತು ಯಾರನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಖಚಿತವಾಗಿ ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ.

ಹೀಗಾಗಿ ಈ ಫೋನ್‌ಗಳ ಬಳಕೆಯನ್ನು ಭಾರತದಲ್ಲಿ 2012ರಲ್ಲೇ ನಿಷೇಧ ಮಾಡಲಾಗಿತ್ತು. ಇದಲ್ಲದೆ, ಈ ಫೋನ್‌ ಬಳಕೆಯಾದ ಒಂದು ದಿನದ ಬಳಿಕ ಗುಪ್ತಚರ ಇಲಾಖೆಗೆ ಸಂದೇಶ ಬರುತ್ತದೆ ಎನ್ನಲಾಗುತ್ತಿದೆ. ಹೀಗಾಗಿ ಕರಾವಳಿಯಲ್ಲಿ ಪದೇ ಪದೇ ತುರಾಯಾ ಫೋನ್‌ ಬಳಕೆ ಸದ್ದು ಕಂಡುಬರುತ್ತಿದೆ. ಇದು ಉಗ್ರರದ್ದೇ ಹೆಜ್ಜೆ ಗುರುತು ಎನ್ನುವ ಬಲವಾದ ಶಂಕೆ ನಾಗರಿಕರಲ್ಲಿ ಮೂಡುವಂತಾಗಿದೆ.