ಬೆಂಗಳೂರು[ಅ.10]: ರಾಜ್ಯ ಸರ್ಕಾರದ ಆದೇಶದಂತೆ ಕೆಎಸ್‌ಆರ್‌ಟಿಸಿ ಒಂದರಿಂದ ನಾಲ್ಕನೇ ದರ್ಜೆ ಅಧಿಕಾರಿ ಹಾಗೂ ನೌಕರರ ಪ್ರವಾಸ, ದಿನಭತ್ಯೆ ಸೇರಿ ಇತರ ಭತ್ಯೆ ಹೆಚ್ಚಳ ಮಾಡಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ.ಕಳಸದ ಆದೇಶಿಸಿದ್ದಾರೆ. ಒಂದನೇ ದರ್ಜೆ ಹಿರಿಯ ಅಧಿಕಾರಿಗಳು ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಫಸ್ಟ್‌ಕ್ಲಾಸ್‌ ಎಸಿ ಕೋಚ್‌, ಕಿರಿಯ ಅಧಿಕಾರಿಗಳು 2 ಟಯರ್‌ ಎಸಿ ಕೋಚ್‌ನಲ್ಲಿ ಪ್ರಯಾಣಿಸಬಹುದಾಗಿದೆ.

2 ಮತ್ತು 3ನೇ ದರ್ಜೆ ಸಿಬ್ಬಂದಿ 3 ಟಯರ್‌ ಎಸಿ ಕೋಚ್‌ ಹಾಗೂ ನಾಲ್ಕನೇ ದರ್ಜೆ ನೌಕರರು ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ ಎಸಿ ಚೇರ್‌ ಕ್ಲಾಸ್‌ ಮತ್ತು ಇತರ ರೈಲುಗಳಲ್ಲಿ ಸ್ಲೀಪರ್‌ ಕ್ಲಾಸ್‌ನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ. ರಾಜ್ಯದ ಒಳಗೆ ಮತ್ತು ಹೊರಗೆ ಪ್ರಯಾಣಿಸಿದಾಗ ತಂಗುವುದಕ್ಕೆ ಸಂಬಂಧಿಸಿದ ದಿನಭತ್ಯೆಯನ್ನು ಹೆಚ್ಚಿಸಲಾಗಿದೆ.

ಸರ್ಕಾರಿ ನೌಕರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಗಿಫ್ಟ್‌!

ಅದರಂತೆ ಅಧಿಕಾರಿ, ಸಿಬ್ಬಂದಿ ದರ್ಜೆಯನ್ನಾಧರಿಸಿ ಬೆಂಗಳೂರಿಗೆ 300ರಿಂದ 600 ರು. ಮಹಾನಗರಪಾಲಿಕೆಗಳಿಗೆ 300ರಿಂದ 500 ರು., ಇತರ ನಗರಗಳಿಗೆ 200 ರು.ರಿಂದ 400ರು.ವರೆಗೆ ನೀಡಲಾಗುತ್ತದೆ. ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್‌ ಮತ್ತು ಕೊಲ್ಕತ್ತಾಗಳಿಗೆ 500 ರು.ನಿಂದ 800 ರು. ಹಾಗೂ ಇತರ ಸ್ಥಳಗಳಿಗೆ 300ರಿಂದ 600 ರು.ಭತ್ಯೆ ನೀಡಲಾಗುತ್ತದೆ. ಹೊರರಾಜ್ಯಗಳಲ್ಲಿ ಊಟ ಮತ್ತು ವಸತಿಗಾಗಿ 2 ಸಾವಿರ ರು.ನಿಂದ 3 ಸಾವಿರ ರು. ಕೊಡಲಾಗುತ್ತದೆ.

ತಮ್ಮ ಹುದ್ದೆಯ ಜತೆ ಬೇರೊಂದು ಪ್ರಭಾರ ಕರ್ತವ್ಯವನ್ನು ಪಡೆದುಕೊಳ್ಳುವ ಅಧಿಕಾರಿ, ನೌಕರರ ವೇತನ ಶ್ರೇಣಿಯಲ್ಲಿ ಮೊದಲ ಮೂರು ತಿಂಗಳಿಗೆ ಶೇ.7.5 ಮತ್ತು 3 ತಿಂಗಳ ನಂತರ ಶೇ.15 ದರದಲ್ಲಿ ಪ್ರಭಾರ ಭತ್ಯೆ ನೀಡಿ ಆದೇಶಿಸಲಾಗಿದೆ.