ಬೆಂಗಳೂರು[ಫೆ.20]: ರಾಜ್ಯದಲ್ಲಿ ಇನ್ನು ಮುಂದೆ ಮಗುವನ್ನು ದತ್ತು ಪಡೆದರೂ ಸರ್ಕಾರಿ ನೌಕರರಿಗೆ ಹೆರಿಗೆ ರಜೆ ಲಭಿಸಲಿದೆ!

ಸರ್ಕಾರಿ ಮಹಿಳಾ ನೌಕರರಿಗೆ ಮಾತ್ರವಲ್ಲ, ಪುರುಷರಿಗೂ ಪಿತೃತ್ವ ಯೋಜನೆಯಡಿ ರಜೆ ನೀಡುವ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ. ದತ್ತು ಮಗುವನ್ನು ಪಡೆಯುವ ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ 180 ದಿನ ಮಾತೃತ್ವ ರಜೆ ಹಾಗೂ ಪುರುಷರಿಗೆ ಪಿತೃತ್ವ ಯೋಜನೆಯಡಿ 15 ದಿನ ರಜೆ ಸಿಗಲಿದೆ. ಒಂದು ವರ್ಷದೊಳಗೆ ಇರುವ ಮಗುವನ್ನು ದತ್ತು ತೆಗೆದುಕೊಳ್ಳುವ ಮಹಿಳಾ ನೌಕರರಿಗೆ ಹೆರಿಗೆ ರಜೆ ಮಾದರಿಯಲ್ಲಿ 180 ದಿನಗಳು ಮತ್ತು ಪುರುಷ ನೌಕರರಿಗೆ ಪಿತೃತ್ವ ರಜೆಯೆಂದು 15 ದಿನಗಳ ರಜೆ ಸಿಗಲಿದೆ.

ಮಗುವನ್ನು ದತ್ತುಪಡೆದ ದಿನದಿಂದ ರಜೆ ಅನ್ವಯವಾಗಲಿದೆ. ಸರ್ಕಾರದ ನಿಯಮದ ಪ್ರಕಾರ ಈಗಾಗಲೇ ಎರಡು ಮಕ್ಕಳನ್ನು ಹೊಂದಿದ್ದರೆ ಅವರಿಗೆ ಈ ಸೌಲಭ್ಯ ಸಿಗುವುದಿಲ್ಲ. 60 ದಿನ ಮೀರದಂತೆ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸದೆ, ಪರಿವರ್ತಿತ ರಜೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ.

ಈವರೆಗೆ ಸರ್ಕಾರಿ ನೌಕರರಿಗೆ 180 ದಿನಗಳ ಮಾತೃತ್ವ ಹಾಗೂ 15 ದಿನಗಳ ಪಿತೃತ್ವ ರಜೆ ಇತ್ತು. ಈಗ ಮಕ್ಕಳನ್ನು ದತ್ತು ಪಡೆಯುವ ನೌಕರರಿಗೂ ಈ ರಜೆ ಸೌಲಭ್ಯ ಸಿಗಲಿದೆ.