ಬೆಂಗಳೂರು(ಜ.06): ಚಿತ್ರಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿ ಮಾಡಿ ಸಿನಿಮಾ ಪ್ರದರ್ಶನ ಮಾಡುವುದಕ್ಕೆ ಶೀಘ್ರದಲ್ಲೇ ರಾಜ್ಯ ಸರ್ಕಾರ ಒಪ್ಪಿಗೆ ನೀಡುವ ಸಾಧ್ಯತೆಯಿದೆ. ತಮ್ಮನ್ನು ಭೇಟಿ ಮಾಡಿದ ಚಿತ್ರರಂಗದ ಪ್ರಮುಖರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಶೀಘ್ರವೇ ಚಿತ್ರಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಗೆ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚಿತ್ರಮಂದಿರದಲ್ಲಿ ‘ಹೌಸ್‌ಫುಲ್‌ ಪ್ರದರ್ಶನ’ಕ್ಕೆ ಅನುಮತಿ ನೀಡುವಂತೆ ಕೋರಿದರು. ಅದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ಸಂಬಂಧಪಟ್ಟಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ತಮಿಳುನಾಡು ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಗೆ ಅನುಮತಿ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಈ ಬೆಳವಣಿಗೆ ನಡೆದಿದೆ.

‘ಮಾಚ್‌ರ್‍ನಲ್ಲಿ ಜಾರಿಯಾದ ಲಾಕ್‌ಡೌನ್‌ ನಂತರ ಸಿನಿಮಾ ಥಿಯೇಟರ್‌ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಅದರಿಂದಾಗಿ ಕನ್ನಡ ಚಿತ್ರರಂಗವೂ ನಷ್ಟಅನುಭವಿಸುತ್ತಿದೆ. ಹೀಗಾಗಿ ಚಿತ್ರ ಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿ ಮಾಡಿ ಸಿನಿಮಾ ಪ್ರದರ್ಶನ ಮಾಡಲು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೇವೆ. ಸದ್ಯ ಕೊರೋನಾ ಕಾರಣದಿಂದ ಶೇ.50ರಷ್ಟುಸೀಟು ಮಾತ್ರ ಭರ್ತಿ ಮಾಡಲು ಚಿತ್ರಮಂದಿರಗಳಿಗೆ ಅನುಮತಿಯಿದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆವು. ಇದಕ್ಕೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ನಮ್ಮ ನಿರೀಕ್ಷೆಯಂತೆ ಶೇ.100ರಷ್ಟುಸೀಟು ಭರ್ತಿಗೆ ಅನುಮತಿ ಕೊಡುತ್ತಾರೆ ಎನ್ನುವ ಭರವಸೆ ಇದೆ’ ಎಂದು ಜೈರಾಜ್‌ ಹೇಳಿದ್ದಾರೆ.

ತಮಿಳುನಾಡಿನ ಚಿತ್ರಮಂದಿರಗಳಲ್ಲಿ ಶೇ.100 ಸೀಟು ಭರ್ತಿಗೆ ಅನುಮತಿ ಸಿಕ್ಕಿದ್ದು, ಜ.14ರಂದು ತಮಿಳು ನಟ ವಿಜಯ್‌ ಅವರ ‘ಮಾಸ್ಟರ್‌’ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಘೋಷಣೆ ಹೊರಬಿದ್ದಿದೆ. ಆ ಸಿನಿಮಾ ಬಿಡುಗಡೆಯಾದರೆ ಲಾಕ್‌ಡೌನ್‌ ನಂತರ ಬಿಡುಗಡೆಯಾಗಲಿರುವ ಮೊದಲ ಬಿಗ್‌ ಬಜೆಟ್‌ ಸ್ಟಾರ್‌ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.