- ತುಮಕೂರಿನಲ್ಲಿ ಬೊಮ್ಮಾಯಿ ಚಾಲನೆ- ಮಕ್ಕಳಿಗೆ ತಳಿರು- ತೋರಣದ ಸ್ವಾಗತ- ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ತರಗತಿ
ಬೆಂಗಳೂರು(ಮೇ.16): ರಾಜ್ಯದಲ್ಲಿ ಸೋಮವಾರದಿಂದ ಎಲ್ಲಾ ಮಾದರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭವಾಗಲಿವೆ. ತನ್ಮೂಲಕ 2 ವರ್ಷಗಳ ಬಳಿಕ ನಿಗದಿತ ಸಮಯಕ್ಕೆ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದು ಕೋವಿಡ್ ಪೂರ್ವ ಮಾದರಿಯ ಮಕ್ಕಳ ಕಲರವಕ್ಕೆ ಶಾಲೆಗಳು ಸಾಕ್ಷಿಯಾಗಲಿವೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಮಕೂರಿನ ಎಂಪ್ರೆಸ್ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಧ್ಯಾಹ್ನ 12.30ಕ್ಕೆ ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೂಲಕ 2022-23ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.
ಬೇಸಿಗೆ ಕಾರಣ ಶಾಲಾ ಸಮವಸ್ತ್ರ ಕಡ್ಡಾಯ ಬೇಡ, ರಾಜ್ಯಗಳಿಗೆ ಕೇಂದ್ರ ಸೂಚನೆ!
ಶಾಲೆಗಳು ಸಿಂಗಾರ:
ಭಾನುವಾರ ರಜಾ ದಿನವಾದರೂ ಶಿಕ್ಷಕರು ತಮ್ಮ ಶಾಲೆಗಳಿಗೆ ಆಗಮಿಸಿ ಶಿಕ್ಷಣ ಇಲಾಖೆಯ ಸೂಚನೆಯಂತೆ ಎಸ್‌ಡಿಎಂಸಿ ಸದಸ್ಯರು, ಹಳೇ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಗ್ರಾಮಸ್ಥರ ನೆರವಿನೊಂದಿಗೆ ಶಾಲಾ ಪ್ರಾರಂಭೋತ್ಸವಕ್ಕೆ ತರಗತಿಗಳನ್ನು ಸಜ್ಜುಗೊಳಿಸಿದ್ದಾರೆ.
ಶ್ರಮದಾನ ಕಾರ್ಯಕ್ರಮದಡಿ ಬೆಳಗ್ಗೆಯಿಂದಲೇ ಪ್ರತಿಯೊಂದು ಕೊಠಡಿ, ಬಿಸಿಯೂಟದ ಅಡುಗೆ ಮನೆ, ಶಾಲಾ ಆವರಣ ಸ್ವಚ್ಛತಾ ಕಾರ್ಯ ನಂತರ ಬಾಳೆಕಂದು, ಮಾವಿನ ಪತ್ರೆ ಕಟ್ಟಿ, ರಂಗೋಲಿ ಬಿಡಿಸುವುದು ಸೇರಿದಂತೆ ತಳಿರು ತೋರಣಗಳಿಂದ ಶಾಲೆಗಳನ್ನು ಸಿಂಗರಿಸಲಾಗಿದ್ದು, ಮಕ್ಕಳನ್ನು ಬರಮಾಡಿಕೊಳ್ಳಲು ಎಲ್ಲೆಡೆ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಲಿಕಾ ಚೇತರಿಕೆ:
ಕಳೆದ ಎರಡು ವರ್ಷಗಳಲ್ಲಿ ಮಹಾಮಾರಿ ಕೋವಿಡ್‌ನಿಂದಾಗಿ ನಿಗದಿತ ಅವಧಿಗೆ ಶಾಲೆಗಳು ಆರಂಭವಾಗದೆ, ಸಮರ್ಪಕ ರೀತಿಯಲ್ಲಿ ಭೌತಿಕ ತರಗತಿಗಳು ನಡೆಯದೆ ಮಕ್ಕಳು ಕಲಿಕೆಯಲ್ಲಿ ತೀವ್ರವಾಗಿ ಹಿಂದುಳಿದಿದ್ದಾರೆ. ಹೀಗಾಗಿ ಕಲಿಕಾ ಕೊರತೆ ಸರಿದೂಗಿಸಲು 2022-23ನೇ ಶೈಕ್ಷಣಿಕ ಸಾಲನ್ನು ‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಲಾಗಿದೆ.
ಇಂಗ್ಲಿಷ್ ವ್ಯಾಮೋಹದ ಜತೆ ಶಿಕ್ಷಕರ ಕೊರತೆ: 12 ವರ್ಷದಲ್ಲಿ 37 ಸರ್ಕಾರಿ ಶಾಲೆ ಬಂದ್..!
ಆದ್ದರಿಂದ, 2 ವರ್ಷ ಕಲಿಕಾ ಕೊರತೆ ಎದುರಿಸಿರುವ ಮಕ್ಕಳಿಗೆ ಕಲಿಕಾ ಚೇತರಿಕೆ ಕಾರ್ಯಕ್ರಮದ ಮೂಲಕ ತರಗತಿಗಳು ಆರಂಭವಾಗಲಿವೆ. ಮೇ 16ರಿಂದ 30ವರೆಗೆ ಸಂಪೂರ್ಣವಾಗಿ 1ರಿಂದ 10ನೇ ತರಗತಿ ಮಕ್ಕಳಿಗೆ ಹಿಂದಿನ ವರ್ಷಗಳಲ್ಲಿ ಕಲಿಯಲಾಗದ ಪಠ್ಯಬೋಧನೆ ಮಾಡಲಾಗುತ್ತದೆ. ಬಳಿಕ ಜೂ.1ರಿಂದ ಕಲಿಕಾ ಚೇತರಿಕೆ ಕಾರ್ಯಕ್ರಮಗಳ ಜೊತೆ ಜೊತೆಗೇ ಪ್ರಸಕ್ತ ಸಾಲಿನ ಪಠ್ಯ ಬೋಧನಾ ತರಗತಿಗಳು ಆರಂಭವಾಗಲಿವೆ.
ಬಿಸಿಯೂಟವೂ ಪ್ರಾರಂಭ:
ಸೋಮವಾರದಿಂದಲೇ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯು ಆರಂಭವಾಗಲಿದೆ. ಬಿಸಿಯೂಟದಲ್ಲಿ ಮೊದಲ ದಿನ ಸಿಹಿ ಊಟ ತಯಾರಿಸಿ ಬಡಿಸಬೇಕು. ಇದಕ್ಕೆ ಎಲ್ಲಾ ಅಗತ್ಯ ಕ್ರಮಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪ ನಿರ್ದೇಶಕರು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಕಳೆದ ವರ್ಷದ ಬಸ್ ಪಾಸ್ ಅನ್ವಯ:
ದೂರದ ಊರುಗಳಿಂದ ಬಸ್ಸುಗಳಲ್ಲಿ ಶಾಲೆಗೆ ಬರುವ ಮಕ್ಕಳಿಗೆ ಸಮಸ್ಯೆಯಾಗದಂತೆ ಸಾರಿಗೆ ಇಲಾಖೆಯು ಈ ವರ್ಷದ ಹೊಸ ಪಾಸ್ ನೀಡುವವರೆಗೆ ಹಿಂದಿನ ವರ್ಷದ ಪಾಸನ್ನೇ ಪರಿಗಣಿಸಲು ಈಗಾಗಲೇ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಇತರೆ ಸಾರಿಗೆ ನಿಗಮಗಳಿಂದ ಸುತ್ತೋಲೆ ಹೊರಡಿಸಲಾಗಿದೆ.
ಮಕ್ಕಳಿಗೆ ಗುಲಾಬಿ ಹೂ, ಚಾಕೊಲೇಟ್ ನೀಡಿ ಸ್ವಾಗತ: ನಾಗೇಶ್
‘ಮಕ್ಕಳು ಶಾಲೆಗೆ ಬರಲು ಯಾವುದೇ ಸಮಸ್ಯೆಗಳಾಗದಂತೆ ಕ್ರಮ ಕೈಗೊಳ್ಳಲು ನಮ್ಮ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಒಟ್ಟಾರೆ ಸೋಮವಾರ ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಗುಲಾಬಿ ಹೂ, ಚಾಕೊಲೇಟ್ ಸೇರಿದಂತೆ ಶಿಕ್ಷಕರು ತಮ್ಮದೇ ಆದ ರೀತಿಯಲ್ಲಿ ಬರಮಾಡಿಕೊಳ್ಳಲಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
