Revised Textbook ಪಠ್ಯಪುಸ್ತಕ ಪರಿಷ್ಕರಣೆ, ಸಾಹಿತಿಗಳಿಂದ ಪಠ್ಯ ವಾಪಸಿ ಚಳವಳಿ!

- ಇನ್ನೂ ಆರು ಸಾಹಿತಿಗಳಿಂದ ಪಠ್ಯ ಬೋಧನೆಗೆ ನೀಡಿದ್ದ ಅನುಮತಿ ವಾಪಸ್‌
- 9ನೇ ತರಗತಿ ಪಠ್ಯ ಪರಿಷ್ಕರಣ ಸಮಿತಿಗೆ ಪ್ರೊ.ಮಧುಸೂದನ ರಾಜೀನಾಮೆ
- ಪಠ್ಯಪುಸ್ತಕ ಕೇಸರೀಕರಣದ , ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಆರೋಪ

Karnataka School textbooks row  writers begin chapter drop campaign on protest against rohit chakratirtha ckm

ಬೆಂಗಳೂರು(ಜೂ.01): ರಾಷ್ಟ್ರಕವಿ ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮತ್ತು ಪಠ್ಯಪುಸ್ತಕ ಕೇಸರೀಕರಣದ ಆರೋಪದ ವಿರುದ್ಧ ನಡೆದಿರುವ ‘ಪಠ್ಯ ವಾಪಸಿ’ ಬೆಳವಣಿಗೆ ಇದೀಗ ಆಂದೋಲನದ ಸ್ವರೂಪ ಪಡೆದಿದೆ. ಹಿರಿಯ ಸಾಹಿತಿ ಸರಜೂ ಕಾಟ್ಕರ್‌ ಸೇರಿದಂತೆ ಆರು ಸಾಹಿತಿಗಳು ತಮ್ಮ ರಚನೆಯನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಮಂಗಳವಾರ ಹಿಂಪಡೆದಿದ್ದಾರೆ. ಅದೇ ರೀತಿ ಮತ್ತೊಬ್ಬ ಸಾಹಿತಿ ಪ್ರೊ.ಕೆ.ಎಸ್‌.ಮಧುಸೂದನ ಅವರು ಒಂಬತ್ತನೇ ತರಗತಿ ಪಠ್ಯ ಪುಸ್ತಕ ರಚನೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಹಿರಿಯ ಸಾಹಿತಿಗಳಾದ ದೇವನೂರು ಮಹಾದೇವ, ಎಸ್‌.ಜಿ.ಸಿದ್ದರಾಮಯ್ಯ ಅವರು ತಮ್ಮ ಪಠ್ಯ ಬೋಧಿಸದಂತೆ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಮಂಗಳವಾರ ಡಾ.ಸರಜೂ ಕಾಟ್ಕರ್‌, ಮೂಡ್ನಾಕೂಡು ಚಿನ್ನಸ್ವಾಮಿ, ಚಂದ್ರಶೇಖರ್‌ ತಾಳ್ಯ, ಈರಪ್ಪ ಎಂ.ಕಂಬಳಿ, ಕವಯತ್ರಿ ರೂಪಾ ಹಾಸನ, ದಕ್ಷಿಣ ಕನ್ನಡದ ಬೊಳುವಾರು ಮಹಮ್ಮದ್‌ ಕುಂಞ ಸೇರಿದಂತೆ ಆರು ಸಾಹಿತಿಗಳು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದು ತಮ್ಮ ಪಠ್ಯ ಮತ್ತು ಪದ್ಯಗಳನ್ನು ಬೋಧಿಸಲು ನೀಡಿದ್ದ ಅನುಮತಿಯನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.

ಬಸವಣ್ಣನ ಪಾಠದಲ್ಲಿ ಕೆಲ ಅಂಶಗಳಿಗೆ ಕತ್ತರಿ, ಜಯಮೃತ್ಯುಂಜಯ ಸ್ವಾಮೀಜಿ ಕಿಡಿ

ಸರಜೂ ಕಾಟ್ಕರ್‌ ಅವರು, ಈಗಿನ ಪಠ್ಯಪುಸ್ತಕ ಪುನರ್‌ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟುಚರ್ಚೆ ಆಗುತ್ತಿದೆ. ವಿದ್ಯಾರ್ಥಿಗಳಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ, ಪಾಲಕರಲ್ಲಿ ಹಾಗೂ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲ ಏರ್ಪಟ್ಟಿದೆ. ಈ ಹಿಂದೆ 9ನೇ ತರಗತಿಯ ಕನ್ನಡ ತೃತೀಯ ಭಾಷೆ ಪುಸ್ತಕದಲ್ಲಿ ನನ್ನ ‘ಶಬ್ದಗಳು’ ಎಂಬ ಕವಿತೆಯನ್ನು ಅಳವಡಿಸಲಾಗಿತ್ತು. ಈ ಕವಿತೆ ಬೋಧನೆಗೆ ನೀಡಿದ್ದ ಒಪ್ಪಿಗೆಯನ್ನು ಹಿಂದೆ ಪಡೆಯುತ್ತಿದ್ದೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಮತ್ತೊಬ್ಬ ಹಿರಿಯ ಸಾಹಿತಿ ಮೂಡ್ನಾಕೂಡು ಚಿನ್ನಸ್ವಾಮಿ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಸಮಿತಿಯನ್ನು ನೇಮಿಸಿ ಶಾಲಾ ಪಠ್ಯಗಳನ್ನು ಕೇಸರಿಕರಣಗೊಳಿಸುತ್ತಿರುವ ಬಗ್ಗೆ ಕನ್ನಡ ಸಾರಸ್ವತ ಲೋಕ ವಿಚಲಿತಗೊಂಡಿದೆ. ಕವಿ ಕುವೆಂಪು ಅವರನ್ನು ಅವಮಾನಿಸಿರುವುದು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಮಾಡಿದ ಅಪಚಾರ. ಜಾತಿ ವ್ಯವಸ್ಥೆಯಿಂದ ಕಲುಷಿತಗೊಂಡಿರುವ ನಮ್ಮ ಸಮಾಜವನ್ನು ಜಾತ್ಯತೀತತೆಯಿಂದ ಮಾತ್ರ ಸರಿಪಡಿಸಲು ಸಾಧ್ಯ. ಪ್ರಗತಿಪರತೆಯನ್ನು ಪ್ರತಿಪಾದಿಸುವವರನ್ನು ಎಡಪಂಥೀಯರು ಎಂದು ದೂರುವುದು ಆರೋಗ್ಯಕರ ಸಮಾಜದ ಲಕ್ಷಣವಲ್ಲ. ಈ ಹಿನ್ನೆಲೆಯಲ್ಲಿ 5ನೇ ತರಗತಿಗೆ ಪಠ್ಯವಾಗಿರುವ ‘ನನ್ನ ಕವಿತೆ’ ಎಂಬ ಕವಿತೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ನಿವೃತ್ತ ತರ್ಕಶಾಸ್ತ್ರದ ಉಪನ್ಯಾಸಕ ಚಂದ್ರಶೇಖರ ತಾಳ್ಯ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಶಿಕ್ಷಣದ ಮೇಲಿನ ಸಾಂಸ್ಕೃತಿಕ ಹಲ್ಲೆ ಮಿತಿ ಮೀರುತ್ತಿದೆ. ಅದೀಗ ಪಠ್ಯಕ್ರಮದ ಮೇಲೂ ತನ್ನ ಕರಿ ನೆರಳು ಚಾಚುತ್ತಿದೆ. ಅಸಾಂವಿಧಾನಿಕ ನಿರ್ಧಾರಗಳಿಂದ ಇಡೀ ಶೈಕ್ಷಣಿಕ ಪರಿಸರದ ಮೇಲೆ ದುಷ್ಪರಿಣಾಮ ಬೀರುವ ಈ ಅನೈತಿಕ ನಡೆ ನನ್ನಂತಹ ಲೇಖಕರನ್ನು ಅಧೀರನನ್ನಾಗಿ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ನನ್ನ ಒಂದು ಕವಿತೆ ‘ಒಂದು ಸೋಜಿಗದ ಪದ್ಯ’ 6ನೇ ತರಗತಿಯ ದ್ವಿತೀಯ ಭಾಷಾ ಪಠ್ಯವಾಗಿ ಸೇರಿದೆ. ಅದನ್ನು ಪಠ್ಯವಾಗಿ ಬೋಧಿಸಲು ನನ್ನ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ಶಿಕ್ಷಣ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಸಿಎಂ ಮಧ್ಯಪ್ರವೇಶಿಸಿ ಪಠ್ಯಪುಸ್ತಕ ವಿವಾದಕ್ಕೆ ತೆರೆ ಎಳೆಯಬೇಕು Baraguru Ramachandrappa

ಕವಯತ್ರಿ ರೂಪಾ ಹಾಸನ ಅವರು ಶಿಕ್ಷಣ ಸಚಿವರಿಗೆ ಪತ್ರ ಬರೆದು, ಈ ವರ್ಷ ಶಾಲಾ ಪಠ್ಯಪುಸ್ತಕಗಳು ಆಳುವ ಪಕ್ಷದ ತತ್ವ, ಸಿದ್ಧಾಂತಕ್ಕೆ ಅನುಗುಣವಾಗಿ ಮರು ಪರಿಷ್ಕರಣೆಗೊಂಡಿವೆ. ಪಠ್ಯ ಪುಸ್ತಕಗಳು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005ರ ನೀತಿ ನಿಯಮಗಳಿಗೆ ಅನುಗುಣವಾಗಿ ರೂಪಿತವಾಗಿಲ್ಲ ಎಂಬುದು ಗೊತ್ತಾಗಿದೆ. ಆದ್ದರಿಂದ 9ನೇ ತರಗತಿಯ ತೃತೀಯ ಭಾಷಾ ಕನ್ನಡ ಪಠ್ಯಪುಸ್ತಕ ‘ನುಡಿ ಕನ್ನಡ’ ಪಠ್ಯದಲ್ಲಿ ಅಳವಡಿಕೆಯಾಗಿದ್ದ ನನ್ನ ‘ಅಮ್ಮನಾಗುವುದೆಂದರೆ’ ಕವಿತೆಯನ್ನು ಬೋಧಿಸಲು ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆಯುತ್ತಿದ್ದೇನೆ ಎಂದು ಹೇಳಿದ್ದಾರೆ.

ಮತ್ತೋರ್ವ ಸಾಹಿತಿ ಈರಣ್ಣ ಎಂ.ಕಂಬಳಿ ಅವರು ಕೂಡ 10ನೇ ತರಗತಿಯ ತೃತೀಯ ಭಾಷೆ ಕನ್ನಡದಲ್ಲಿರುವ ತಮ್ಮ ಲಲಿತ ಪ್ರಬಂಧ ‘ಹೀಗೊಂದು ಟಾಪ್‌ ಪ್ರಯಾಣ’ ಪಠ್ಯ ಬೋಧನೆಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಗೆಯೇ ದಕ್ಷಿಣ ಕನ್ನಡದ ಬೊಳುವಾರು ಮಹಮ್ಮದ್‌ ಕುಂಞ ಅವರು ಕೂಡ ಪಠ್ಯದಿಂದ ನನ್ನ ‘ಸುಳ್ಳು ಹೇಳಬಾರದು’ ಕತೆಯನ್ನು ಕಿತ್ತು ಹಾಕಿ ಎಂದು ಪತ್ರ ಬರೆದಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ:
ರಾಜ್ಯದ 9ನೇ ತರಗತಿಯ ದ್ವಿತೀಯ ಭಾಷಾ ಕನ್ನಡ ಪಠ್ಯಪುಸ್ತಕ ‘ತಿಳಿ ಕನ್ನಡ’ ರಚನೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಪಿಎಸ್‌ ಕಲೆ ಮತ್ತು ವಿಜ್ಞಾನ ಪದವಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ಎಸ್‌.ಮಧುಸೂದನ ರಾಜೀನಾಮೆ ನೀಡಿದ್ದಾರೆ.

ತಿಳಿ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿ ಅಧ್ಯಕ್ಷನಾಗಿ ನಾನು ಕಾರ್ಯನಿರ್ವಹಿಸಿದ್ದೇನೆ. ಈಗಲೂ ನನ್ನ ಅಧ್ಯಕ್ಷತೆಯಲ್ಲಿ ಪರಿಷ್ಕರಿಸಲಾಗಿದ್ದ ಅದೇ ಪಠ್ಯ ಮುಂದುವರೆದಿದೆ ಎಂದು ತಿಳಿದುಬಂದಿದೆ. ನಾಡು, ನುಡಿ, ಸಂಸ್ಕೃತಿಯ ಅಂತಃಸಾಕ್ಷಿಯಂತಿರುವ ಕುವೆಂಪು ಅವರನ್ನು ಈಗಿನ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರು ಲಘುವಾಗಿ ಗೇಲಿ ಮಾಡಿದ್ದಕ್ಕೆ ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios