ಬೆಂಗಳೂರು(ಏ. 04): ರಾಜ್ಯದಲ್ಲಿ ಸೋಮವಾರ ಮತ್ತೆ 15 ಮಂದಿಗೆ ಸೋಂಕು ದೃಢಪಟ್ಟಿದ್ದು ಒಟ್ಟು ಸೋಂಕಿತರ ಸಂಖ್ಯೆ 247ಕ್ಕೆ ಏರಿಕೆಯಾಗಿದೆ. ಸೋಮವಾರ ವರದಿಯಾದ 15 ಸೋಂಕಿತರ ಪೈಕಿ 14 ಮಂದಿಗೆ ದೆಹಲಿ ಪ್ರಯಾಣದ ಹಿನ್ನೆಲೆಯುಳ್ಳವರ ಸಂಪರ್ಕದಿಂದಲೇ ಸೋಂಕು ಹರಡಿರುವುದು ಆತಂಕ ಹೆಚ್ಚಿಸಿದೆ. ಈ ನಡುವೆ ಬೆಂಗಳೂರು ಹಾಗೂ ಕಲ​ಬು​ರ​ಗಿ​ಯಲ್ಲಿ ತಲಾ ಒಬ್ಬ ಸೋಂಕಿತ ಮೃತ​ಪ​ಟ್ಟಿದ್ದು ರಾಜ್ಯ​ದಲ್ಲಿ ಮೃತರ ಸಂಖ್ಯೆ 8ಕ್ಕೆ ಏರಿದೆ. ಇನ್ನೊಂದೆಡೆ ಸೋಮವಾರ ಮತ್ತೆ ಆರು ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಗುಣಮುಖರಾದವರ ಸಂಖ್ಯೆ 60ಕ್ಕೆ ಏರಿಕೆಯಾಗಿದೆ.
"

ಸೋಮವಾರ ವರದಿಯಾದ ಪ್ರಕರಣಗಳ ಪೈಕಿ ಹುಬ್ಬಳ್ಳಿಯ 4, ಮಂಡ್ಯದ ಮಳವಳ್ಳಿ 3, ಬೆಳಗಾವಿ 3, ಬೀದರ್‌ 2, ಬಾಗಲಕೋಟೆ 1, ಬೆಂಗಳೂರು ನಗರ 1, ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ದೊಡ್ಡಬಳ್ಳಾಪುರದಲ್ಲಿ 1 ಪ್ರಕರಣ ವರದಿಯಾಗಿದೆ.

ಕ್ವಾರಂಟೈನ್‌ 28 ದಿನಕ್ಕೆ ವಿಸ್ತರಣೆ!, 14 ದಿನ ಹೆಚ್ಚಿಸಲು ಕಾರಣವೇನು?

ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಸ್‌. ಸುರೇಶ್‌ಕುಮಾರ್‌, ರಾಜ್ಯದಲ್ಲಿ ಈವರೆಗೆ 10,017 ಕೊರೋನಾ ಪರೀಕ್ಷೆ ನಡೆಸಿದ್ದು, 247 ಮಂದಿಗೆ ಸೋಂಕು ದೃಢಪಟ್ಟಿದೆ. 9,572 ಮಂದಿಗೆ ವರದಿ ನೆಗೆಟಿವ್‌ ಬಂದಿದ್ದು 198 ಮಂದಿಯ ವರದಿ ಬರಬೇಕಿದೆ. ಕೊರೋನಾ ಪರೀಕ್ಷೆಯಲ್ಲಿ ಸೋಂಕು ದೃಢಪಡುತ್ತಿರುವ ಪ್ರಮಾಣ (ಪಾಸಿಟಿವಿಟಿ ದರ) ರಾಜ್ಯದಲ್ಲಿ ಶೇ.2.5 ರಷ್ಟುಮಾತ್ರ ಇದೆ. ಇದು ಕೇರಳದಲ್ಲಿ ಶೇ. 2.62, ರಾಜಸ್ತಾನ ಶೇ.2.82, ದೆಹಲಿ ಶೇ.9.13, ನೆರೆಯ ತಮಿಳುನಾಡಿನಲ್ಲಿ ಶೇ.11.41 ರಷ್ಟಿದೆ. ಕಳೆದ ಐದು ದಿನಗಳಲ್ಲಿ ಕೊರೋನಾ ಸೋಂಕು ಅಭಿವೃದ್ಧಿ ದರ ಶೇ.6.4 ರಷ್ಟಿದ್ದು ಸೋಂಕಿತರ ಪ್ರಮಾಣದಲ್ಲಿ ರಾಜ್ಯ 11ನೇ ಸ್ಥಾನದಲ್ಲಿ ಮುಂದುವರೆದಿದೆ ಎಂದು ಹೇಳಿದರು.

ಪುಟ್ಟಮಕ್ಕಳಿಗೆ ಸೋಂಕು:

ಹುಬ್ಬಳ್ಳಿ-ಧಾರವಾಡದಲ್ಲಿ ದೆಹಲಿ ಪ್ರವಾಸ ಹಿನ್ನೆಲೆಯಿಂದ ಸೋಂಕಿತನಾಗಿದ್ದ 194ನೇ ಸೋಂಕಿತನಿಂದ 3.6 ವರ್ಷ, 5 ವರ್ಷದ ಪುಟ್ಟಗಂಡು ಮಕ್ಕಳು, 7 ವರ್ಷದ ಬಾಲಕಿ, 37 ವರ್ಷದ ವ್ಯಕ್ತಿ ಸೇರಿ ನಾಲ್ಕು ಮಂದಿಗೆ ಸೋಂಕು ಹರಡಿದೆ.

ಉಳಿದಂತೆ ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದ 170ನೇ ಸೋಂಕಿತನಿಂದ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ 60 ವರ್ಷದ ಮಹಿಳೆ (ಸೋಂಕಿತನ ತಾಯಿ), ಸೋಂಕಿತನ 8 ವರ್ಷದ ಮಗಳು, 18 ವರ್ಷದ ಸಹೋದರಿಯ ಪುತ್ರನಿಗೆ ಸೇರಿ ಮೂರು ಮಂದಿಗೆ ಸೋಂಕು ತಗುಲಿದೆ.

ದೇಶ​ದಲ್ಲಿ ಕೊರೋನಾ 'ಮಹಾ' ಸ್ಫೋಟ: ಈ ರಾಜ್ಯದಲ್ಲಿ ಒಂದೇ ದಿನ 352 ಕೇಸ್

ಬಾಗಲಕೋಟೆಯಲ್ಲಿ ತಬ್ಲೀಘಿ ಜಮಾತ್‌ನ 164ನೇ ಸೋಂಕಿತನಿಂದ ಬಾಗಲಕೋಟೆಯ ಮುಧೋಳದ 27 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇನ್ನು ಬೀದರ್‌ನ 16 ವರ್ಷದ ಯುವತಿ ಹಾಗೂ 35 ವರ್ಷದ ಮಹಿಳೆಗೆ ತಬ್ಲೀಘಿ ಜಮಾತ್‌ ಭೇಟಿ ಹಿನ್ನೆಲೆಯ 211ನೇ ಸೋಂಕಿತೆಯಿಂದ ಸೋಂಕು ಹರಡಿದೆ.

ಬೆಳಗಾವಿಯಲ್ಲಿ ಮತ್ತೆ 3 ಪ್ರಕರಣ:

ಬೆಳಗಾವಿಯಲ್ಲಿ ಮತ್ತೆ ಮೂರು ಪ್ರಕರಣ ವರದಿಯಾಗಿದ್ದು ತಬ್ಲೀಘಿ ಜಮಾತ್‌ನ 149 ನೇ ಸೋಂಕಿತನಿಂದ 20 ವರ್ಷದ ಮಹಿಳೆ, 14 ವರ್ಷದ ಬಾಲಕಿ, 45 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ದೊಡ್ಡಬಳ್ಳಾಪುರದಲ್ಲಿ ಮೊದಲ ಪ್ರಕರಣ ದಾಖಲಾಗಿದ್ದು, ದೆಹಲಿಯ ಪ್ರಯಾಣ ಹಿನ್ನೆಲೆ ಹೊಂದಿದ್ದ 39 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಉಳಿದಂತೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತೀವ್ರ ಉಸಿರಾಟ ತೊಂದರೆಯುಳ್ಳ (ಎಸ್‌ಎಆರ್‌ಐ) 62 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ.

ಕೊರೋನಾ ವಾಟ್ಸ್‌ಆ್ಯಪ್‌ ಹೆಲ್ಪ್‌ ಡೆಸ್ಕ್‌

ಕೊರೋನಾ ಕುರಿತ ಅಧಿಕೃತ ಮಾಹಿತಿಯನ್ನು ಜನಸಾಮಾನ್ಯರು ಪಡೆದುಕೊಳ್ಳಲು ರಾಜ್ಯ ಸರ್ಕಾರ ಕೊರೋನಾ ಹೆಲ್ಪ್‌ ಡೆಸ್ಕ್‌ ಸೇವೆ ಆರಂಭಿಸಿದೆ.

ಸಾರ್ವಜನಿಕರು ‘87509 71717’ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಮೂಲಕ ‘ಏಜಿ’ ಎಂದು ಸಂದೇಶ ಕಳುಹಿಸಿದರೆ ರಾಜ್ಯದಲ್ಲಿನ ಕೊರೋನಾ ಸ್ಥಿತಿಗತಿಯ ಮಾಹಿತಿ ಬರುತ್ತದೆ. ಸೇವೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಸೋಮವಾರ ಚಾಲನೆ ನೀಡಿದ್ದಾರೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಹೇಳಿದ್ದಾರೆ.