ಬೆಂಗಳೂರು(ಮೇ.18): ರಾಜ್ಯದಲ್ಲಿ ಕೆಲ ದಿನಗಳಿಂದ ತುಸು ತಗ್ಗಿದಂತೆ ಕಂಡಿದ್ದ ಕೊರೋನಾ ಸೋಮವಾರ ಮತ್ತೆ ಅಬ್ಬರಿಸಿದ್ದು, 38,603 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 476 ಮಂದಿ ಮೃತರಾಗಿದ್ದಾರೆ.

ಆತಂಕದ ಸಂಗತಿಯೆಂದರೆ, ಪಾಸಿಟಿವಿಟಿ ದರ ಶೇ.39.70 ಆಗಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ. ಅಂದರೆ, 100 ಮಂದಿಗೆ ಕೊರೋನಾ ಪರೀಕ್ಷೆ ನಡೆಸಿದರೆ ಸರಿಸುಮಾರು 40 ಮಂದಿ ಸೋಂಕಿತರು ಎಂದು ದೃಢವಾಗುತ್ತಿದೆ. ಇಷ್ಟೊಂದು ಭಾರಿ ಪ್ರಮಾಣದಲ್ಲಿ ಪಾಸಿಟಿವಿಟಿ ದರ ದಾಖಲಾಗುವುದರೊಂದಿಗೆ ಕೋವಿಡ್‌-19 ರಾಜ್ಯದ ನಗರ, ಜಿಲ್ಲಾ ಕೇಂದ್ರಗಳನ್ನು ದಾಟಿ ಹಳ್ಳಿ ಹಳ್ಳಿಗೂ, ಗಲ್ಲಿ ಗಲ್ಲಿಗೂ, ಮನೆ ಮನೆಗೂ ವ್ಯಾಪಿಸಿದೆ ಎಂಬುದು ಸ್ಪಷ್ಟ. ರಾಜ್ಯದಲ್ಲಿ ಕಳೆದ ಮೇ 15ರಂದು ಶೇ.35.20ರಷ್ಟು ಪಾಸಿಟಿವಿಟಿ ದರ ದಾಖಲಾಗಿದ್ದು ಆ ಬಳಿಕದ ಗರಿಷ್ಠ ಪಾಸಿಟಿವಿಟಿ ದರ ಸೋಮವಾರ ದಾಖಲಾಗಿದೆ.

"

ಈ ಪ್ರಮಾಣದಲ್ಲಿ ಸೋಂಕು ಹರಡಿದ್ದರೂ ಕೋವಿಡ್‌ ಪರೀಕ್ಷೆ ಕಡಿಮೆಯಾಗುತ್ತಿರುವುದು ಆತಂಕದ ವಿಚಾರ. ಮಾಚ್‌ರ್‍ 29ರಂದು 87 ಸಾವಿರ ಪರೀಕ್ಷೆ ನಡೆದ ಬಳಿಕ ಮೊದಲ ಬಾರಿಗೆ ಲಕ್ಷಕ್ಕಿಂತ ಕಡಿಮೆ ಪರೀಕ್ಷೆ ನಡೆದಿದೆ. ಸೋಮವಾರ ಕೇವಲ 97,236 ಪರೀಕ್ಷೆ ನಡೆದಿದ್ದರೂ 39 ಸಾವಿರದ ಸಮೀಪ ಸೋಂಕಿತರು ಪತ್ತೆಯಾಗಿದ್ದಾರೆ.

ಭಾನುವಾರ 31 ಸಾವಿರಕ್ಕೆ ಕುಸಿದಿದ್ದ ಸೋಂಕಿತರ ಸಂಖ್ಯೆ ಮತ್ತೆ ಏರಿಕೆ ದಾಖಲಿಸಿದೆ. ಬೆಂಗಳೂರು ನಗರದಲ್ಲಿ 13,338 ಪ್ರಕರಣ ದಾಖಲಾಗಿದ್ದು ರಾಜ್ಯದ ಉಳಿದ ಭಾಗದಲ್ಲಿ 25,265 ಪ್ರಕರಣ ವರದಿಯಾಗಿದೆ. ಒಟ್ಟು ಪ್ರಕರಣದಲ್ಲಿ ಶೇ.65ರಷ್ಟುರಾಜ್ಯದ ವಿವಿಧ ಭಾಗಗಳಿಂದ ಬಂದಿದೆ.

ಕಳೆದ 4 ದಿನಗಳಿಂದ 400ರ ಸಮೀಪದಲ್ಲಿದ್ದ ಸಾವಿನ ಪ್ರಮಾಣ 476ಕ್ಕೆ ಏರಿಕೆ ಆಗಿದೆ. ಬೆಂಗಳೂರು ನಗರದಲ್ಲಿ 239 ಮಂದಿ ಮರಣವನ್ನಪ್ಪಿದ್ದಾರೆ. ಮರಣ ದರ ಶೇ.1.23 ರಷ್ಟಿದೆ.

ಒಂದೇ ದಿನ 34,635 ಮಂದಿ ಗುಣಮುಖರಾಗಿದ್ದು ಒಟ್ಟು ಗುಣಮುಖರಾದವರ ಸಂಖ್ಯೆ 16.16 ಲಕ್ಷಕ್ಕೆ ಏರಿಕೆ ಆಗಿದೆ. ಈ ಮಧ್ಯೆ 6.03 ಲಕ್ಷ ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಈವರೆಗೆ 22.42 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು ಒಟ್ಟು 22,313 ಮಂದಿ ಮೃತರಾಗಿದ್ದಾರೆ.

ಹಾಸನ 29, ಬಳ್ಳಾರಿ 17, ಶಿವಮೊಗ್ಗ, ಕಲಬುರಗಿ, ಉತ್ತರ ಕನ್ನಡ ತಲಾ 15, ತುಮಕೂರು 14, ಬೆಂಗಳೂರು ಗ್ರಾಮಾಂತರ 13, ಮಂಡ್ಯ ಮತ್ತು ಹಾವೇರಿಯಲ್ಲಿ ತಲಾ 10 ಮಂದಿ ಮೃತರಾಗಿದ್ದಾರೆ.

ಹಾಸನ 2,324, ಬಳ್ಳಾರಿ 2,322, ಬೆಳಗಾವಿ 1,748, ಮಂಡ್ಯ 1,087, ಮೈಸೂರು 1,980, ಶಿವಮೊಗ್ಗ 1,322, ತುಮಕೂರು 1,915, ಉತ್ತರ ಕನ್ನಡದಲ್ಲಿ 1,288 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಲಸಿಕೆ ಅಭಿಯಾನ:

ಸೋಮವಾರ ಒಟ್ಟು 67,582 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ. ಈ ಪೈಕಿ 16,107 ಮಂದಿ ಎರಡನೇ ಡೋಸ್‌ ಮತ್ತು 51,475 ಮಂದಿ ಮೊದಲ ಡೋಸ್‌ ಲಸಿಕೆ ಪಡೆದಿದ್ದಾರೆ. ಯಾರಿಗೂ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿಲ್ಲ.

ಆರೋಗ್ಯ ಕಾರ್ಯಕರ್ತರು 1,077, ಮುಂಚೂಣಿ ಕಾರ್ಯಕರ್ತರು 4,100, 18 ವರ್ಷದಿಂದ 44 ವರ್ಷದೊಳಗಿನ 2,821, 45 ವರ್ಷ ಮೇಲ್ಪಟ್ಟ43,477 ಮಂದಿ ಮೊದಲ ಡೋಸ್‌ ಸ್ವೀಕರಿಸಿದ್ದಾರೆ. ಆರೋಗ್ಯ ಕಾರ್ಯಕರ್ತರು 645, ಮುಂಚೂಣಿ ಕಾರ್ಯಕರ್ತರು 925, 45 ವರ್ಷ ಮೇಲ್ಪಟ್ಟ14,537 ಮಂದಿ ಎರಡನೇ ಡೋಸ್‌ ಸ್ವೀಕರಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona