Asianet Suvarna News Asianet Suvarna News

ಪುನೀತ್‌ ರಾಜ್‌ಕುಮಾರ್‌ಗೆ ಇಂದು ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ಪ್ರದಾನ

ರಾಜ್ಯ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮಂಗಳವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

karnataka ratna award to puneeth rajkumar on november 1st gvd
Author
First Published Nov 1, 2022, 2:45 AM IST

ಬೆಂಗಳೂರು (ನ.01): ರಾಜ್ಯ ಸರ್ಕಾರ ನೀಡುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮಂಗಳವಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದು.

ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆಯನ್ನು ನೀಡಿದ ವ್ಯಕ್ತಿಗಳಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುತ್ತದೆ. ಮಂಗಳವಾರ ಸಂಜೆ 4 ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪುನೀತ್‌ ರಾಜ್‌ಕುಮಾರ್‌ ಪತ್ನಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಸಮಾರಂಭಕ್ಕೆ ತಮಿಳಿನ ನಟ ರಜನಿಕಾಂತ್‌ ಮತ್ತು ತೆಲುಗಿನ ಜ್ಯೂನಿಯರ್‌ ಎನ್‌.ಟಿ.ಆರ್‌. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಪುನೀತ್‌ಗೆ ಕರ್ನಾಟಕ ರತ್ನ; ರಜನಿಕಾಂತ್ ಸೇರಿ ಯಾರೆಲ್ಲ ಭಾಗಿಯಾಗುತ್ತಿದ್ದಾರೆ? ಇಲ್ಲಿದೆ ಅತಿಥಿಗಳ ಲಿಸ್ಟ್

ಇನ್ನು, ರಾಜ್ಯದಿಂದಲೂ ಒಬ್ಬರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇಸ್ಫೋಸಿಸ್‌ ಫೌಂಡೇಷನ್‌ನ ಮುಖ್ಯಸ್ಥರಾದ ಸುಧಾಮೂರ್ತಿ ಅವರಿಗೆ ಆಹ್ವಾನ ನೀಡಲಾಗಿದೆ. ಅಲ್ಲದೇ, ನಟ ಡಾ.ರಾಜ್‌ಕುಮಾರ್‌ ಅವರ ಕುಟುಂಬ 50 ಮಂದಿಗೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕನ್ನಡಚಿತ್ರರಂಗದ ಹಲವು ನಟ-ನಟಿಯರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಗಾಯಕ ವಿಜಯಪ್ರಕಾಶ್‌ ತಂಡದವರ ಗಾಯನ ಇರಲಿದೆ. ಸುಮಾರು 5 ಸಾವಿರ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತಿದ್ದು, ವಿಧಾನಸೌಧದ ಹೊರಗೂ ಭಾರೀ ಪ್ರಮಾಣದಲ್ಲಿ ಪುನೀತ್‌ ರಾಜ್‌ಕುಮಾರ್‌ ಅಭಿಮಾನಿಗಳು ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌, ಕಂದಾಯ ಸಚಿವ ಆರ್‌.ಅಶೋಕ್‌, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಭಾಪತಿ ರಘುನಾಥ ಮಲ್ಕಾಪುರೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಇತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕರ್ನಾಟಕ ರತ್ನ ಪ್ರಶಸ್ತಿಯು ಪೂರ್ಣ ಬೆಳ್ಳಿಯಲ್ಲಿರಲಿದ್ದು, 50 ಗ್ರಾಂ ಚಿನ್ನದ ಪದಕ ಸಹ ಇರಲಿದೆ. ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಒಂದು ಶಾಲು ಇರಲಿದೆ. ಪ್ರಶಸ್ತಿ ಸಮಾರಂಭವನ್ನು ಕಂಠೀರವ ಸ್ಟೇಡಿಯಂ ನಲ್ಲಿ ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಆದರೆ, ರಾಜ್‌ಕುಮಾರ್‌ ಕುಟುಂಬ ಸದಸ್ಯರ ಆಶಯದ ಮೇರೆಗೆ ವಿಧಾನಸೌಧದ ಮುಂಭಾಗದಲ್ಲಿ ಪ್ರದಾನ ಮಾಡಲಾಗುತ್ತಿದೆ.

ಸಚಿವರಿಂದ ಸಿದ್ಧತಾ ಕಾರ್ಯ ಪರಿಶೀಲನೆ: ಮಂಗಳವಾರ ರಾಜ್ಯದ ಪ್ರತಿಷ್ಠಿತ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದರಿಂದ ಸಿದ್ಧತಾ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಕಾರ್ಯಕ್ರಮದ ಸಿದ್ದತೆಗಳ ಕುರಿತು ಸೋಮವಾರ ಕರ್ನಾಟಕ ರತ್ನ ಪ್ರಶಸ್ತಿ ಉಸ್ತುವಾರಿ ಸಮಿತಿ ಅಧ್ಯಕ್ಷ ಮತ್ತು ಕಂದಾಯ ಸಚಿವ ಆರ್‌.ಅಶೋಕ್‌ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ ಕುಮಾರ್‌ ಸ್ಥಳ ಪರಿಶೀಲನೆ ನಡೆಸಿ ಅಂತಿಮ ಹಂತದ ಸಿದ್ಧತೆಗಳನ್ನು ವೀಕ್ಷಿಸಿದರು.

9ನೇ ‘ಕರ್ನಾಟಕ ರತ್ನ’: ಕರ್ನಾಟಕ ರತ್ನ ಪ್ರಶಸ್ತಿಗೆ ಈವರೆಗೆ ಎಂಟು ಮಂದಿ ಭಾಜನರಾಗಿದ್ದು, ಇದಿಗ ಒಂಬತ್ತನೇಯವರಾಗಿ ನಟ ಪುನೀತ್‌ ರಾಜ್‌ಕುಮಾರ್‌ಗೆ ನೀಡಿ ಗೌರವಿಸಲಾಗುತ್ತಿದೆ. ಮರಣೋತ್ತರವಾಗಿ ಪುನೀತ್‌ಗೆ ಪ್ರಶಸ್ತಿ ಲಭಿಸಲಿದೆ. ಸಾಹಿತ್ಯ ಕ್ಷೇತ್ರದಲ್ಲಿ ರಾಷ್ಟ್ರಕವಿ ಕುವೆಂಪು, ಸಿನಿಮಾರಂಗದಲ್ಲಿ ಡಾ.ರಾಜ್‌ಕುಮಾರ್‌, ರಾಜಕೀಯ ಕ್ಷೇತ್ರದಲ್ಲಿ ಎಸ್‌.ನಿಜಲಿಂಗಪ್ಪ, ವಿಜ್ಞಾನ ಕ್ಷೇತ್ರದಲ್ಲಿ ಪ್ರೊ.ಸಿ.ಎನ್‌.ಆರ್‌.ರಾವ್‌, ಸಂಗೀತ ಕ್ಷೇತ್ರದಲ್ಲಿ ಪಂಡಿತ್‌ ಭೀಮಸೇನ ಜೋಶಿ, ಸಮಾಜಸೇವೆ ಕ್ಷೇತ್ರದಲ್ಲಿ ಶಿವಕುಮಾರ್‌ ಸ್ವಾಮೀಜಿ, ಸಾಹಿತ್ಯ ಕ್ಷೇತ್ರದಲ್ಲಿ ಡಾ. ದೇ.ಜವರೇಗೌಡ, ಸಮಾಜ ಸೇವೆ ಕ್ಷೇತ್ರದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಈಗಾಗಲೇ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಬಳಿಕ ಮಾತನಾಡಿದ ಕಂದಾಯ ಸಚಿವ ಅಶೋಕ್‌, ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸೂಪರ್‌ ಸ್ಟಾರ್‌ ರಜನಿಕಾಂತ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಆಗಮಿಸುತ್ತಿದ್ದಾರೆ. ಸಮಾರಂಭದಲ್ಲಿ ಸುಮಾರು 25 ಸಾವಿರ ಜನರು ಸೇರುವ ಸಾಧ್ಯತೆ ಇದೆ. ಸಿನಿಮಾ ಗಣ್ಯರು ಸೇರಿದಂತೆ ಒಟ್ಟು ಐದು ಸಾವಿರ ಪಾಸ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ವಿಧಾನಸೌಧದ ಮುಂಭಾಗದ ರಸ್ತೆಯನ್ನು ಬ್ಲಾಕ್‌ ಮಾಡಲಾಗುತ್ತಿದೆ. ವಿಧಾನಸೌಧದ ಬಳಿ 10ಕ್ಕೂ ಎಚ್ಚು ಎಲ್‌ಇಡಿ ಹಾಕಲಾಗುತ್ತದೆ. ಪುನೀತ್‌ ತೀರಿ ಹೋಗಿ ಒಂದು ವರ್ಷವಾದರೂ ಅವರ ಮೇಲಿನ ಅಭಿಮಾನ ಹೆಚ್ಚಿದೆ. ಅವರ ಸಮಾಧಿಗೆ ಸಾವಿರಾರು ಜನ ಬಂದು ಹೋಗುತ್ತಿದ್ದಾರೆ. ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುತ್ತಿರುವುದು ಹೆಮ್ಮೆ ಇದೆ. ಈ ಪ್ರಶಸ್ತಿ ಗೌರವ ರೂಪದಲ್ಲಿ ನಿಡಲಾಗುತ್ತದೆ ಎಂದು ತಿಳಿಸಿದರು.

Puneeth Rajkumar ಗಂಧದ ಗುಡಿ ಸಿನಿಮಾ ನೋಡಿ ಅಪ್ಪನ ಜೊತೆಗಿರುವ ಬಾಲ್ಯದ ಫೋಟೋ ಹಂಚಿಕೊಂಡ ಧೃತಿ!

ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್‌ ಮಾತನಾಡಿ, ಕಾರ್ಯಕ್ರಮದ ವೇಳಾಪಟ್ಟಿ ಮಾಹಿತಿ ನೀಡಿದರು. ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕುರಿತೂ ಪ್ರತಿಕ್ರಿಯೆ ನೀಡಿದ ಅವರು, ಈ ಬಾರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯು ಸಾಧಕರನ್ನು ಹುಡುಕಿಕೊಂಡು ಹೋಗಿದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಹಲವರ ಫೋಟೋ ಕೇಳಲಾಯಿತು. ಅನೇಕರ ಬಳಿ ಫೋಟೋನೇ ಇರಲಿಲ್ಲ. ಮೌನವಾಗಿರುವ ಸಾಧಕರನ್ನು ಹುಡುಕಿ ಹೊರ ತರುವ ಕೆಲಸ ಮಾಡಲಾಗಿದೆ. ಪೌರಕಾರ್ಮಿಕ, ದೈವ ನರ್ತನ ಮಾಡುವವರನ್ನು, ವಿಕಲಚೇತನ ಕ್ರೀಡಾಪಟು ಸೇರಿದಂತೆ ಹಲವರನ್ನು ಗುರುತಿಸಲಾಗಿದೆ. ಮಂಗಳವಾರ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

Follow Us:
Download App:
  • android
  • ios