ಕಳೆದ 6 ತಿಂಗಳಿಂದ ರಾಜ್ಯ ಸರ್ಕಾರದಿಂದ ಕಮಿಷನ್‌ ಬಾರದ ಕಾರಣ, ಪಡಿತರ ವಿತರಕರ ಸಂಘವು ನವೆಂಬರ್‌ ತಿಂಗಳ ಪಡಿತರ ವಿತರಣೆಯನ್ನು ರಾಜ್ಯಾದ್ಯಂತ ಸ್ಥಗಿತಗೊಳಿಸಲು ನಿರ್ಧರಿಸಿದೆ. ಸರ್ಕಾರದ ಈ ನಡೆಯ ವಿರುದ್ಧ ಸಂಘವು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದೆ.

- ಯಾದಗಿರಿ (ನ.9): ಕಳೆದ 6 ತಿಂಗಳಿಂದ ಪಡಿತರ ವಿತರಕರಿಗೆ ರಾಜ್ಯ ಸರ್ಕಾರದಿಂದ ಸಿಗಬೇಕಾದ ಕಮಿಷನ್‌ ಬರದಿದ್ದರಿಂದ ಸಗಟು ಮಳಿಗೆಗಳಿಂದ ನವೆಂಬರ್‌ ತಿಂಗಳ ಪಡಿತರ ಸ್ವೀಕರಿಸದೆ, ರಾಜ್ಯಾದ್ಯಂತ ಪಡಿತರ ವಿತರಿಸದಿರಲು ಪಡಿತರ ವಿತರಕರ ಸಂಘ ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ:

ರಾಜ್ಯ ಸರ್ಕಾರದ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕಲ್ಯಾಣ ಕರ್ನಾಟಕ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ‌ ನಿರ್ದೇಶಕ ಆರ್.ಮಹಾದೇವಪ್ಪ ಅವರು, ರಾಜ್ಯಾದ್ಯಂತ ಪಡಿತರ ವಿತರಕರಿಗೆ ಕಮಿಷನ್ ಬರದೆ ಇರುವುದರಿಂದ ತುಂಬಾ ತೊಂದರೆಯಾಗಿದ್ದು, ಈ ಸಮಸ್ಯೆ ಬಗ್ಗೆ ಸಂಘದ ರಾಜ್ಯಾಧ್ಯಕ್ಷ ಕೃಷ್ಟಪ್ಪ ಅವರು ಸಿಎಂ, ಡಿಸಿಎಂ, ಆಹಾರ ಇಲಾಖೆ ಪ್ರಧಾನ ಕಾರ್ಯದರ್ಶಿ, ಆಯುಕ್ತರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ನವೆಂಬರ್‌ ತಿಂಗಳ ಪಡಿತರ ವಿತರಣೆ ಮಾಡದಿರಲು ಸಂಘ ನಿರ್ಧರಿಸಿದೆ ಎಂದರು.

ಕೇಂದ್ರದ ಎನ್‌ಎಫ್‌ಎಸ್ 2 ತಿಂಗಳ ಕಮಿಷನ್ ಮಾತ್ರ ಬಂದಿದೆ

ಕೇಂದ್ರ‌ ಸರ್ಕಾರದ ಎನ್ಎಫ್ಎಸ್ ಅಕ್ಕಿಗೆ ಸಂಬಂಧಪಟ್ಟಂತೆ 2 ತಿಂಗಳ ಕಮಿಷನ್ ಬಂದಿದೆ. ಆದರೆ, ರಾಗಿ ಮತ್ತು ಜೋಳಕ್ಕೆ ಸಂಬಂಧಿಸಿದ ಕಮಿಷನ್‌ ಇನ್ನೂ ಬಂದಿಲ್ಲ. ನಮ್ಮ ಶ್ರಮಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಅಳಲು ತೊಡಿಕೊಂಡರು.