ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಅವರು, ದೇಶದಲ್ಲಿ ಕರ್ನಾಟಕವು 5ನೇ ಅತಿ ಹೆಚ್ಚು ಭ್ರಷ್ಟ ರಾಜ್ಯವಾಗಿದ್ದು, ಇಲ್ಲಿ ಶೇ.63ರಷ್ಟು ಭ್ರಷ್ಟಾಚಾರವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿದ್ದು, ಇದರ ನಿರ್ಮೂಲನೆಗೆ ಕರೆ ನೀಡಿದ್ದಾರೆ.
ಬೆಂಗಳೂರು(ಡಿ.4): ದೇಶದಲ್ಲಿ ಅತಿಹೆಚ್ಚು ಭ್ರಷ್ಟಾಚಾರವಿರುವ ರಾಜ್ಯಗಳಲ್ಲಿ ಕರ್ನಾಟಕ ಐದನೆಯ ಸ್ಥಾನ ಪಡೆದಿದ್ದು, ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಹೈಕೋರ್ಟ್ ವಕೀಲ ತುಳವನೂರು ಶಂಕರಪ್ಪ ಅವರು ಬರೆದಿರುವ ‘ಓವರ್‌ಸೀಸ್ ಟ್ರಾವೆಲಾಗ್’ ಪ್ರವಾಸ ಕಥನವನ್ನು ಹೈಕೋರ್ಟ್ ವಕೀಲರ ಸಭಾಂಗಣದಲ್ಲಿ ಬುಧವಾರ ಬಿಡುಗಡೆಗೊಳಿಸಿ ಮಾತನಾಡಿ, ಕೇರಳದಲ್ಲಿ ಶೇ.10ರಷ್ಟು ಭ್ರಷ್ಟಾಚಾರವಿದೆ. ಕರ್ನಾಟಕದಲ್ಲಿ ಶೇ.63ರಷ್ಟು ಭ್ರಷ್ಟಾಚಾರ ಇದೆ. ರಾಜ್ಯದ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ತುಂಬಿ ತುಳುಕಾಡುತ್ತಿದೆ. ಮಹಿಳಾ ಅಧಿಕಾರಿಗಳು, ನೌಕರರು ಸಹ ಭ್ರಷ್ಟಾಚಾರದಲ್ಲಿ ಮುಳುಗಿರುವುದೆ ವಿಪರ್ಯಾಸ. ನಾನು ಉಪ ಲೋಕಾಯುಕ್ತ ಆದ ಮೇಲೆ ಇದನ್ನೆಲ್ಲಾ ನೋಡುವ ಅವಕಾಶ ಸಿಕ್ಕಿದೆ ಎಂದರು. ಕಾರ್ಯಕ್ರಮದಲ್ಲಿ ಹೈಕೋರ್ಟ್ ಹಿರಿಯ ನ್ಯಾಯಮೂರ್ತಿ ಅನು ಶಿವರಾಮನ್, ವಕೀಲ ಮತ್ತು ಲೇಖಕ ಶಂಕರಪ್ಪ, ಬೆಂಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಉಪಸ್ಥಿತರಿದ್ದರು.
ಅಲ್ಲದೆ, ಭ್ರಷ್ಟಾಚಾರದ ಪಿಡುಗನ್ನು ತಡೆಯದೇ ಹೋದಲ್ಲಿ ಭವಿಷ್ಯದಲ್ಲಿ ದೇಶಕ್ಕೆ ಭೀಕರ ಅಪಾಯ ಕಟ್ಟಿಟ್ಟ ಬುತ್ತಿ. ಇದೇ ಕಾರಣಕ್ಕೆ ನಾನು ಹೋದ ಕಡೆಯಲ್ಲೆಲ್ಲಾ ಆಸ್ಪತ್ರೆ, ಶಾಲೆ ಹಾಸ್ಟೆಲ್‌ಗಳಲ್ಲಿ ಭ್ರಷ್ಟಾಚಾರ ನಿರ್ಮೂನಲಗೆ ಶಪಥ ಕೈಗೊಳ್ಳುವಂತೆ ಅಲ್ಲಿನ ಸಿಬ್ಬಂದಿಗೆ ಪ್ರೇರೇಪಿಸುತ್ತಿದ್ದೇನೆ. ಭ್ರಷ್ಟಾಚಾರ ನಿರ್ಮೂಲನೆ ಯಜ್ಞದಲ್ಲಿ ವಕೀಲರು ಪಾಲ್ಗೊಂಡು ಸಮಾಜ ಸುಧಾರಣೆಗೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.


