* ಪ್ರಿಯಾಂಕ್ ಖರ್ಗೆ ರೀತಿ ಸಾಕ್ಷ್ಯ ತೋರಿ ಆರೋಪ ಮಾಡಿಲ್ಲ* ಅಕ್ರಮ ನಡೆದಿದ್ದರೆ ತನಿಖೆ ನಡೆಸಿ ಎಂದಿದ್ದೆ: ಚವ್ಹಾಣ್* ಆದ್ದರಿಂದಲೇ ನನಗೆ ಸಿಐಡಿ ನೋಟಿಸ್ ನೀಡಿಲ್ಲ: ಸಚಿವ ಸ್ಪಷ್ಟನೆ
ಬೆಂಗಳೂರು(ಮೇ.06): ಅಭ್ಯರ್ಥಿಗಳು, ಕೆಲ ಶಾಸಕರ ಆರೋಪ ಮತ್ತು ಮಾಧ್ಯಮಗಳ ವರದಿ ಆಧರಿಸಿ ನಾನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಪರೀಕ್ಷಾ ಅಕ್ರಮ ತನಿಖೆಗೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದೆನೇ ಹೊರತು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ರೀತಿ ಆಡಿಯೋ, ವಿಡಿಯೋ ಸಾಕ್ಷ್ಯ ಇಟ್ಟುಕೊಂಡು ಒತ್ತಾಯಿಸಿರಲಿಲ್ಲ. ಹಾಗಾಗಿ ನನಗೆ ಸಿಐಡಿ ನೋಟಿಸ್ ಕೊಟ್ಟಿಲ್ಲ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.
ವಿಕಾಸಸೌಧಲ್ಲಿ ಗುರುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಿದ ಅವರು, ನಾನು ಕಲ್ಯಾಣ ಕರ್ನಾಟಕ ಭಾಗದಿಂದ ಪ್ರತಿನಿಧಿಸುವ ಒಬ್ಬ ಸಚಿವ. ನಮ್ಮ ಭಾಗದ ಅನೇಕ ಅಭ್ಯರ್ಥಿಗಳು ನನ್ನ ಬಳಿ ಬಂದು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ಆರೋಪಿಸಿದ್ದರು. ನಮ್ಮ ಜಿಲ್ಲೆಯ ಕೆಲ ಶಾಸಕರೂ ಈ ಬಗ್ಗೆ ಕೇಳಿದ್ದರು. ಜೊತೆಗೆ ಮಾಧ್ಯಮಗಳಲ್ಲೂ ಈ ಸಂಬಂಧ ವರದಿಗಳಾಗಿತ್ತು. ಇವುಗಳ ಆಧಾರದ ಮೇಲೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದ ನಾನು ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಕೊರಿದ್ದೆ ಅಷ್ಟೆ. ಹಾಗಾಗಿ ನನಗೆ ಸಿಐಡಿಯವರು ನೋಟಿಸ್ ನೀಡುವ ಪ್ರಶ್ನೆ ಬರುವುದಿಲ್ಲ ಎಂದರು.
ಆದರೆ, ಪ್ರಿಯಾಂಕ ಖರ್ಗೆ ಅವರ ವಿಷಯವೇ ಬೇರೆ. ಅವರು ವಿಡಿಯೋ, ಆಡಿಯೋ ಸಾಕ್ಷ್ಯಾಧಾರಗಳನ್ನು ಇಟ್ಟುಕೊಂಡು ಪ್ರೆಸ್‌ಮೀಟ್ ಮಾಡಿದ್ದಾರೆ. ಹಾಗಾಗಿ ಅವರಲ್ಲಿರುವ ಸಾಕ್ಷ್ಯಗಳನ್ನು ನೀಡುವಂತೆ ಸಿಐಡಿ ತನಿಖಾಧಿಕಾರಿಗಳು ಅವರಿಗೆ ನೋಟಿಸ್ ನೀಡಿದ್ದಾರೆ ಎಂದು ಅಭಿಪ್ರಾಯಪಟ್ಟರು.
