ಬೆಂಗಳೂರು[ಜ.15]: ಮೈತ್ರಿ ಸರ್ಕಾರಕ್ಕೆ ‘ಸಂಕ್ರಾಂತಿ ಆಪರೇಷನ್‌’ ಎದುರಾಗಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿರುವ ಹೊತ್ತಿನಲ್ಲೇ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ನಡೆ ನುಡಿಗಳಲ್ಲಿ ಕಾಣಿಸಿಕೊಂಡ ಲವಲವಿಕೆಯು ಮತ್ತಷ್ಟುಕುತೂಹಲ ಹುಟ್ಟುಹಾಕಿದೆ.

ಸಿಟ್ಟಿನ ಸ್ವಭಾವದ ಯಡಿಯೂರಪ್ಪ ಅವರು, ಇತ್ತೀಚೆಗೆ ಕೊನೆ ಕ್ಷಣದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗದೆ ನಿರಾಸೆಗೊಂಡವರಂತೆ ಕಂಡುಬರುತ್ತಿದ್ದರು. ಹೀಗಾಗಿ ಮೈತ್ರಿ ಪಕ್ಷದ ನಾಯಕರ ವಿರುದ್ಧ ಅದರಲ್ಲೂ ಮುಖ್ಯಮಂತ್ರಿಗಳ ಮೇಲಂತೂ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದರು. ಆದರೆ ಸೋಮವಾರ ದಿನವಿಡೀ ದೆಹಲಿಯಲ್ಲಿ ಯಡಿಯೂರಪ್ಪನವರ ಓಡಾಟದಲ್ಲಿ ಆತ್ಮವಿಶ್ವಾಸ ವ್ಯಕ್ತವಾಯಿತು.

ನಗು ಮೊಗದಲ್ಲಿ ಪಕ್ಷದ ಶಾಸಕರ ಜತೆ ಹರಟುತ್ತಿದ್ದ ಅವರು, ಅದೇ ಅವ್ಯಕ್ತ ಸಂತಸದಲ್ಲೇ ಪ್ರಸುತ್ತ ರಾಜಕೀಯ ವಿದ್ಯಮಾನಗಳ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ತಮ್ಮ ನಾಯಕರಲ್ಲಿ ದಿಢೀರನೇ ಕಾಣಿಸಿಕೊಂಡಿರುವ ಉತ್ಸಾಹ ಕಂಡು ಬಿಜೆಪಿ ಶಾಸಕರು ಹುರುಪುಗೊಂಡಿದ್ದಾರೆ. ಬಿಜೆಪಿ ಸರ್ಕಾರ ರಚನೆಯಾಗಬಹುದು ಎಂಬ ವಿಶ್ವಾಸದ ಮಾತುಗಳು ಬಿಜೆಪಿ ಪಾಳೆಯದಿಂದ ಕೇಳಿಬರುತ್ತಿವೆ.