ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ನಡುವೆ, ಸಚಿವರಾದ ಸತೀಶ್ ಜಾರಕಿಹೊಳಿ ಮತ್ತು ಕೆ.ಎನ್. ರಾಜಣ್ಣ ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ವದಂತಿ ಹಬ್ಬಿದೆ. ಡಿ.ಕೆ. ಶಿವಕುಮಾರ್ ಅವರಿಗೆ ಎರಡು ಹುದ್ದೆ ನೀಡಿರುವುದನ್ನು ಉದಯಪುರ ನಿರ್ಣಯಕ್ಕೆ ವಿರುದ್ಧವಾಗಿದೆ ಎಂದು ಅವರು ವಾದಿಸಿದ್ದಾರೆ.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ಜೋರಾಗಿರುವ ಬೆನ್ನಲ್ಲೇ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಕೆ.ಎನ್. ರಾಜಣ್ಣ ಅವರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದಾಗಿ ವದಂತಿ ಹಬ್ಬಿದ್ದು, ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ.
ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಅವಕಾಶ ನೀಡಿದಂತೆ ಸಚಿವ ಸ್ಥಾನ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡರಲ್ಲೂ ಮುಂದುವರಿಯಲು ತಮಗೆ ಅವಕಾಶ ನೀಡಬೇಕು. ಪಕ್ಷ ಸಂಘಟನೆಯ ಜವಾಬ್ದಾರಿ ಹೊರಲು ಸಿದ್ಧರಿದ್ದೇವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರಿಗೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: KPCC ಹುದ್ದೆಗಾಗಿ ರಾಜಣ್ಣ-ಸತೀಶ್ ಪೈಪೋಟಿ | Congress KPCC President Change | Suvarna Party Rounds
ಈ ವೇಳೆ ಉದಯಪುರ ನಿರ್ಣಯಕ್ಕೆ ವಿರುದ್ಧವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಎರಡು ಹುದ್ದೆ ನೀಡಲಾಗಿದೆ. ಇದೀಗ ವಿವಿಧ ರಾಜ್ಯಗಳಲ್ಲಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಲಾಗುತ್ತಿದ್ದು, ರಾಜ್ಯದಲ್ಲೂ ಬದಲಾವಣೆಗೆ ಇದು ಸೂಕ್ತ ಸಮಯ. ಈ ರೀತಿ ಬದಲಾವಣೆ ಮಾಡುವ ಸಮಯದಲ್ಲಿ ನಮಗೆ ಅವಕಾಶ ನೀಡಬೇಕು. ಈವರೆಗೆ ಶಿವಕುಮಾರ್ ಅವರಿಗೆ ಅವಕಾಶ ನೀಡಿದಂತೆ ಸಚಿವ ಸ್ಥಾನ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನ ಎರಡೂ ಹೊಣೆ ನಿಭಾಯಿಸಲು ನಮಗೆ ಅನುವು ಮಾಡಿಕೊಡಬೇಕು ಎಂದು ಕೋರಿರುವುದಾಗಿ ಮೂಲಗಳು ತಿಳಿಸಿವೆ.
ಆದರೆ, ವೇಣುಗೋಪಾಲ್ ಆಗಲಿ, ಸುರ್ಜೆವಾಲಾ ಆಗಲಿ ಈ ಬಗ್ಗೆ ಸಚಿವರಿಗೆ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಬದಲಿಗೆ ರಾಹುಲ್‌ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
