ಬೆಂಗಳೂರು[ಜ.19]: ಶಾಸಕಾಂಗ ಪಕ್ಷದ ಸಭೆ ನೆಪದಲ್ಲಿ ಕಾಂಗ್ರೆಸ್‌ ಶಾಸಕರೆಲ್ಲರನ್ನೂ ಶುಕ್ರವಾರ ವಿಧಾನಸೌಧದಲ್ಲಿ ಒಟ್ಟುಗೂಡಿಸಿದ ಕಾಂಗ್ರೆಸ್‌ ನಾಯಕತ್ವ ಹಠಾತ್ತಾಗಿ ಎಲ್ಲ ಶಾಸಕರನ್ನು ವಿಧಾನಸೌಧದ ಸಭೆಯಿಂದ ನೇರವಾಗಿ ಈಗಲ್‌ಟನ್‌ ರೆಸಾರ್ಟ್‌ಗೆ ಸ್ಥಳಾಂತರ ಮಾಡುವ ಮೂಲಕ ಆಪರೇಷನ್‌ ಕಮಲದಿಂದ ತಪ್ಪಿಸಿಕೊಳ್ಳಲು ಪ್ರತಿತಂತ್ರದ ಹೂಡಿದೆ.

ಶುಕ್ರವಾರ ಸಂಜೆ ಕರೆದಿದ್ದ ಶಾಸಕಾಂಗ ಪಕ್ಷದ ಸಭೆಗೆ ಶಾಸಕರಾದ ರಮೇಶ್‌ ಜಾರಕಿಹೊಳಿ, ಬಿ. ನಾಗೇಂದ್ರ, ಡಾ. ಉಮೇಶ್‌ ಜಾಧವ್‌, ಮಹೇಶ್‌ ಕುಮಟಳ್ಳಿ ಗೈರು ಹಾಜರಾಗಿದ್ದರು. ಬಸವ ಕಲ್ಯಾಣ ಶಾಸಕ ನಾರಾಯಣರಾವ್‌ ಸಭೆ ಮುಕ್ತಾಯದ ಬಳಿಕ ಕಾಂಗ್ರೆಸ್‌ ಶಾಸಕರನ್ನು ಸೇರಿಕೊಂಡರು. ನಾರಾಯಣರಾವ್‌ ಸೇರಿದಂತೆ ಎಲ್ಲಾ ಶಾಸಕರನ್ನು ನೇರವಾಗಿ ಈಗಲ್‌ಟನ್‌ ರೆಸಾರ್ಟ್‌ಗೆ ಸ್ಥಳಾಂತರಗೊಳಿಸಲಾಯಿತು.

ಸಭೆ ಮುಕ್ತಾಯದ ವೇಳೆಗೆ ವಿಧಾನಸೌಧದ ಬಾಗಿಲಲ್ಲಿ ನಿಂತಿದ್ದ ಸಚಿವ ಜಮೀರ್‌ ಅಹ್ಮದ್‌ಖಾನ್‌ ಮಾಲೀಕತ್ವದ ನ್ಯಾಷನಲ್‌ ಟ್ರಾವೆಲ್ಸ್‌ನ ‘ಕೆಎ-01, ಎಜಿ-0344’ ಹಾಗೂ ‘ಕೆಎ-01, ಎ.ಎಚ್‌. - 2346’ ಸಂಖ್ಯೆಯ ಎರಡು ಬಸ್ಸುಗಳಲ್ಲಿ ಶಾಸಕರನ್ನು ಸ್ಥಳಾಂತರಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಬಸ್ಸುಗಳು ವಿಧಾನಸೌಧದ ಒಳಗಡೆ ಪ್ರವೇಶಿಸುವ ಮೊದಲೇ ಶಾಸಕರೆಲ್ಲರೂ ಸ್ವಂತ ವಾಹನಗಳಲ್ಲಿ ರೆಸಾರ್ಟ್‌ಗೆ ಪ್ರಯಾಣ ಬೆಳೆಸಿದ್ದರು.

ಹೀಗಾಗಿ ಎಜಿ-0344 ಬಸ್ಸಿನಲ್ಲಿ ಸುಮಾರು 15 ಮಂದಿ ಶಾಸಕರು ಹಾಗೂ ಎ.ಎಚ್‌.-2346 ಬಸ್ಸು ಖಾಲಿ ಸೀಟುಗಳೊಂದಿಗೆ ಸಂಜೆ 7 ಗಂಟೆಗೆ ರೆಸಾರ್ಟ್‌ನತ್ತ ತೆರಳಿತು. ಬಸ್ಸಿನಲ್ಲಿ ಅತೃಪ್ತ ಶಾಸಕರ ಪೈಕಿ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಮಾತ್ರ ಇದ್ದರು. ಉಳಿದೆಲ್ಲ ಅತೃಪ್ತ ಶಾಸಕರು ಸ್ವಂತ ವಾಹನಗಳಲ್ಲಿ ರೆಸಾರ್ಟ್‌ನತ್ತ ತೆರಳಿದರು.

ಬಿಜೆಪಿಯವರು ನನ್ನನ್ನು ಸಂಪರ್ಕಿಸಿಲ್ಲ. ಹಿಂದೆ ಸಂಪರ್ಕ ಮಾಡಿ ಆಫರ್‌ ನೀಡಿದ್ದನ್ನು ಪಕ್ಷದ ಗಮನಕ್ಕೆ ತಂದಿದ್ದೇನೆ. ಈ ದಿನ ಮಗಳ ಮದುವೆ ಇದ್ದರೂ ಪಕ್ಷದ ಸೂಚನೆಗೆ ಗೌರವ ಕೊಟ್ಟು ಸಭೆಗೆ ಹಾಜರಾಗಿ ಅನುಮತಿ ಪಡೆದು ಹೋಗುತ್ತಿದ್ದೇನೆ. ನಾನು ಕಾಂಗ್ರೆಸ್‌ ಪಕ್ಷ ಬಿಡುವುದಿಲ್ಲ. ನಾನು ಅತೃಪ್ತ ಶಾಸಕನೂ ಅಲ್ಲ.

- ಬಿ.ಸಿ. ಪಾಟೀಲ್‌, ಹಿರೇಕೆರೂರು ಶಾಸಕ