ಬೆಂಗಳೂರು[ಡಿ.02]: ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಹನಿಟ್ರ್ಯಾಪ್‌ ಜಾಲದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು ಮತ್ತೊಬ್ಬ ಜನಪ್ರತಿನಿಧಿ ಈ ಜಾಲದಲ್ಲಿ ಸಿಲುಕಿದ್ದನ್ನು ಪತ್ತೆ ಹಚ್ಚಿದ್ದಾರೆ.

ಜಾಲಕ್ಕೆ ಸಿಲುಕಿದ್ದ ಜನಪ್ರತಿನಿಧಿಗೆ ದೂರು ನೀಡುವಂತೆ ಸಿಸಿಬಿ ಪೊಲೀಸರು ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಜಾಲದ ಪ್ರಮುಖ ಆರೋಪಿಯನ್ನು ಸಿಸಿಬಿ ಬಲೆಗೆ ಕೆಡವಿದೆ. ಆರೋಪಿಗಳು ಕೊಟ್ಟಮಾಹಿತಿ ಮೇರೆಗೆ ಮತ್ತೊಬ್ಬ ಜನಪ್ರತಿನಿಧಿ ಈ ಜಾಲದಿಂದ ಬ್ಲ್ಯಾಕ್‌ಮೇಲ್‌ಗೆ ಒಳಗಾಗಿದ್ದರು ಎಂಬುದು ತಿಳಿದು ಬಂದಿದೆ. ಇದೇ ರೀತಿ ಹಲವು ಮಂದಿ ಲಕ್ಷಾಂತರ ರುಪಾಯಿ ಕಳೆದುಕೊಂಡಿದ್ದಾರೆ. ಆದರೆ ದೂರು ನೀಡುವ ಬಗ್ಗೆ ಜನಪ್ರತಿನಿಧಿ ಏನನ್ನೂ ಹೇಳಿಲ್ಲ.

ಮರ್ಯಾದೆಗೆ ಅಂಜಿ ಎಲ್ಲರೂ ದೂರು ನೀಡಲು ಹೆದರುತ್ತಿದ್ದಾರೆ. ಜಾಲದಿಂದ ತೊಂದರೆಗೆ ಒಳಗಾದವರು ದೂರು ನೀಡಿದರೆ, ಅಂತಹವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು. ತನಿಖೆಗಾಗಿ ಪ್ರತಿಯೊಬ್ಬರಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅವಧಿಗೆ ಮುನ್ನ ನ್ಯಾಯಾಂಗ ಬಂಧನ:

ಇನ್ನು ಬಂಧಿತ ಆರೋಪಿ ರಾಘವೇಂದ್ರನನ್ನು ಪೊಲೀಸ್‌ ಕಸ್ಟಡಿ ಅವಧಿ ಮುಗಿಯುವ ಮುನ್ನವೇ ಸಿಸಿಬಿ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹನಿಟ್ರ್ಯಾಪ್‌ ಪ್ರಕರಣದಲ್ಲಿ ಆರೋಪಿಗಳಾದ ರಾಘವೇಂದ್ರ, ಪುಷ್ಪ, ಮಂಜುನಾಥ ಹಾಗೂ ಕಲ್ಪನಾ ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ನ.25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ರಾಘವೇಂದ್ರನನ್ನು 10 ದಿನಗಳ (ಡಿ.4ರವರೆಗೆ) ವಶಕ್ಕೆ ಪಡೆದಿದ್ದರು. ಆರು ದಿನಗಳವರೆಗೆ ವಿಚಾರಣೆ ನಡೆಸಿರುವ ಪೊಲೀಸರು, ಶನಿವಾರ (ನ.30) ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.