ಗಿರೀಶ್‌ ಮಾದೇನಹಳ್ಳಿ

ಬೆಂಗಳೂರು[ಜ.07]: ಸೈಬರ್‌ ಅಪರಾಧ ಕೃತ್ಯಗಳ ಪತ್ತೇದಾರಿಕೆಯಲ್ಲಿ ಉದ್ಭವಿಸಿರುವ ತಾಂತ್ರಿಕ ಪರಿಣತರ ಕೊರತೆ ನೀಗಿಸಲು ಸಿಐಡಿ (ರಾಜ್ಯ ಅಪರಾಧ ದಳ) ದೇಶದಲ್ಲೇ ಮೊದಲ ಬಾರಿಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಸೈಬರ್‌ ತಜ್ಞರನ್ನಾಗಿ ರೂಪಿಸುವ ಮಹತ್ವದ ಯೋಜನೆಗೆ ಚಾಲನೆ ನೀಡಿದೆ.

ಪ್ರಸಕ್ತ ವರ್ಷದಿಂದಲೇ ಸೈಬರ್‌ ಪರಿಣತರ ತರಬೇತಿ ಯೋಜನೆ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲಾಗಿದ್ದು, ಮೊದಲ ಹಂತದಲ್ಲಿ ರಾಜ್ಯದ ಎಂಬಿಎ, ಕಾನೂನು ಹಾಗೂ ಮಾಹಿತಿ ತಂತ್ರಜ್ಞಾನ ಎಂಜಿನಿಯರಿಂಗ್‌ನ ಅಂತಿಮ ವರ್ಷದ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ವಿದ್ಯಾರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ .15 ಸಾವಿರ ಗೌರವಧನ ಕೂಡಾ ಲಭಿಸಲಿದೆ.

ಇತ್ತೀಚಿನ ವರ್ಷಗಳಲ್ಲಿ ಸೈಬರ್‌ ವಂಚಕರ ಜಾಲವು ವಿಸ್ತಾರಗೊಳ್ಳುತ್ತಿದ್ದು, ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ತಾಂತ್ರಿಕತೆ ಆವಿಷ್ಕಾರಗೊಂಡಂತೆ ಹೊಸ ಹೊಸ ಬಗೆಯ ಸೈಬರ್‌ ಅಪರಾಧ ಕೃತ್ಯಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಕೃತ್ಯಗಳಿಗೆ ಕಡಿವಾಣ ಹಾಕಲು ಸೈಬರ್‌ ಪರಿಣತರ ಕೊರತೆಯು ತನಿಖೆ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಖಾಸಗಿ ತಂತ್ರಜ್ಞರ ನೇಮಕಕ್ಕೆ ಅನುಮತಿ ನೀಡಿತ್ತು. ಒಂದು ಲಕ್ಷ ರು. ವೇತನದ ಆಫರ್‌ ಕೊಟ್ಟರೂ ನಿಷ್ಣಾತರು ಮಾತ್ರ ಲಭ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಅಂತಿಮವಾಗಿ ಸಿಐಡಿಯ ಡಿಜಿಪಿ ಪ್ರವೀಣ್‌ ಸೂದ್‌ ಅವರು ಇಂಥದ್ದೊಂದು ವಿನೂತನ ಯೋಜನೆಗೆ ಚಾಲನೆ ನೀಡಲು ಮುಂದಾದರು.

ಹೇಗೆ ನಡೆಯಿತು ವಿದ್ಯಾರ್ಥಿಗಳ ಆಯ್ಕೆ:

ಇಂದಿನ ಆಧುನಿಕ ಯುಗದಲ್ಲಿ ಸೈಬರ್‌ ಕ್ರೈಂ ಬಹುದೊಡ್ಡ ಅಪರಾಧ ಲೋಕವಾಗಿ ವಿಸ್ತಾರಗೊಂಡಿದೆ. ಇದರ ನಿಯಂತ್ರಣಕ್ಕೆ ಸಾಕಷ್ಟುಕ್ರಮ ತೆಗೆದುಕೊಳ್ಳಲಾಗಿದ್ದು, ಈಗ ರಾಜ್ಯದ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಕೂಡಾ ಸೈಬರ್‌ ಠಾಣೆಗಳು ಆರಂಭವಾಗಿವೆ. ಆದರೆ ಸೈಬರ್‌ ತಜ್ಞರ ಅಲಭ್ಯತೆಯಿಂದಾಗಿ ತನಿಖೆಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಪೊಲೀಸರಿಗೆ ಸಿಐಡಿಯ ಸೈಬರ್‌ ಅಪರಾಧ ತನಿಖಾ ತರಬೇತಿ ಮತ್ತು ಸಂಶೋಧನಾ ಕೇಂದ್ರದಲ್ಲಿ (ಸಿಸಿಟಿಆರ್‌) ತರಬೇತಿ ಕೊಡಲಾಗುತ್ತದೆ.

ಸೈಬರ್‌ ಪರಿಣತರ ನೇಮಕ ಸಂಬಂಧ ನಾಲ್ಕು ಬಾರಿ ಜಾಹೀರಾತು ನೀಡಲಾಗಿತ್ತು. ತಾಂತ್ರಿಕತೆಯಲ್ಲಿ ನೈಪುಣ್ಯತೆ ಹೊಂದಿರುವ ಅರ್ಹ ವ್ಯಕ್ತಿಗಳಿಗೆ ಒಂದು ಲಕ್ಷದವರೆಗೆ ವೇತನ ನೀಡಲು ತೀರ್ಮಾನಿಸಲಾಗಿತ್ತು. ಹಲವು ವ್ಯಕ್ತಿಗಳನ್ನು ಸಂದರ್ಶಿಸಿದರೂ ಯಾರೊಬ್ಬರು ಆಯ್ಕೆಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೆ ನಾವೇ ಪ್ರತಿಭಾವಂತ ವಿದ್ಯಾರ್ಥಿಗಳನ್ನೇಕೆ ತಯಾರು ಮಾಡಬಾರದು ಎಂಬ ಯೋಚೆನೆ ಬಂದಿತು. ಈ ಬಗ್ಗೆ ಅಧಿಕಾರಿಗಳ ಜೊತೆ ಸಮಾಲೋಚಿಸಿ ಯೋಜನೆ ರೂಪಿಸಲಾಯಿತು ಎಂದು ಸಿಐಡಿ ಡಿಜಿಪಿ ಪ್ರವೀಣ್‌ ಸೂದ್‌ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.

ಪ್ರಸಕ್ತ ವರ್ಷದಿಂದ ಪ್ರಾಯೋಗಿಕವಾಗಿ ಯೋಜನೆ ಜಾರಿಗೆ ಬಂದಿದೆ. ರಾಜ್ಯದ ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಪತ್ರ ಬರೆದು ಅರ್ಜಿ ಆಹ್ವಾನಿಸಲಾಯಿತು. ಆಸಕ್ತ 70 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪ್ರತಿಯೊಬ್ಬ ವಿದ್ಯಾರ್ಥಿಯ ಸಂದರ್ಶನ ನಡೆಸಿ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ. ಎರಡು ತಿಂಗಳ ಇಂಟರ್ನ್‌ಶಿಪ್‌ ಅವಧಿಯಲ್ಲಿ ಸೈಬರ್‌ ಅಪರಾಧಗಳು, ಮಾದರಿಗಳು, ಅವುಗಳ ವಿಸ್ತಾರ, ಕಾಯ್ದೆ-ಕಾನೂನು, ಪತ್ತೇದಾರಿಕೆ ಹಾಗೂ ತನಿಖೆ ಕುರಿತು ಸೈಬರ್‌ ಅಪರಾಧ ತನಿಖಾ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗುತ್ತದೆ.

ಈ ವಿದ್ಯಾರ್ಥಿಗಳಿಗೆ ಪೊಲೀಸ್‌ ಅಧಿಕಾರಿಗಳು ಹಾಗೂ ಕೈಗಾರಿಕೆ ಕ್ಷೇತ್ರದ ಸಂಪನ್ಮೂಲ ವ್ಯಕ್ತಿಗಳು ಬೋಧನೆ ಮಾಡಲಿದ್ದಾರೆ. ತರಬೇತಿ ಪಡೆದ ಬಳಿಕ ವಿದ್ಯಾರ್ಥಿಗಳು ಆಸಕ್ತಿ ತೋರಿದರೆ ಅವರನ್ನು ಹೊರಗುತ್ತಿಗೆ ಆಧಾರದಡಿ ಪೊಲೀಸ್‌ ಇಲಾಖೆಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಮಾಸಿಕ .50 ಸಾವಿರದಿಂದ .1 ಲಕ್ಷದವರೆಗೆ ವೇತನ ಸಿಗಲಿದೆ. ರಾಜ್ಯದ ಸೈಬರ್‌ ವಿಭಾಗಗಳಿಗೆ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಾಗುತ್ತದೆ ಎಂದು ಡಿಜಿಪಿ ವಿವರಿಸಿದರು.

ದೇಶದ ಯಾವ ವಿಶ್ವವಿದ್ಯಾಲಯದಲ್ಲೂ ಸೈಬರ್‌ ಕ್ರೈಂ ಕುರಿತ ವಿಷಯವೇ ಇಲ್ಲ. ಆಕಾಡೆಮಿಕ್‌ ಆಗಿ ವಿದ್ಯಾರ್ಥಿಗಳಿಗೆ ಸೈಬರ್‌ ತರಬೇತಿ ಅಗತ್ಯವಿದೆ. ಇದರಿಂದ ಸೈಬರ್‌ ಅಪರಾಧ ತನಿಖೆಯ ಸಮಸ್ಯೆಗೂ ಪರಿಹಾರ ಸಿಗಲಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ 6 ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಜ.6ರಿಂದ ತರಗತಿಗಳು ಶುರುವಾಗಲಿವೆ. ಪ್ರತಿಕ್ರಿಯೆ ಗಮನಿಸಿ ಮುಂದಿನ ವರ್ಷದಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.

- ಪ್ರವೀಣ್‌ ಸೂದ್‌, ಡಿಜಿಪಿ, ಸಿಐಡಿ