ಬೆಂಗಳೂರು(ಮಾ.28): ಗ್ರಾಮ ಪಂಚಾಯತಿ, ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಧಿಯನ್ನು ಐದು ವರ್ಷದಿಂದ 30 ತಿಂಗಳಿಗೆ ಇಳಿಸುವ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ (ತಿದ್ದುಪಡಿ) ವಿಧೇಯಕ ಸೇರಿದಂತೆ ಮೂರು ವಿಧೇಯಕಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಪರವಾನಗಿ ಪ್ರಾಧಿಕಾರದ ಅನುಮೋದನೆಯೊಂದಿಗೆ ಪರವಾನಗಿ ಪಡೆದಿರುವವನಿಗೆ ಮತ್ತು ವ್ಯವಹಾರದಲ್ಲಿ ಹೂಡಿಕೆ ಮಾಡುವ ಬೇರೊಬ್ಬರಿಗೆ ಪರವಾನಿಗೆ ವರ್ಗಾಯಿಸುವ ಆಯ್ಕೆ ನೀಡುವ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್‌ಗಳ) ನಿಯಂತ್ರಣ (ತಿದ್ದುಪಡಿ) ವಿಧೇಯಕ ಮತ್ತು ಸಮಗ್ರ ಬೆಂಗಳೂರು ಅಭಿವೃದ್ಧಿಗಾಗಿ ಪ್ರತ್ಯೇಕವಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕವನ್ನು ಸುಗ್ರೀವಾಜ್ಞೆ ಮೂಲಕ ಅನುಷ್ಠಾನಗೊಳಿಸಲು ತೀರ್ಮಾನಿಸಲಾಯಿತು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮ ಸ್ವರಾಜ್‌ ಪಂಚಾಯತ್‌ ರಾಜ್‌ ವಿಧೇಯಕ ಮತ್ತು ಕಲ್ಲುಪುಡಿ ಮಾಡುವ ಘಟಕಗಳ ನಿಯಂತ್ರಣ ವಿಧೇಯಕವು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಆದರೆ, ವಿಧಾನಪರಿಷತ್‌ನಲ್ಲಿ ಮಂಡನೆ ಮಾಡಲು ಅವಕಾಶ ಸಿಗಲಿಲ್ಲ. ಇನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವಿಧೇಯಕ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಆದರೆ, ಆಡಳಿತ ಪಕ್ಷದ ಸದಸ್ಯರೇ ಚರ್ಚೆ ಇಲ್ಲದೇ ಅನುಮೋದನೆ ನೀಡುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕಾಗಿ ವಿಧೇಯಕವನ್ನು ಜಂಟಿ ಸದನ ಸಲಹಾ ಸಮಿತಿಗೆ ಒಪ್ಪಿಸಲಾಯಿತು.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಮೂರು ವಿಧೇಯಕಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ ಎಂದು ಹೇಳಿದರು. ಅಲ್ಲದೇ, ಮತ್ಸ್ಯಾಶ್ರಯ ಯೋಜನೆಯನ್ನು ರಾಜೀವ್‌ಗಾಂಧಿ ವಸತಿ ನಿಗಮದಿಂದ ಹಿಂಪಡೆದು ಈ ಮೊದಲಿನಂತೆ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮಕ್ಕೆ ವಹಿಸುವ ಕುರಿತು ಕ್ರಮ ಕೈಗೊಳ್ಳಲಾಗುತ್ತಿದೆ. 2017-18ನೇ ಸಾಲಿನಿಂದ ಮತ್ಸ್ಯಾಶ್ರಯ ಯೋಜನೆಯ ಅನುಷ್ಠಾನವನ್ನು ರಾಜೀವ್‌ಗಾಂಧಿ ವಸತಿ ನಿಗಮಕ್ಕೆ ವಹಿಸಿಕೊಡಲಾಗಿತ್ತು. ಮೂರು ಸಾವಿರ ಮನೆಗಳನ್ನು ನಿರ್ಮಾಣ ಮಾಡಬೇಕಾಗಿತ್ತು. ಆದರೆ, 40 ಮನೆಗಳನ್ನು ಮಾತ್ರ ನಿರ್ಮಿಸಲು ಸಾಧ್ಯವಾಗಿದೆ. ಕೆಲವು ತಾಂತ್ರಿಕ ಕಾರಣಗಳಿಂದ ಅನುಷ್ಠಾನಗೊಳಿಸುವಲ್ಲಿ ವಿಳಂಬವಾಗಿದೆ. ಹೀಗಾಗಿ ಮತ್ಸ್ಯಾಶ್ರಯ ಯೋಜನೆಯನ್ನು ರಾಜೀವ್‌ಗಾಂಧಿ ವಸತಿ ನಿಗಮದಿಂದ ವಾಪಸ್‌ ಪಡೆದು, ಈ ಹಿಂದಿನಂತೆ ಮೀನುಗಾರಿಕೆ ಇಲಾಖೆಗೆ ವಹಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶದಲ್ಲಿ ಮನೆಗಳ ನಿರ್ಮಾಣಕ್ಕೆ 39.63 ಕೋಟಿ ರು. ಅನುದಾನ ನೀಡಲಾಗುವುದು ಎಂದರು.

ಮೈಸೂರು ಸಕ್ಕರೆ ಕಾರ್ಖಾನೆಯನ್ನು 40 ವರ್ಷದ ಷರತ್ತುಬದ್ಧ ಗುತ್ತಿಗೆ ನೀಡಲು ತೀರ್ಮಾನಿಸಲಾಗಿದೆ. ಜೂನ್‌ ತಿಂಗಳಿನಿಂದಲೇ ಕಬ್ಬು ಅರೆಯುವಂತೆ ಸೂಚನೆ ನೀಡಲಾಗುವುದು. ಒಪ್ಪಂದದ ವೇಳೆ ಶೇ.10ರಷ್ಟುಭದ್ರತಾ ಠೇವಣಿ ಇಡುವುದು ಸೇರಿದಂತೆ ಇತರೆ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಹೇಳಿದರು.

ಅಭ್ಯರ್ಥಿಗಳ ನೇಮಕ ಬಗ್ಗೆ ದಾಖಲೆ ಪರಿಶೀಲನೆ:

ಕರ್ನಾಟಕ ಲೋಕಸೇವಾ ಆಯೋಗದಿಂದ ನೇರ ನೇಮಕಾತಿಗೆ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ಮಾಡುವುದು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ವಿಸ್ತೃತ ಪರಿಶೀಲನೆಯನ್ನು ಆಯೋಗದಿಂದ ವಾಪಸ್‌ ಪಡೆದು ಇಲಾಖೆಗಳಿಗೆ ವರ್ಗಾಯಿಸಲು ತೀರ್ಮಾನಿಸಲಾಗಿದೆ. ಇದರಿಂದ ಸಮಯ ಉಳಿತಾಯವಾಗಲಿದ್ದು, ನೇಮಕ ಪ್ರಕ್ರಿಯೆಯು ಬೇಗ ಮುಕ್ತವಾಗಲಿದೆ. ದಾಖಲಾತಿಗಳನ್ನು ವಿಸ್ತೃತ ಪರಿಶೀಲನೆಯಿಂದ 2-3 ತಿಂಗಳು ವಿಳಂಬವಾಗುತ್ತಿತ್ತು. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಹಲವು ಕಾರಣಾಂತರಗಳಿಂದ ಉದ್ಯಮಗಳು ನಷ್ಟವಾದರೆ ತಮ್ಮನ್ನು ಕಾಯಂಗೊಳಿಸಿ ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಗಳು ಹೆಚ್ಚಿರುವ ಕಾರಣ ಮುಂದಿನ ದಿನದಲ್ಲಿ ಉದ್ಯಮಗಳು ನಷ್ಟವಾದರೆ ಕಾಯಂಗೊಳಿಸಲು ಆಗುವುದಿಲ್ಲ ಎಂಬ ತೀರ್ಮಾನ ಮಾಡಲಾಗಿದೆ. ಆದರೆ, ಮೈಸೂರ್‌ ಲ್ಯಾಂಫ್ಸ್‌ನ ನೌಕರರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಕಾಯಂಗೊಳಿಸುವ ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಸಂಪುಟ ಸಭೆಯ ಇತರೆ ತೀರ್ಮಾನಗಳು

* ಕಲ್ಯಾಣ ಕರ್ನಾಟಕಕ್ಕೆ ಉಸ್ತುವಾರಿ ಸಮಿತಿ ವಿಸರ್ಜಿಸಿ ಪ್ರತಿ ಜಿಲ್ಲೆಗೆ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿ ನೇಮಕಕ್ಕೆ ತೀರ್ಮಾನ

* ಬೆಂಗಳೂರಿನ ಗಾಂಧಿನಗರದ ಕಾಳಿದಾಸ ರಸ್ತೆಯಲ್ಲಿನ ಬಂದೀಖಾನೆ ಅಕಾಡೆಮಿಯ ಮತ್ತೊಂದು ಮಹಡಿ ನಿರ್ಮಾಣಕ್ಕೆ 13.5 ಕೋಟಿ ರು.

* ಹಾವೇರಿ ಜಿಲ್ಲೆಯ ಬಸಾಪುರ, ರಾಯಚೂರು ಜಿಲ್ಲೆಯ ಸಂಕನೂರು ಮತ್ತು ಕೊಪ್ಪಳ ಜಿಲ್ಲೆಯ ಲಿಂಗದಳ್ಳಿಯಲ್ಲಿ ಅಲ್ಪಸಂಖ್ಯಾತ ಶಾಲೆಗಳ ನಿರ್ಮಾಣಕ್ಕೆ ತಲಾ 20 ಕೋಟಿ ರು. ಅನುಮೋದನೆ

* ಕಾರವಾರ ಬಂದರಿನಲ್ಲಿ ಬೆಂಕಿ ನಂದಿಸುವ ಉಪಕರಣಗಳ ಖರೀದಿಗೆ 19 ಕೋಟಿ ರು. ಅನುದಾನ

* ಚಿಕ್ಕಮಗಳೂರು-ಹಿರೇಮಗಳೂರು ರಸ್ತೆ ಕಾಮಗಾರಿಗೆ 29.40 ಕೋಟಿ ರು.