ಮಾಜಿ ಸಿಎಂ ವೀರಪ್ಪ ಮೊಯ್ಲಿ, ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿ ಎಂದಿದ್ದಾರೆ. ಈ ಹೇಳಿಕೆಗೆ ಕಾಂಗ್ರೆಸ್‌ನ ಎರಡು ಬಣಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿದ್ದರಾಮಯ್ಯ ಬಣವು ಇದನ್ನು ತಳ್ಳಿಹಾಕಿದರೆ, ಡಿಕೆಶಿ ಬಣವು ಉತ್ಸಾಹಗೊಂಡಿದೆ.

ಬೆಂಗಳೂರು (ಮಾ.4): ‘ಡಿಕೆ ಶಿವಕುಮಾರ್‌ ಅವರೇ ಮುಂದಿನ ಮುಖ್ಯಮಂತ್ರಿ. ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂಬ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರ ಹೇಳಿಕೆಗೆ ಕಾಂಗ್ರೆಸ್‌ ವಲಯದ ಉಭಯ ಬಣಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಿಜೆಪಿ ನವೆಂಬರ್ ಕ್ರಾಂತಿ ಮುನ್ಸೂಚನೆ?

ವೀರಪ್ಪ ಮೊಯ್ಲಿ ಹೇಳಿಕೆ ಹಿಂದೆ ಬಿಜೆಪಿ ಗುಲ್ಲೆಬ್ಬಿಸಿರುವ ನವೆಂಬರ್‌ ಕ್ರಾಂತಿಯ ಮುನ್ಸೂಚನೆ ಇದೆಯೇ ಎಂಬಂತೆ ಡಿ.ಕೆ. ಶಿವಕುಮಾರ್‌ ಬಣದ ನಾಯಕರ ಉತ್ಸಾಹ ಇಮ್ಮಡಿಯಾಗಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಾಯಕರು ಮೊಯ್ಲಿ ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಇದು ಆ ಕ್ಷಣಕ್ಕೆ ಡಿ.ಕೆ. ಶಿವಕುಮಾರ್‌ ಅವರಿಗೆ ಖುಷಿ ನೀಡಲು ನೀಡಿದ ಹೇಳಿಕೆಯಷ್ಟೇ ಎಂದು ತಳ್ಳಿ ಹಾಕುತ್ತಾರೆ.

ಇದನ್ನೂ ಓದಿ: 'ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ': ವೀರಪ್ಪ ಮೊಯ್ಲಿ ಹೇಳಿಕೆ ಸಂಚಲನ!

ವೀರಪ್ಪ ಮೊಯ್ಲಿ ಬೆಂಬಲ ಯಾರಿಗೆ?

ತಮ್ಮ ರಾಜಕೀಯ ಜೀವನದ 50ನೇ ವರ್ಷದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಿಯವಾಗುವ ಹೇಳಿಕೆಯನ್ನು ವೀರಪ್ಪ ಮೊಯ್ಲಿ ನೀಡಿರುವುದು ಸಹಜ ಹೇಳಿಕೆ. ಇದು ಸಿದ್ದರಾಮಯ್ಯ ವಿರುದ್ಧವೋ ಅಥವಾ ಡಿ.ಕೆ. ಶಿವಕುಮಾರ್ ಪರ ಹೇಳಿಕೆಯೋ ಎಂದು ಬಿಂಬಿಸಲಾಗದು ಎಂದು ಈ ವಲಯ ಅಭಿಪ್ರಾಯ ಪಡುತ್ತಿದೆ.

ಏಕೆಂದರೆ, ಈ ಹೇಳಿಕೆ ಗಂಭೀರವಾದದ್ದು. ಆದರೆ ಹೇಳಿಕೆಗೆ ಗಂಭೀರತೆ ತರುವಂತಹ ಸ್ಥಾನದಲ್ಲಿ ಹೇಳಿಕೆ ನೀಡಿದ ವೀರಪ್ಪ ಮೊಯ್ಲಿ ಅವರು ಸದ್ಯಕ್ಕೆ ಇಲ್ಲ. ಈ ಹಿಂದೆ ಹೈಕಮಾಂಡ್‌ ಜತೆ ನಿಕಟ ಸಂಪರ್ಕ ಹೊಂದಿದ್ದ ವೀರಪ್ಪ ಮೊಯ್ಲಿ ಸದ್ಯಕ್ಕೆ ಹೈಕಮಾಂಡ್‌ಗೆ ಹತ್ತಿರವಿಲ್ಲ. ರಾಜ್ಯ ರಾಜಕಾರಣದಲ್ಲೂ ಅವರಿಗೆ ಅಂತಹ ಮಹತ್ವದ ಪಾತ್ರವೇನೂ ಇಲ್ಲ ಎಂಬುದು ಕಾಂಗ್ರೆಸ್‌ ವಲಯದ ಅಭಿಪ್ರಾಯ.

ಹೈಕಮಾಂಡ್ ವಿರುದ್ಧ ಮೊಯ್ಲಿ ಒಳಬೇಗುದಿ?

ಕಳೆದ ಬಾರಿಯ ಲೋಕಸಭಾ ಚುನಾವಣೆ ವೇಳೆ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ಗೆ ವೀರಪ್ಪ ಮೊಯ್ಲಿ ಹೈಕಮಾಂಡ್‌ ಮಟ್ಟದಲ್ಲಿ ಪ್ರಯತ್ನಿಸಿದ್ದರು. ಆದರೆ, ಹೈಕಮಾಂಡ್‌ ಈ ಬೇಡಿಕೆಗೆ ಮಣೆ ಹಾಕಿರಲಿಲ್ಲ. ಯುವಕರಿಗೆ ಟಿಕೆಟ್ ನೀಡಬೇಕು ಎಂಬ ಪಕ್ಷದ ನಿಲುವಿನಂತೆ ಸಿದ್ದರಾಮಯ್ಯ ಸೂಚಿಸಿದ ರಕ್ಷಾ ರಾಮಯ್ಯಗೆ ಟಿಕೆಟ್ ಸಿಕ್ಕಿತ್ತು. ಈ ಒಳ ಬೇಗುದಿ ಮೊಯ್ಲಿಯವರಿಗೆ ಇರುವುದು ಸಹಜವೇ. ಈ ಬೇಗುದಿಯೂ ಸದರಿ ಹೇಳಿಕೆಯ ಹಿಂದೆ ಕೆಲಸ ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಡಿಕೆಶಿ ಬಣಕ್ಕೆ ಹೊಸ ಹುರುಪು:

ಮತ್ತೊಂದೆಡೆ ಡಿ.ಕೆ. ಶಿವಕುಮಾರ್‌ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಈವರೆಗೆ ಕಿರಿಯ ಶಾಸಕರು ಮಾತ್ರ ಹೇಳಿಕೆ ನೀಡುತ್ತಿದ್ದರು. ಕೆ.ಎನ್‌. ರಾಜಣ್ಣ, ಎಚ್.ಸಿ. ಮಹದೇವಪ್ಪ, ಸತೀಶ್ ಜಾರಕಿಹೊಳಿ ಅವರಂತಹ ಹಿರಿಯ ನಾಯಕರು ಡಿ.ಕೆ. ಶಿವಕುಮಾರ್‌ ವಿರುದ್ಧ ಹೇಳಿಕೆ ನೀಡಿದ್ದರೂ ಕೆಲ ಶಾಸಕರ ಹೊರತಾಗಿ ಪಕ್ಷದ ಹಿರಿಯ ನಾಯಕರು ನೇರಾನೇರ ಡಿ.ಕೆ. ಶಿವಕುಮಾರ್‌ ಪರ ಧ್ವನಿ ಎತ್ತಿರಲಿಲ್ಲ. ಇದೀಗ ಕೇಂದ್ರದ ಮಾಜಿ ಸಚಿವರು ಹಾಗೂ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯ್ಲಿ ಅವರು ಮಲ್ಲಿಕಾರ್ಜುನ ಖರ್ಗೆ ಎಚ್ಚರಿಕೆ ಹೊರತಾಗಿಯೂ ಬಹಿರಂಗ ಹೇಳಿಕೆ ನೀಡಿದ್ದಾರೆ. ಇದು ಡಿ.ಕೆ. ಶಿವಕುಮಾರ್‌ ಬಣದ ನಾಯಕರಲ್ಲಿ ಹೊಸ ಹುರುಪು ಹುಟ್ಟುಹಾಕಿದೆ. 

ನಾವು ಮಾತಾಡಿದಾಗ ಕೇಳ್ತಿದ್ದವರು ಈಗ ಏಕೆ ಮೌನ?: ಜಾರಕಿಹೊಳಿ

 ಅಧಿಕಾರ ಬದಲಾವಣೆ ಕುರಿತು ನಾವು ಮಾತನಾಡಿದಾಗ ಆಕ್ಷೇಪದ ಮಾತು ಆಡುತ್ತಿದ್ದವರು ಮೊಯ್ಲಿ ಅವರ ಹೇಳಿಕೆಗೆ ಯಾಕೆ ಮಾತನಾಡುತ್ತಿಲ್ಲ? ಎಲ್ಲರಿಗೂ ಒಂದೇ ಮಾನದಂಡ ಇರಬೇಕಲ್ಲವೇ? ಎಂದು ಸಚಿವ ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಮೊಯ್ಲಿ ಅವರು ಮಾತನಾಡಿದರೂ ಯಾರೇ ಮಾತನಾಡಿದರೂ ಅಂತಿಮ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟದ್ದು. ಆದರೆ ನಾವು ಮಾತನಾಡುವಾಗ ಕೆಲವರು ಆಕ್ಷೇಪಿಸುತ್ತಿದ್ದರು. ಆಗ ಕೇಳುತ್ತಿದ್ದವರು ಈಗಲೂ ಕೇಳಬೇಕು. ಎಲ್ಲರಿಗೂ ಒಂದೇ ಮಾನದಂಡ ಇರಬೇಕಲ್ಲವೇ ಎಂದಿದ್ದಾರೆ.

ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ರಾಜಕಾರಣಕ್ಕೆ ಏಕೆ ಬಂದರು? ರಾಜಕೀಯ ಎಂಟ್ರಿಯ ಫ್ಲಾಶ್‌ಬ್ಯಾಕ್‌ ಇಲ್ಲಿದೆ!

ಸಿದ್ದು ಟೀಂ ವಾದ ಏನು?

-ಮೊಯ್ಲಿ ಈಗ ಹೈಕಮಾಂಡ್‌ಗೆ ಹತ್ತಿರವಿಲ್ಲ. ರಾಜ್ಯ ರಾಜಕಾರಣದಲ್ಲೂ ಮಹತ್ವದ ಪಾತ್ರ ವಹಿಸುತ್ತಿಲ್ಲ- ಚಿಕ್ಕಬಳ್ಳಾಪುರ ಟಿಕೆಟ್‌ ಮೊಯ್ಲಿ ಪ್ರಯತ್ನಿಸಿದ್ದರು. ಸಿದ್ದು ಸೂಚಿಸಿದ್ದ ರಕ್ಷಾ ರಾಮಯ್ಯಗೆ ಟಿಕೆಟ್‌ ಸಿಕ್ಕಿತ್ತು

- ಆ ಒಳಬೇಗುದಿಯೇ ಡಿಕೆಶಿ ಪರ ಹಾಗೂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡುವಂತೆ ಮಾಡಿರಬಹುದು

ಡಿಕೆಶಿ ಪಡೆ ವಾದವೇನು?- ಡಿಕೆಶಿಗೆ ಸಿಎಂ ಸ್ಥಾನ ನೀಡಬೇಕೆಂದು ಈವರೆಗೆ ಕಿರಿಯ ಶಾಸಕರು ಮಾತ್ರ ಹೇಳಿಕೆ ಕೊಡುತ್ತಿದ್ದರು

- ಹಿರಿಯ ನಾಯಕರ್‍ಯಾರೂ ದನಿ ಎತ್ತಿರಲಿಲ್ಲ. ಖರ್ಗೆ ಎಚ್ಚರಿಕೆ ಹೊರತಾಗಿಯೂ ಈಗ ಮೊಯ್ಲಿ ಮಾತು

- ನವೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ಬಿಜೆಪಿಗರ ಹೇಳಿಕೆ ಬೆನ್ನಲ್ಲೇ ಮೊಯ್ಲಿ ಮಾತಿಂದ ಉತ್ಸಾಹ ಇಮ್ಮಡಿ