ಮುಡಾ ನಿವೇಶನ ಹಂಚಿಕೆ ಪ್ರಕರಣ: ಲೋಕಾಯುಕ್ತ ಪೊಲೀಸರು ನನ್ನ ವಿಚಾರಣೆಗೆ ಕರೆದಿದ್ದು ನಿಜ: ಸಂಸದ ಜಿ ಕುಮಾರ್ ನಾಯಕ
ಮುಡಾ ನಿವೇಶನ ಹಂಚಿಕೆ ವಿಚಾರ ಸಂಬಂಧ ನನಗೆ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಕರೆದಿದ್ರು. ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ನಿಜ ಎಂದು ರಾಯಚೂರು ಸಂಸದ ಜಿ. ಕುಮಾರ್ ನಾಯಕ ತಿಳಿಸಿದರು.
ರಾಯಚೂರು (ಅ.24): ಮುಡಾ ನಿವೇಶನ ಹಂಚಿಕೆ ವಿಚಾರ ಸಂಬಂಧ ನನಗೆ ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಕರೆದಿದ್ರು. ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು ನಿಜ ಎಂದು ರಾಯಚೂರು ಸಂಸದ ಜಿ. ಕುಮಾರ್ ನಾಯಕ ತಿಳಿಸಿದರು.
ಮುಡಾ ನಿವೇಶನ ಹಂಚಿಕೆ ವಿಚಾರ ಸಂಬಂಧ ಇಂದು ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಂಸದರು, ನಾನು 2002ರಿಂದ 2005 ಮೂರು ವರ್ಷಗಳ ಕಾಲ ಮೈಸೂರು ಜಿಲ್ಲಾಧಿಕಾರಿಯಾಗಿ ಸೇವೆ ಮಾಡಿದ್ದೇನೆ. 2005ರ ಕೊನೆಯಲ್ಲಿ ಭೂಮಿ ಪರಿವರ್ತನೆ ಆಗಿದೆ. ಮುಡಾ ನಿವೇಶನ ಹಂಚಿಕೆ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಪ್ಪು ಮಾಡಿದ್ದಾರೆಂದು ಬಿಂಬಿಸುವಂತೆ ದೂರು ಕೊಡಲಾಗಿದೆ. ಆದರೆ ದೂರು ಕೊಟ್ಟವರಿಗೆ ಕಾನೂನಿನ ಎಲ್ಲ ಆಯಾಮದ ಅರಿವು ಇದೆಯೋ ಇಲ್ವೊ ನನಗೆ ಗೊತ್ತಿಲ್ಲ. ವಿಚಾರಣೆ ವೇಳೆ ಎಲ್ಲ ಸವಿಸ್ತಾರವಾಗಿ ತಿಳಿಸಿದ್ದೇನೆ ಎಂದರು.
ಭೂ ಪರಿವರ್ತನೆಯಲ್ಲಿ ಯಾವುದೇ ತಪ್ಪು ಆಗಿಲ್ಲ. 1997-98ರಲ್ಲಿ ಆ ಭೂಮಿ ಸ್ವಾಧೀನವಾಗಿರುತ್ತದೆ. ಆ ಬಳಿಕ ಹಂತವಾಗಿ ಭೂಮಿ ನೋಟಿಫಿಕೇಷನ್ ಆಗುತ್ತೆ. ಅನಂತರ ಭೂಮಿ ಕಳೆದುಕೊಂಡವರಿಗೆ ಅವಾರ್ಡ್ ಕೂಡ ಘೋಷಣೆ ಆಗುತ್ತೆ. ಭೂಮಿ ನೀಡುವವರು ಭೂಮಿ ವಾಪಸ್ ಪಡೆಯಲು 45 ದಿನಗಳ ಒಳಗಾಗಿ ಮನವಿ ಸಲ್ಲಿಕೆ ಮಾಡಿ ಡಿನೋಟಿಫಿಕೇಷನ್ ಮಾಡಿಸಿಕೊಳ್ಳತಾರೆ. ಆಗ ಭೂ ಸ್ವಾಧೀನ ಪ್ರಕ್ರಿಯೆಯಿಂದ ಭೂಮಿ ಕೈಬಿಡಲಾಗುತ್ತದೆ. ಆದರೆ ಭೂಮಿ ಪರಿವರ್ತನೆ ವೇಳೆ ನಮ್ಮ ಮೇಲೆ ಯಾವುದೇ ಒತ್ತಡ ಇರಲಿಲ್ಲ ಎಂದರು.