ಸಂದೀಪ್‌ ವಾಗ್ಲೆ

ಮಂಗಳೂರು[ಮಾ.04]: ರಾಜ್ಯದಲ್ಲಿ ಅನುಷ್ಠಾನದ ಹಂತದಲ್ಲಿರುವ 8 ಕಾಮಗಾರಿಗಳು ಹಾಗೂ ಭವಿಷ್ಯದಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವ 20 ಯೋಜನೆಗಳು ಸೇರಿದಂತೆ ಒಟ್ಟು 28 ಬೃಹತ್‌ ಯೋಜನೆಗಳಲ್ಲಿ ಬರೋಬ್ಬರಿ 30 ಲಕ್ಷಕ್ಕೂ ಅಧಿಕ ಮರಗಳು ಹನನವಾಗುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ.

ಕಳೆದೆರಡು ವರ್ಷಗಳಿಂದ ಪಶ್ಚಿಮ ಘಟ್ಟವು ತೀವ್ರ ತೆರನಾದ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಗಿ ಸಾವಿರಾರು ಜನರು ಅತಂತ್ರರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ಜಾರಿಗೊಳಿಸುತ್ತಿರುವ ಮತ್ತು ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆಗಳಿಂದ ಪಶ್ಚಿಮ ಘಟ್ಟಕ್ಕೆ ದೊಡ್ಡ ಮಟ್ಟದ ಕುತ್ತು ಎದುರಾಗುವ ಭೀತಿ ಎದ್ದಿದೆ.

ಜಾರಿಯಲ್ಲಿರುವ ಯೋಜನೆಗಳು:

ಪರಿಸರ ಹೋರಾಟಗಾರ ಅಖಿಲೇಶ್‌ ಚಿಪ್ಪಳಿ ಅವರು ಸಸ್ಯಸಂಕುಲ ಹಾನಿಯ ಪ್ರಮಾಣವನ್ನು ಪಟ್ಟಿಮಾಡಿದ್ದಾರೆ. ಅನುಷ್ಠಾನದ ಹಂತದ ಯೋಜನೆಗಳಲ್ಲಿ ಎತ್ತಿನಹೊಳೆಗೆ ಈಗಾಗಲೇ 50 ಸಾವಿರ ಮರಗಳನ್ನು ಕಡಿಯಲಾಗಿದ್ದು, ಪೂರ್ಣವಾಗುವಾಗ 1 ಲಕ್ಷ ಮರಗಳು ಆಹುತಿಯಾಗಲಿವೆ. ಬೆಂಗಳೂರು-ಮಂಗಳೂರು ಹೆದ್ದಾರಿ ಅಗಲೀಕರಣಕ್ಕೆ 50 ಸಾವಿರ, ರಾ.ಹೆ. 169 ಅಗಲೀಕರಣಕ್ಕೆ 1 ಲಕ್ಷ, ತುಂಗಾ ಏತ ನೀರಾವರಿಗೆ 50 ಸಾವಿರ, ರಾ.ಹೆ. 4ಎ (ಬೆಳಗಾವಿ- ಪಣಜಿ) ಅಗಲೀಕರಣಕ್ಕೆ 1 ಲಕ್ಷ, ಬೆಂಗಳೂರು- ತುಮಕೂರು- ತರೀಕೆರೆ-ಶಿವಮೊಗ್ಗ-ಹೊನ್ನಾವರ ಚತುಷ್ಪಥ ಕಾಮಗಾರಿಗೆ 2 ಲಕ್ಷ, ಆಗುಂಬೆ-ಮಲ್ಪೆ ರಾ.ಹೆ. 169ಎ ಅಗಲೀಕರಣಕ್ಕೆ 1 ಲಕ್ಷ ಮರಗಳು ಯೋಜನೆ ಪೂರ್ತಿಯಾಗುವ ವೇಳೆಗೆ ಆಹುತಿಯಾಗಲಿವೆ.

ಭವಿಷ್ಯದ ಯೋಜನೆಗಳು:

ಕೈಗಾ ಅಣು ವಿದ್ಯುತ್‌ ಸ್ಥಾವರ ವಿಸ್ತರಣೆಗೆ 54 ಹೆಕ್ಟೇರ್‌ ಪ್ರದೇಶದ 54 ಸಾವಿರ ಮರಗಳನ್ನು ಕಡಿಯುವ ಪ್ರಸ್ತಾವನೆ ಇದ್ದರೆ, ಗೋವಾ- ತಮ್ನಾರ್‌ ಪವರ್‌ ಟ್ರಾನ್ಸ್‌ಮಿಶನ್‌ ಲೈನ್‌ ಯೋಜನೆಗೆ 1.80 ಲಕ್ಷ ಮರಗಳು, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ 5 ಲಕ್ಷ, ಹಾವೇರಿ- ಸಿರಸಿ ರೈಲ್ವೆ ಮಾರ್ಗಕ್ಕೆ ಕೆಲವು ಸಾವಿರ ಮರಗಳು, ಸಿರಸಿ- ಕುಮಟಾ ಹೆದ್ದಾರಿ ಅಗಲೀಕರಣಕ್ಕೆ 30 ಸಾವಿರ, ಶರಾವತಿ ಭೂಗತ ಪಂಪ್‌್ಡ ಸ್ಟೋರೇಜ್‌ ಯೋಜನೆಗೆ 1.50 ಲಕ್ಷ, ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರೆತ್ತುವ ಯೋಜನೆಗೆ ಕೆಲವು ಸಾವಿರ ಮರಗಳು, ತಾಳಗುಪ್ಪ- ಹೊನ್ನಾವರ ರೈಲ್ವೆ ಮಾರ್ಗಕ್ಕೆ 2 ಲಕ್ಷ, ಸಾಗರ-ಸಿಗಂದೂರು-ನಿಟ್ಟೂರು-ಕೊಲ್ಲೂರು ರಸ್ತೆ ಯೋಜನೆಗೆ 2 ಲಕ್ಷ, ರಾಣಿಬೆನೂರು-ಶಿಕಾರಿಪುರ-ಹೊಸನಗರ-ಬೈಂದೂರು ಹೆದ್ದಾರಿ ಅಗಲೀಕರಣಕ್ಕೆ 1.50 ಲಕ್ಷ, ಶಿವಮೊಗ್ಗ- ಶೃಂಗೇರಿ ರೈಲ್ವೆ ಮಾರ್ಗಕ್ಕೆ ಹಲವು ಲಕ್ಷ ಮರಗಳು, ಶಿಶಿಲ- ಭೈರಾಪುರ ರಸ್ತೆಗೆ 1 ಲಕ್ಷ, ಮಡಿಕೇರಿ-ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆಗೆ 1 ಲಕ್ಷ, ಮೈಸೂರು-ಮಡಿಕೇರಿ-ಮಂಗಳೂರು ಹೆದ್ದಾರಿ ಅಗಲೀಕರಣ, ಮೈಸೂರು-ಗೋಣಿಕೊಪ್ಪಲು-ವಿರಾಜಪೇಟೆ- ಕಣ್ಣೂರು ರಸ್ತೆ, ಮೈಸೂರು- ಗೋಣಿಕೊಪ್ಪಲು- ಬಿಟ್ಟಂಗಾಲ- ತಲಶೇರಿ ಹೆದ್ದಾರಿ, ಮಡಿಕೇರಿ- ಭಾಗಮಂಡಲ- ಕರಿಕೆ- ಪಾಣತ್ತೂರು ರಸ್ತೆ ಅಭಿವೃದ್ಧಿಗೆ 2 ಲಕ್ಷ, ಮೈಸೂರು- ತಲಶೇರಿ ರೈಲ್ವೆ ಮಾರ್ಗಕ್ಕೆ 3 ಲಕ್ಷ, ಮೈಸೂರು-ಮಂಗಳೂರು ರೈಲ್ವೆ ಮಾರ್ಗಕ್ಕೆ 3 ಲಕ್ಷ ಮರಗಳು ಆಹುತಿಯಾಗುವ ಆತಂಕವಿದೆ.

ಸಸಿಗಳು ಲೆಕ್ಕವೇ ಇಲ್ಲ: ಹನನವಾಗುವ 30 ಲಕ್ಷ ಮರಗಳು ಅರಣ್ಯ ಇಲಾಖೆ ನಿಗದಿಪಡಿಸಿದ ಮಾನದಂಡದಂತೆ 30 ಸೆಂ.ಮೀ. ಸುತ್ತಳತೆ ಇರುವವುಗಳು, ಸುಮಾರು 150ಕ್ಕೂ ಹೆಚ್ಚು ವರ್ಷ ಬದುಕಿದ ಮರಗಳು. 30 ಸೆ.ಮೀ.ಗಿಂತ ಕಡಿಮೆ ಸುತ್ತಳತೆಯ ಗಿಡಗಳು ಇನ್ನೂ ಹಲವು ಲಕ್ಷಗಳಷ್ಟಿದ್ದು ಲೆಕ್ಕಕ್ಕೆ ಸಿಗಲಾರದಷ್ಟಿವೆ ಎಂದು ಅಖಿಲೇಶ್‌ ಚಿಪ್ಪಳಿ ಹೇಳುತ್ತಾರೆ.

ಗಾಡ್ಗೀಳ್‌ ವರದಿ ಜಾರಿಗೆ ಒತ್ತಾಯ

ಪಶ್ಚಿಮಘಟ್ಟರಕ್ಷಣೆ ಆಗಬೇಕಾದರೆ 2011ರಲ್ಲಿ ಸಲ್ಲಿಕೆಯಾದ ಮಾಧವ ಗಾಡ್ಗೀಳ್‌ ವರದಿಯನ್ನು ಸಂಪೂರ್ಣವಾಗಿ ಜಾರಿಗೊಳಿಸುವುದೊಂದೇ ಪರಿಹಾರ ಎಂದು ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ. ಟಿಂಬರ್‌, ಮರಳು, ಸಿಮೆಂಟ್‌ ಮಾಫಿಯಾಗಳು ಒತ್ತಡ ಹೇರಿ ವರದಿ ಜಾರಿಯನ್ನು ತಡೆಹಿಡಿದಿದ್ದಾರೆ. ವರದಿ ಜಾರಿಯಾದರೆ ರೈತರು, ಅರಣ್ಯದ ಪಾಲಿಗೆ ಆಕ್ಸಿಜನ್‌ ಸಿಗಲಿದೆ ಎನ್ನುವ ಬೇಡಿಕೆ ಮುಂದಿಟ್ಟಿದ್ದಾರೆ.

ಯಾವ ಯೋಜನೆಗೆ ಎಷ್ಟು ಮರ ನಾಶ?

ಬೆಂಗಳೂರು-ಮಂಗಳೂರು ಹೆದ್ದಾರಿ ಅಗಲೀಕರಣ 50 ಸಾವಿರ

ರಾ.ಹೆ. 169 ಅಗಲೀಕರಣ 1 ಲಕ್ಷ

ತುಂಗಾ ಏತ ನೀರಾವರಿ 50 ಸಾವಿರ

ಬೆಳಗಾವಿ- ಪಣಜಿ ಹೈವೇ ಅಗಲೀಕರಣ 1 ಲಕ್ಷ

ಬೆಂಗಳೂರು-ಹೊನ್ನಾವರ 4 ಲೇನ್‌ 2 ಲಕ್ಷ

ಆಗುಂಬೆ-ಮಲ್ಪೆ ಹೆದ್ದಾರಿ 1 ಲಕ್ಷ