* ಅನ್‌ಲಾಕ್‌ 3.0: ದೇಗುಲ, ಸಿನಿಮಾ, ಮಾಲ್‌ಗೆ ಸಮ್ಮತಿ?* 3ನೇ ಹಂತದಲ್ಲಿ ಕೋವಿಡ್‌ ಮಾರ್ಗಸೂಚಿ ಸಡಿಲಿಕೆಗೆ ಸಿದ್ಧತೆ* 2 ದಿನದಲ್ಲಿ ಸಚಿವರು, ಅಧಿಕಾರಿಗಳ ಜೊತೆ ಬಿಎಸ್‌ವೈ ಸಭೆ

ಬೆಂಗಳೂರು(ಜ.30): ಎರಡನೇ ಅಲೆಯ ಕೋವಿಡ್‌ ಸೋಂಕು ರಾಜ್ಯದಲ್ಲಿ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಹಂತದ ಅನ್‌ಲಾಕ್‌ ಮಾಡಲು ಸರ್ಕಾರ ಸಿದ್ಧತೆ ಕೈಗೊಂಡಿದ್ದು, ಶುಕ್ರವಾರ ಅಥವಾ ಶನಿವಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಈ ಬಗ್ಗೆ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಅನ್‌ಲಾಕ್‌ 3.0ದಲ್ಲಿ ಮಾಲ್‌ ಮತ್ತು ದೇವಾಲಯಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆ ಇದೆ. ಸಿನಿಮಾ ಮಂದಿರಗಳಿಗೂ ಕಡಿಮೆ ಪ್ರೇಕ್ಷಕರನ್ನೊಳಗೊಂಡಂತೆ ಪ್ರಾರಂಭಿಸಲು ಷರತ್ತುಬದ್ಧ ಅನುಮತಿ ನೀಡುವ ನಿರೀಕ್ಷೆ ಇದೆ. ಅಲ್ಲದೆ, ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಈಗಿರುವ ಸಂಜೆ 5 ಗಂಟೆ ಗಡುವನ್ನು 7 ಗಂಟೆವರೆಗೆ ವಿಸ್ತರಿಸುವ ಸಂಭವವೂ ಇದೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಎರಡನೇ ಹಂತದ ಅನ್‌ಲಾಕ್‌ ಬಹುತೇಕ ಜಿಲ್ಲೆಯಲ್ಲಿದ್ದು, ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಲಾಗಿದೆ. ಜು.5ಕ್ಕೆ ಎರಡನೇ ಹಂತದ ಅನ್‌ಲಾಕ್‌ ಮುಕ್ತಾಯವಾಗಲಿದೆ. ಹೀಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಯಲ್ಲಿ ಮತ್ತಷ್ಟುನಿರ್ಬಂಧಗಳಿಗೆ ಸಡಿಲಿಕೆ ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗಿದೆ.

ಅನ್‌ಲಾಕ್‌ 3.0ದಲ್ಲಿ ಮಾಲ್‌ಗಳಿಗೆ ಅವಕಾಶ ನೀಡಬೇಕು. ಶೇ.50ರಷ್ಟು ಮಂದಿ ಶಾಪಿಂಗ್‌ ಮುಗಿಸಿದ ಬಳಿಕ ಬೇರೆಯವರಿಗೆ ಅವಕಾಶ ನೀಡಬೇಕು ಎಂಬ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆ.

ಇನ್ನು ದೇವಾಲಯಗಳಿಗೆ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶ ನೀಡುವ ಕುರಿತು ಸಮಾಲೋಚನೆ ನಡೆದಿದೆ. ಆರಂಭದಲ್ಲಿ ಭಕ್ತರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ. ಅಭಿಷೇಕ, ರಥೋತ್ಸವಕ್ಕೆ ಅವಕಾಶ ನೀಡುವ ಸಾಧ್ಯತೆ ತೀರಾ ಕಡಿಮೆ ಇದೆ. ಸಿನಿಮಾ ಮಂದಿರ ಆರಂಭಿಸಲು ಅನುಮತಿ ನೀಡುವ ಸಾಧ್ಯತೆಯೂ ಇದೆ. ಆದರೆ, ಈ ಬಗ್ಗೆ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಿದೆ. ನೈಟ್‌ ಕಫ್ರ್ಯೂ, ವೀಕೆಂಡ್‌ ಕಫ್ರ್ಯೂ ತೆರವುಗೊಳಿಸುವ ಸಾಧ್ಯತೆ ಕಡಿಮೆಯಿದ್ದು, ಇನ್ನಷ್ಟುಕಾಲ ಮುಂದುವರೆಸುವ ಆಲೋಚನೆ ಸರ್ಕಾರದಲ್ಲಿದೆ.

ಯಾವುದಕ್ಕೆ ಅವಕಾಶ ಸಾಧ್ಯತೆ?

- ದೇಗುಲದಲ್ಲಿ ಭಕ್ತರಿಗೆ ದೇವರ ದರ್ಶನ

- ಸಿನಿಮಾ ಮಂದಿರಗಳ ಪುನಾರಂಭ

- ಮಾಲ್‌ಗಳಲ್ಲಿ ಶೇ.50ರಷ್ಟುಜನರಿಗೆ ಅವಕಾಶ

- ಅಂಗಡಿ ತೆರೆಯುವ ಸಮಯ ಸಂಜೆ 7ಕ್ಕೆ ವಿಸ್ತರಣೆ

- ನೈಟ್‌ ಕಫä್ರ್ಯ, ವೀಕೆಂಡ್‌ ಕರ್ಫ್ಯೂ ಮುಂದುವರಿಕೆ

- 2ನೇ ಹಂತದ ಅನ್‌ಲಾಕ್‌ ಜು.5ಕ್ಕೆ ಮುಕ್ತಾಯ