Asianet Suvarna News Asianet Suvarna News

ತವರಿನಲ್ಲೇ ಸೊರಗಿದ ಕಾವೇರಿ: ಕೃಷಿ ಮಾತ್ರವಲ್ಲ, ಪ್ರವಾಸೋದ್ಯಮಕ್ಕೂ ಸಂಕಷ್ಟ

ಕಾವೇರಿ ನದಿಯ ಉಮಗ ಸ್ಥಳವಾದ ಕೊಡಗಿ ಜಿಲ್ಲೆಯಲ್ಲಿಯೇ ನದಿಯ ಒಡಲು ಬತ್ತಿ ಹೋಗಿದೆ.ಕೃಷಿ ಮಾತ್ರವಲ್ಲದೇ ಕೊಡಗು ಜಿಲ್ಲೆಯ ಪ್ರವಾಸೋದ್ಯಮಕ್ಕೂ ಭಾರಿ ಹೊಡೆತ ಬಿದ್ದಿದೆ.

Karnataka Kaveri river has dried up in Kodagu Agriculture and tourism are facing difficulties sat
Author
First Published Jun 25, 2023, 6:57 PM IST

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ  ನ್ಯೂಸ್
ಕೊಡಗು (ಜೂ.25): ನಾಡಿನ ಜೀವ ನದಿ ಕಾವೇರಿಯ ತವರು ಜಿಲ್ಲೆ ಕೊಡಗಿನಲ್ಲಿ ಮಳೆಯ ತೀವ್ರ ಕೊರತೆ ಕಾಡುತ್ತಿದೆ. ಹತ್ತಾರು ಅಡಿ ನೀರು ಭೋರ್ಗರೆದು ಹರಿಯುತ್ತಿದ್ದ ಹೊಳೆ ಈಗ ಕಾಲುದಾರಿಯಾಗಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ಪ್ರವಾಸೋದ್ಯಮಕ್ಕೂ ದೊಡ್ಡ ಪೆಟ್ಟು ಬೀಳುತ್ತಿದೆ. ಕಾವೇರಿ ನದಿಯನ್ನೇ ನಂಬಿ ರ್ಯಾಫ್ಟಿಂಗ್ ನಡೆಸುತ್ತಿದ್ದ ಹಲವು ಕುಟುಂಬಗಳು ಈಗ ಬದುಕು ನಡೆಸುವುದು ಹೇಗೆ ಎನ್ನುವ ಆತಂಕ ಎದುರಿಸುತ್ತಿವೆ. 

ಕುಶಾಲನಗರ ತಾಲ್ಲೂಕಿನ ದುಬಾರೆಯಲ್ಲಿರುವ ವಿಶ್ವ ಪ್ರಸಿದ್ಧ ದುಬಾರೆಯಲ್ಲಿನ ಪರಿಸರ ಲಕ್ಷಾಂತರ ಪ್ರವಾಸಿಗರನ್ನು ಸೆಳೆಯುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರನ್ನು ನಂಬಿ ಅಪಾರ ಮರಗಳ ನಡುವೆ ಭೋರ್ಗರೆದು ಹರಿಯುತ್ತಿದ್ದ ಕಾವೇರಿ ನದಿಯಲ್ಲಿ ರ್ಯಾಫ್ಟಿಂಗ್ ನಡೆಸಲಾಗುತಿತ್ತು. ಜೂನ್ ತಿಂಗಳು ಎನ್ನುವಷ್ಟರಲ್ಲಿ ಆರಂಭವಾಗುತ್ತಿದ್ದ ಮಳೆ ಈ ತಿಂಗಳ ಅಂತ್ಯ ಎನ್ನುವಷ್ಟರಲ್ಲಿ ಕಾವೇರಿ ತುಂಬಿ ಭೋರ್ಗರೆದು ಹರಿಯುತಿತ್ತು. ಈ ಸಂದರ್ಭ ರ್ಯಾಫ್ಟಿಂಗ್ ಮಾಡುತ್ತಿದ್ದ ಪ್ರವಾಸಿಗರು ನದಿಯಲ್ಲಿ ಇಳಿದು ನೀರಿನಲ್ಲಿ ಈಜಿ ಸಂಭ್ರಮಿಸುತ್ತಿದ್ದರು. 

ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದಿನಿಂದ ಬೆಳ್ಳಿ ರಥದ ಸೇವೆ ಆರಂಭ: ಉಘೇ.. ಉಘೇ.. ಮಾದಪ್ಪ

ಕಾಲು ದಾರಿಯಂತಾದ ಕಾವೇರಿ ನದಿ : ಈ ವರ್ಷ ಜೂನ್ ತಿಂಗಳು ಕಳೆಯುತ್ತಾ ಬಂದರೂ  ಮಳೆ ಕೊರತೆಯಿಂದಾಗಿ ಕಾವೇರಿ ನದಿ ಹರಿಯುವಿಕೆಯಲ್ಲಿ ಕ್ಷೀಣಿಸಿದೆ. ಕಲ್ಲು ಬಂಡೆಗಳ ಸಂದಿಗೊಂದಿಗಳಲ್ಲಿ ಅಷ್ಟೇ ಕಾವೇರಿ ಮೌನವಾಗಿ ಹರಿಯುತ್ತಿದ್ದು, ಬೋಟುಗಳೆಲ್ಲಾ ಕಾವೇರಿ ನದಿಯ ದಂಡೆಯುದ್ಧಕ್ಕೂ ಲಂಗರು ಹಾಕಿ ನಿಂತಿದೆ. ನೀರಿಗೆ ಇಳಿದರೆ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗಿ ಬಿಡುತ್ತೇವೆ ಎನ್ನುವ ಭೀಕರ ಸ್ಥಿತಿಯಲ್ಲಿ ಇರುತ್ತಿದ್ದ ಕಾವೇರಿ ನದಿ ನೀರು ಬಂಡೆಗಳ ಸಂದಿಗಳಲ್ಲಿ ಹರಿಯುತ್ತಿದೆ. ಹೀಗಾಗಿ ಇಲ್ಲಿ ಹತ್ತಾರು ದನ ಕರುಗಳು ನದಿಯನ್ನು ಎರಡೂ ದಡಗಳಿಗೆ ಸುಲಭವಾಗಿ ದಾಟುತ್ತಿವೆ. 

ದುಬಾರೆ ರ್ಯಾಫ್ಟಿಂಗ್‌ಗೆ ಹೊಡೆತ: ದುಬಾರೆಯಲ್ಲಿ ಒಟ್ಟು 70 ಬೋಟುಗಳಿದ್ದು ಒಂದೊಂದು ಬೋಟಿನಲ್ಲೂ ಇಬ್ಬರು ತರಬೇತುದಾರರು ಇರುತ್ತಾರೆ. ಅಂದರೆ, ರ್ಯಾಫ್ಟ್ ಮಾಲೀಕರು, ತರಬೇತುದಾರರು, ಈಜು ತಜ್ಞರು ಸೇರಿದಂತೆ 500 ಕ್ಕೂ ಹೆಚ್ಚು ಕುಟುಂಬಗಳು ಬದುಕು ಕಟ್ಟಿಕೊಳ್ಳುತ್ತಿದ್ದವು. ಆದರೀಗ ಮಳೆಯ ಕೊರತೆಯಿಂದ ನೀರಿಲ್ಲದೆ  ರ್ಯಾಫ್ಟಿಂಗ್ ನಡೆಸಲಾಗದೆ ದುಡಿಮೆ ಕೈತಪ್ಪಿದೆ. ಇದರಿಂದಾಗಿ ಐನೂರಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ. ಹೊಳೆಯಲ್ಲಿ ಆಳವಾದ ಭಾಗದಲ್ಲಿ ಒಂದಷ್ಟು ನೀರು ಇದೆಯಾದರೂ ಅಲ್ಲಿ ರ್ಯಾಫ್ಟಿಂಗ್ ಮಾಡುವವರ ಸಂಖ್ಯೆ ತೀರ ಕಡಿಮೆಯಾಗಿದೆ. ಹೀಗಾಗಿಯೇ ಕಾವೇರಿ ನದಿಯಲ್ಲಿ ನೀರಿಲ್ಲ ಎನ್ನುವುದನ್ನು ಅರಿತ ಪ್ರವಾಸಿಗರು ದುಬಾರೆಯತ್ತ ಬರುವುದನ್ನು ಕಡಿಮೆ ಮಾಡಿದ್ದಾರೆ. ಪರಿಣಾಮ 70 ರ್ಯಾಫ್ಟಿಂಗ್ ಗಳು ಇರುವುದರಿಂದ ದಿನಕ್ಕೆ ಎರಡೋ ಮೂರೋ ರ್ಯಾಫ್ಟ್ಗಳಿಗೆ ಮಾತ್ರವೇ ಜನರು ಇರುತ್ತಾರೆ. ಉಳಿದ ರ್ಯಾಫ್ಟ್ ಗಳಿಗೆ ಪ್ರವಾಸಿಗರು ಬರಬೇಕೆಂದರೆ ನಾಲ್ಕೈದು ದಿನ ಕಾಯಬೇಕಾಗಿದೆ ಎನ್ನುತ್ತಾರೆ ರ್ಯಾಫ್ಟ್ ತರಬೇತುದಾರ ಗಿರೀಶ್. 

ಸಿದ್ದರಾಮಯ್ಯ, ಡಿಕೆಶಿ ಮೆಟ್ಟು-ಮೆಟ್ಟಿನಿಂದ ಹೊಡೆದಾಡಿಕೊಳ್ತಾರೆ: ಶಾಸಕ ಯತ್ನಾಳ

ಎಂಜಾಯ್‌ ಮಾಡಲೆಂದು ಬರುವ ಪ್ರವಾಸಿಗರಿಗೂ ನಿರಾಸೆ: ಕಳೆದ ವರ್ಷ ಈ ವೇಳೆ ನಿತ್ಯ ಒಬ್ಬೊಬ್ಬರು ಕನಿಷ್ಠ 3 ಟ್ರಿಪ್ ರ್ಯಾಫ್ಟ್ ಮಾಡುತ್ತಿದ್ದೆವು. ಅದಕ್ಕಿಂತ ಮೊದಲಿನ ಎರಡು ವರ್ಷ ಕೋವಿಡ್ ನಿಂದ ದುಡಿಮೆ ಇರಲಿಲ್ಲ. ಕಳೆದ ವರ್ಷ ಪ್ರವಾಹ, ಈಗ ನೀರೇ ಇಲ್ಲದೆ ದುಡಿಮೆ ಇಲ್ಲದಂತಾಗಿದೆ. ನೀರು ಕಡಿಮೆ ಇರುವುದರಿಂದ ದುಬಾರೆಯಲ್ಲಿ ರ್ಯಾಫ್ಟಿಂಗ್ ಎಂಜಾಯ್ ಮಾಡೋಣ ಎಂದು ಬರುವ ಪ್ರವಾಸಿಗರು ಅಲ್ಲಿನ ಸ್ಥಿತಿಯನ್ನು ನೋಡಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಾವು ಇಲ್ಲಿ ಎಂಜಾಯ್ ಮಾಡಲೆಂದು ದೂರದ ಊರುಗಳಿಂದ ಬಂದಿದ್ದೇವೆ. ಅದರೆ, ಇಲ್ಲಿ ನೋಡಿದರೆ ನೀರಿನ ಪ್ರಮಾಣ ಇಷ್ಟೊಂದು ಕಡಿಮೆಯಾಗಿ ರ್ಯಾಫ್ಟಿಂಗ್ ಮಾಡಲು ಅಸಾಧ್ಯ ಎನ್ನುವಂತೆ ಆಗಿದೆ ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಮಳೆಯ ಕೊರತೆ ರೈತರಿಗೆ ಅಷ್ಟೇ ಅಲ್ಲ, ಪ್ರವಾಸೋದ್ಯಮಿಗಳಿಗೂ ನಷ್ಟ ಉಂಟು ಮಾಡುತ್ತಿದೆ.

Follow Us:
Download App:
  • android
  • ios