ಬೆಂಗಳೂರು ನಿಗಮ-ಮಂಡಳಿ ನೇಮಕ ವಿಚಾರದಲ್ಲಿ ಮಿತ್ರ ಪಕ್ಷ ಕಾಂಗ್ರೆಸ್ ಜತೆ ಜಟಾಪಟಿಗಿಳಿದಿ ರುವ ಮಧ್ಯೆಯೇ ಜೆಡಿಎಸ್ ನಲ್ಲೂ ಒಳಬೇಗುದಿ ಹೆಚ್ಚುತ್ತಿದೆ. ನಿಗಮ-ಮಂಡಳಿ ವಿಚಾರ ಜೆಡಿಎಸ್ ವರಿಷ್ಠ ರಿಗೆ ಒಂದೆಡೆ ಕಾಂಗ್ರೆಸ್‌ನಿಂದ, ಮತ್ತೊಂದೆಡೆ ಸ್ವಪಕ್ಷೀಯರಿಂದ ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ. ಮಾಜಿ ಶಾಸಕರಿಗೆ ನಿಗಮ- ಮಂ ಡಳಿ ಸ್ಥಾನಗಳನ್ನು ನೀಡುವ ಬಗ್ಗೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒಲವು ತೋರಿದರೆ, ಪಕ್ಷದ ಜೆಡಿಎಸ್ ಶಾಸಕಾಂಗ ಪಕ್ಷದಲ್ಲಿ ಹಾಲಿ ಶಾಸಕರಿಗೆ ಮಣೆ ಹಾಕುವ ಬಗ್ಗೆ ಚರ್ಚಿಸಲಾಗಿದೆ. ಇದು ಶಾಸಕರ ಮತ್ತು ಮಾಜಿ ಶಾಸಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಆರ್ಥಿಕವಾಗಿ ಬಲಾಢ್ಯ ರಾಗಿರುವ ವ್ಯಕ್ತಿಗಳಿಗೆ ಮಣೆ ಹಾಕುವ ಸಾಧ್ಯತೆಯ ಬಗ್ಗೆಯೂ ಪಕ್ಷದ ನಾಯಕರಲ್ಲಿ ಆತಂಕ ಶುರುವಾಗಿದೆ. ಹೀಗಾಗಿ ಆಂತರಿಕ ಭಿನ್ನಮತ ಶಮನಗೊಳಿಸಿ ನಾಯಕರನ್ನು ಸಮಾಧಾನಗೊಳಿಸುವುದು ಜೆಡಿಎಸ್ ವರಿಷ್ಠರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ.

ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ನಿಗಮ-ಮಂಡಳಿ ನೇಮಕದಲ್ಲಿ ಆಸಕ್ತಿ ಇರಲಿಲ್ಲ. ಇದನ್ನು ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ವ್ಯಕ್ತಪಡಿಸಿದ್ದರು. ನಿಗಮ-ಮಂಡಳಿ ಸ್ಥಾನ ಲಭಿಸಿದರೆ ಕೇವಲ ಗೂಟದ ಕಾರು ಸಿಗುತ್ತದೆ. ಇದರಿಂದ ಏನು ಪ್ರಯೋಜನ ಎನ್ನುವ ಮೂಲಕ ನಿಗಮ ಮಂಡಳಿ ನೇಮಕ ಅನಗತ್ಯ ಎಂಬ ಸುಳಿವು ನೀಡಿದ್ದರು. ಈ ನಡುವೆ, ಸಿಎಂ ಕುಮಾರಸ್ವಾಮಿ ಅವರು ಮುಂಬರುವ ಲೋಕಸಭಾ ಚುನಾವಣೆ ಗುರಿಯಾಗಿಸಿಕೊಂಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಮತಗಳ ಅಂತರದಲ್ಲಿ ಸೋಲನುಭವಿಸಿದ ಮಾಜಿ ಶಾಸಕರಿಗೆ ಅಧ್ಯಕ್ಷಗಿರಿ ನೀಡುವ ಒಲವು ವ್ಯಕ್ತಪಡಿಸಿದ್ದರು.

ಮುಖ್ಯಮಂತ್ರಿಗಳ ಹೇಳಿಕೆಯಿಂದ ಮಾಜಿ ಶಾಸಕರು ಒಳಗೊಳಗೆ ಸಂತಸಗೊಂಡಿದ್ದರೆ, ಕೆಲವು ಹಾಲಿ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು. ಶಾಸ ಕಾಂಗ ಸಭೆಯಲ್ಲಿಯೂ ನಿಗಮ ಮಂಡಳಿ ಸ್ಥಾನಗಳನ್ನು ಶಾಸಕರಿಗೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂ ದವು. ಆದರೆ, ಪಕ್ಷದ ವರಿಷ್ಠರು ಇನ್ನೂ ತಮ್ಮ ನಿಲುವನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ಮಾಜಿ ಶಾಸಕರು ಮತ್ತು ಹಾಲಿ ಶಾಸಕರ ನಡುವೆ ಅಸಮಾಧಾನ ಉಂಟಾಗಿದೆ. ಪಕ್ಷವನ್ನು ಸಂಘಟಿಸುವಲ್ಲಿ ಕೇವಲ ಶಾಸಕರು ಮಾತ್ರ ವಲ್ಲದೇ, ಮಾಜಿ ಶಾಸಕರ ಪಾತ್ರವೂ ಇದೆ. ಮುಂದಿನ ಲೋಕಸಭೆ ಚುನಾವಣೆಗೆ ಮಾಜಿ ಶಾಸಕರಿಗೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ ಎಂಬ ಸಂದೇಶ ವನ್ನು ಪಕ್ಷದ ವರಿಷ್ಠರಿಗೆ ತಿಳಿಸಲು ಕೆಲ ನಾಯಕರು ಮುಂದಾಗಿದ್ದಾರೆ.

ಸಂಕ್ರಾಂತಿ ಬಳಿಕ ನಿಗಮ-ಮಂಡಳಿ ಸ್ಥಾನಗಳನ್ನು ಭರ್ತಿ ಮಾಡಲು ಜೆಡಿಎಸ್ ವರಿಷ್ಠರು ತೀರ್ಮಾನಿಸಿದ್ದಾರೆ. ಹೀಗಾಗಿ ಪಕ್ಷದಲ್ಲಿ ಭಾರಿ ಲಾಬಿ ಶುರುವಾಗಿದ್ದು, ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರ ನಡುವೆ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್‌ನಲ್ಲಿ ಆರ್ಥಿಕ ಸಂಪ ನ್ಮೂಲವಿರುವ ವ್ಯಕ್ತಿಗಳಿಗೆ ಹೆಚ್ಚಿನ ಮನ್ನಣೆ ನೀಡುವ ಆರೋಪಗಳು ಕೇಳಿಬರುತ್ತಿದ್ದು, ನಿಗಮ-ಮಂಡಳಿ ಸ್ಥಾನದಲ್ಲಿಯೂ ಇದೇ ಮಾನದಂಡ ಅನುಸರಿಸಿದರೆ ಏನು ಮಾಡುವುದು ಎಂಬ ಆತಂಕ ಪಕ್ಷದ ನಿಷ್ಠಾವಂತ ನಾಯಕರು, ಕಾರ್ಯಕರ್ತರಲ್ಲಿ ಉಂಟಾಗಿದೆ.

ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದಂತೆ ಮಾಜಿ ಶಾಸಕರಿಗೆ ಮಣೆ ಹಾಕಿದರೆ ಹಾಲಿ ಶಾಸಕರಲ್ಲಿ ಅಸಮಾ ಧಾನ ತೀವ್ರಗೊಳ್ಳಲಿದೆ. ಅಂತೆಯೇ ಶಾಸಕರಿಗೆ ಆದ್ಯತೆ ನೀಡಿದರೆ ಮಾಜಿ ಶಾಸಕರು ಸಹ ಅತೃಪ್ತರಾಗ ಲಿದ್ದಾರೆ. ಈಗಾಗಲೇ ಕೆಲವು ನಾಯಕರು ವರಿಷ್ಠರ ನಡೆಯ ಬಗ್ಗೆ ಬೇಸರಗೊಂಡಿದ್ದು, ತಟಸ್ಥವಾಗಿರುವ ನಿಲುವಿಗೆ ಬಂದಿದ್ದಾರೆ. ಈ ಎಲ್ಲಾ ಸಮಸ್ಯೆಗಳನ್ನು ವರಿಷ್ಠರು ಹೇಗೆ ಸರಿಪಡಿಸುತ್ತಾರೆಂದು ಕಾದು ನೋಡಬೇಕಿದೆ.