ಬೆಂಗಳೂರು(ಮೇ.05): ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಮಾವು ಬೆಳೆಗಾರರಿಗೆ ನೆರವು ನೀಡಲು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಆರ್‌)ಮುಂದಾಗಿದೆ.

ಮಾವು ಶೀಘ್ರದಲ್ಲಿ ಹಾಳಾಗುವ ಒಂದು ತೋಟಗಾರಿಕಾ ಉತ್ಪನ್ನವಾಗಿದ್ದು, ದೀರ್ಘಕಾಲ ಸಂರಕ್ಷಣೆ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದ ಮಾವಿನ ಹಣ್ಣಿಗೆ ಶೀಘ್ರದಲ್ಲಿ ಮಾರುಕಟ್ಟೆಪಡೆದುಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈತರು ತಾವು ಬೆಳೆದ ಮಾವಿನ ಹಣ್ಣಿಗೆ ಮಾರುಕಟ್ಟೆವ್ಯವಸ್ಥೆ ಕಲ್ಪಿಸಲು ಐಐಎಚ್‌ಆರ್‌ ಯೋಜನೆಯೊಂದನ್ನು ರೂಪಿಸಿದೆ.

ಐಐಎಚ್‌ಆರ್‌ ಸಂಸ್ಥೆಯು ಹಲವು ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರು, ವಸತಿ ನಿಲಯಗಳ ಸಂಘ ಸಂಸ್ಥೆಗಳು ಮತ್ತು ಸಾವಿರಾರು ಗ್ರಾಹಕರ ಸಂಪರ್ಕದಲ್ಲಿದೆ. ಈ ಸಂಪರ್ಕದ ಮೂಲಕ ರೈತರು ಬೆಳೆದಿರುವ ಮಾವಿನ ಹಣ್ಣಿಗೆ ಮಾರುಕಟ್ಟೆವೇದಿಕೆಯನ್ನಾಗಿ ಬದಲಾಯಿಸುತ್ತಿದೆ. ಅಲ್ಲದೆ, ಐಐಎಚ್‌ಆರ್‌ನಲ್ಲಿರುವ ಬೆಸ್ಟ್‌-ಹಾರ್ಟ್‌ ಎಂಬ ಸಂಘದ ಮೂಲಕ ದೇಶದ ವಿವಿಧ ಭಾಗಗಳಲ್ಲಿನ ಗ್ರಾಹಕರು, ವರ್ತಕರು ಮತ್ತು ವ್ಯಾಪಾರಿಗಳೊಂದಿಗೆ ರೈತರಿಗೆ ಸಂಪರ್ಕ ಕಲ್ಪಿಸಲು ಶ್ರಮಿಸುತ್ತಿದ್ದು, ರೈತರು ಮತ್ತು ವ್ಯಾಪಾರಿಗಳ ನಡುವಿನ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ, ಮಾವಿನ ಹಣ್ಣುಗಳನ್ನು ಸಂಸ್ಕರಣೆ ಮಾಡುವಂತಹ ಉದ್ಯಮಗಳೊಂದಿಗೂ ಸಂಪರ್ಕ ಕಲ್ಪಿಸಿ ರೈತರ ನೆರವಿಗೆ ಮುಂದಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ರಕ್ಷಣೆಗೆ ತಾಂತ್ರಿಕ ಸಲಹೆ:

ಮಾವು ಬೆಳೆಗಾರರಿಗೆ ತಮ್ಮ ಉತ್ಪನ್ನವನ್ನು ನೈಸರ್ಗಿಕವಾಗಿ ಸಂಗ್ರಹ ಮಾಡುವುದು ಮತ್ತು ಶೀತಲ ಕೇಂದ್ರಗಳಲ್ಲಿ (ಕೋಲ್ಡ್‌ ಸ್ಟೋರೇಜ್‌)ಎಷ್ಟುಪ್ರಮಾಣದ ಉಷ್ಣಾಂಶದಲ್ಲಿ ಇಡಬೇಕು? ನಾಲ್ಕು ವಾರಗಳ ಕಾಲ ಸಂಗ್ರಹಿಸಿಡಲು ಬೇಕಾದ ಸೌಲಭ್ಯಗಳೇನು ಎಂಬ ಅಂಶಗಳನ್ನು ಐಐಎಚ್‌ಆರ್‌ ಒದಗಿಸಲಿದೆ. ಉಪ್ಪಿನಕಾಯಿಗೆ ಬಳಸುವ ಮಾವಿನ ಕಾಯಿಯನ್ನು ಬೆಳೆದಿರುವ ರೈತರು ಉಪ್ಪು ನೀರಿನಲ್ಲಿ ಕಾಯಿಯನ್ನು ಸಂರಕ್ಷಿಸಿದಲ್ಲಿ ಸುಮಾರು ಒಂದು ವರ್ಷದವರೆಗೆ ಸಂಗ್ರಹಿಸಿ ನಂತರ ಬಳಸಬಹುದಾಗಿದೆ ಎಂದು ಅವರು ವಿವರಿಸಿದರು.

ಸಂಪರ್ಕಿಸಿ:

ಆಸಕ್ತ ರೈತರು ತಾವು ಬೆಳೆದ ಮಾವಿನ ಹಣ್ಣಿನ ತಳಿ, ಬೆಲೆ ಸೇರಿದಂತೆ ವಿವಿಧ ಮಾಹಿತಿಯೊಂದಿಗೆ ಸಂಸ್ಥೆಯ ಪ್ರತಿನಿಧಿ ವೈಭವ್‌ (ದೂ.ಸಂ. 8197926903) ಎಂಬುವರನ್ನು ಸಂಪರ್ಕಿಸಬಹುದಾಗಿದೆ.