Asianet Suvarna News Asianet Suvarna News

ನನ್ನ ಬೆನ್ನು ಮುರಿದಿದ್ದ ಪೊಲೀಸರೇ ಈಗ ನನಗೆ ಸಲ್ಯೂಟ್‌ ಹೊಡಿತಿದ್ದಾರೆ!

  • ಹಿಂದೆ ಹೋರಾಟದ ಸಂದರ್ಭ ನನ್ನ ಬೆನ್ನು ಮುರಿಯುವಂತೆ ಹೊಡೆದಿದ್ದ ಕೈಗಳಿಂದಲೇ ಪೊಲೀಸರು ಇವತ್ತು ನನಗೆ ಸಲ್ಯೂಟ್‌ ಹೊಡೆಯುತ್ತಾರೆ
  • ಇದು ಪ್ರಜಾಪ್ರಭುತ್ವದ ಸೌಂದರ್ಯ ಎಂದ ಗೃಹ ಸಚಿವ ಆರಗ ಜ್ಞಾನೇಂದ್ರ 
Karnataka Home minister araga jnanendra Remembers about old Days snr
Author
Bengaluru, First Published Oct 10, 2021, 8:52 AM IST
  • Facebook
  • Twitter
  • Whatsapp

ಉಡುಪಿ (ಅ.10): ಹಿಂದೆ ಹೋರಾಟದ ಸಂದರ್ಭ ನನ್ನ ಬೆನ್ನು ಮುರಿಯುವಂತೆ ಹೊಡೆದಿದ್ದ ಕೈಗಳಿಂದಲೇ ಪೊಲೀಸರು (Police) ಇವತ್ತು ನನಗೆ ಸಲ್ಯೂಟ್‌ ಹೊಡೆಯುತ್ತಾರೆ. 
ಇದು ಪ್ರಜಾಪ್ರಭುತ್ವದ (Democracy) ಸೌಂದರ್ಯ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanedra) ಹೇಳಿದ್ದಾರೆ. 

  ಉಡುಪಿಯಲ್ಲಿ (Udupi) ಶನಿವಾರ ಪೊಲೀಸರ ವಸತಿ ಸಮುಚ್ಚಯ ಉದ್ಘಾಟಿಸಿ ಮಾತನಾಡಿದ ಅವರು, ತನಗೆ ಗೃಹ ಖಾತೆ (Home ministry) ಸಿಕ್ಕಿದ ವಿಚಾರವಾಗಿ ತಮ್ಮ ಮನದಾಳ ಹಂಚಿಕೊಂಡರು. ನನಗೆ ಅರಣ್ಯ ಅಥವಾ ಕಂದಾಯ ಹುದ್ದೆ (Revenue ) ಸಿಗಬಹುದು ಅಂತ ಭಾವಿಸಿದ್ದೆ. ಯಾಕಂದರೆ ನಾವು ಅದರಲ್ಲಿ ಮಾಸ್ಟರ್‌ ಇದ್ದೇವೆ. ಆದರೆ ಮುಖ್ಯಮಂತ್ರಿಗಳು ಕರೆದು ಗೃಹ ಖಾತೆ ಕೊಟ್ಟಿದ್ದಾರೆ ಎಂದರು.

ದಂಧೆಕೋರರ ಜತೆ ಪೊಲೀಸ್‌ ಸ್ನೇಹ ಸಹಿಸಲ್ಲ: ಸಚಿವ ಜ್ಞಾನೇಂದ್ರ

ಹಿಂದೆ ಹೋರಾಟದ ಸಂದರ್ಭದಲ್ಲಿ ನಮ್ಮ ಬೆನ್ನು ಮುರಿಯುವಂತೆ ಹೊಡೆದಿದ್ದ ಪೊಲೀಸರು ಅದೇ ಕೈಗಳಿಂದ ಈಗ ನನಗೆ ಸಲ್ಯೂಟ್‌ (selute) ಹೊಡೀತಾರೆ ಎಂದರು.

ಬರುತ್ತಾರೆ ಸೋಕೋಗಳು

ಇದುವರೆಗೆ ಅಪರಾಧ ಕೃತ್ಯ ನಡೆದ ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಮಾತ್ರ ಹೋಗುತ್ತಿದ್ದರು. ಇನ್ನುಮುಂದೆ ನಮ್ಮ ರಾಜ್ಯದಲ್ಲಿ ವೈಜ್ಞಾನಿಕ ಸಾಕ್ಷ್ಯಗಳನ್ನು ಸಂಗ್ರಹಿಸುವುದಕ್ಕಾಗಿ ವಿಶೇಷ ತರಬೇತಾದ ಸೀನ್‌ ಆಫ್‌ ಕ್ರೈಮ್‌ ಆಫೀಸರ್ಸ್‌ (Scene of crime officer  ) ಸ್ಥಳಕ್ಕೆ ಹೋಗಲಿದ್ದಾರೆ. ಇದು ದೇಶದಲ್ಲಿಯೇ ಪ್ರಥಮ ಪ್ರಯೋಗವಾಗಿದೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜ್ಯದಲ್ಲಿ ಸುಮಾರು ವಿಧಿವಿಜ್ಞಾನದಲ್ಲಿ ತರಬೇತಾದ 200 ಸೊಕೊಗಳನ್ನು ನಿಯೋಜಿಸಲಾಗುತ್ತದೆ. ಈ ಅಧಿಕಾರಿಗಳಿಗೆ ಗುಜರಾತ್‌ ರಾಜ್ಯದಲ್ಲಿ ತರಬೇತಿ (Training) ನೀಡುವುದಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ ಎಂದರು.

ರಾಜ್ಯದಲ್ಲಿ ಸೈಬರ್‌ ಕ್ರೈಮ್‌ (Cyber Crime) ಹೆಚ್ಚಾಗುತ್ತಿದ್ದು, ಜನರು ಲಕ್ಷಾಂತರ ರು.ಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆಗಳಲ್ಲಿ ಸೈಬರ್‌ ಕ್ರೈಮ್‌ ಠಾಣೆಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಈಗಾಗಲೇ 20 ಮಂದಿ ಅಧಿಕಾರಿಗಳಿಗೆ ಹೈದರಾಬಾದ್‌ನಲ್ಲಿ ತರಬೇತಿ ನೀಡಲಾಗುತ್ತಿದೆ ಎಂದವರು ಹೇಳಿದರು.

ಪೊಲೀಸರ ವಿರುದ್ಧವೇ ದೂರು ನೀಡುವ ವ್ಯವಸ್ಥೆ ಜಾರಿ

ಅಲ್ಲದೇ ಸೈಬರ್‌ ಕ್ರೈಮ್‌ ತಡೆಯುವ ನಿಟ್ಟಿನಲ್ಲಿ ಬ್ಯಾಂಕುಗಳೊಂದಿಗೆ (Bank) ಒಪ್ಪಂದವನ್ನು ಮಾಡಿದ್ದೇವೆ. ಹಣ ಕಳೆದುಕೊಂಡ ಜನರು 1 - 2 ಗಂಟೆಗಳಲ್ಲಿ ದೂರು ನೀಡಿದರೆ, ಅವರ ಹಣ ಬ್ಯಾಂಕು ಖಾತೆಯಲ್ಲಿಯೇ ಸುರಕ್ಷಿತವಾಗಿರುತ್ತದೆ ಎಂದರು.

ವರ್ಷದೊಳಗೆ 100 ಠಾಣೆಗಳು: ರಾಜ್ಯದಲ್ಲಿ ‘ಗೃಹ - 2025’ ಎಂಬ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, 2025ರೊಳಗೆ 10,000 ಪೊಲೀಸ್‌ ವಸತಿ ಗೃಹಗಳನ್ನು ನಿರ್ಮಿಸಲಾಗುತ್ತದೆ. ರಾಜ್ಯದಲ್ಲಿ 113 ಪೊಲೀಸ್‌ ಠಾಣೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ಈ ವರ್ಷ 100 ಪೊಲೀಸ್‌ ಠಾಣೆಗಳನ್ನು(Police Station)  200 ಕೋಟಿ ರು. ವೆಚ್ಚದಲ್ಲಿ ನಿರ್ಮಿಸುವುದಕ್ಕೆ ಮಂಜೂರಾತಿ ನೀಡಲಾಗಿದೆ. ಹುಬ್ಬಳ್ಳಿಯಲ್ಲಿ 5 ಠಾಣೆಗಳ ನಿರ್ಮಾಣಕ್ಕೆ ಸ್ವತಃ ಮುಖ್ಯಮಂತ್ರಿ ಅವರೇ ಶಿಲಾನ್ಯಾಸ ನೆರವೇರಿಸಿದ್ದಾರೆ. ಉಳಿದ 13 ಠಾಣೆಗಳಿಗೂ ಹಣ ಹೊಂದಿಸಿ ಶಿಲಾನ್ಯಾಸ ನಡೆಸಲಾಗುತ್ತದೆ ಎಂದು ಸಚಿವರು ಹೇಳಿದರು.

ರಾಜ್ಯದಲ್ಲಿ ಪೊಲೀಸ್‌ ಅಧಿಕಾರಿಗಳ ನೇಮಕಕ್ಕೆ ಕೆಲವು ಮಧ್ಯವರ್ತಿಗಳು ಲಂಚ ತೆಗೆದುಕೊಳ್ಳುವ ಪ್ರಕರಣಗಳು ಗಮನಕ್ಕೆ ಬಂದಿದೆ. ಈಗಾಗಲೇ 25 ಲಕ್ಷ ರು. ಪಡೆದ ವ್ಯಕ್ತಿಯ ಬಗ್ಗೆ ದೂರು ದಾಖಲಾಗಿದೆ. ಆತನ ಹಿಂದಿರುವ ಜಾಲವನ್ನು ಬಯಲಿಗೆಳೆಯಲಾಗುತ್ತದೆ. ಅಲ್ಲದೆ ಇಂತಹ ಲಂಚದ ಪ್ರಕರಣಗಳ ಬಗ್ಗೆ ಕಣ್ಣಿಡಲು ಪ್ರತ್ಯೇಕ ತಂಡವನ್ನೇ ರಚಿಸಲಾಗುತ್ತದೆ ಎಂದ ಸಚಿವರು, ರಾಜ್ಯದಲ್ಲಿ 33,000 ಪೊಲೀಸ್‌ ಹುದ್ದೆಗಳು ಖಾಲಿ ಇದ್ದವು. ಅವುಗಳಲ್ಲಿ ಬಿಜೆಪಿ ಸರ್ಕಾರ 17,000 ಭರ್ತಿಗೊಳಿಸಿ, ಈಗ 16,000 ಮಾತ್ರ ಬಾಕಿ ಉಳಿದಿವೆ, ಅವುಗಳಲ್ಲಿ ಇನ್ನೂ 4,000 ಸಿಬ್ಬಂದಿ ಮತ್ತು 500 ಇನ್ಸ್‌ಪೆಕ್ಟರ್‌ ಹುದ್ದೆ ಭರ್ತಿಗೆ ಮಂಜೂರಾತಿ ನೀಡಲಾಗಿದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರು, ಉಡುಪಿ ಕೃಷ್ಣಮಠದ ಸುರಕ್ಷತೆಯ ದೃಷ್ಟಿಯಿಂದ ಮಠದ ಪರಿಸರದಲ್ಲಿ ಪ್ರತ್ಯೇಕ ಪೊಲೀಸ್‌ ಹೊರ ಠಾಣೆಯನ್ನು ಆರಂಭಿಸಲು ಮತ್ತು ಭಾರೀ ಕಟ್ಟಡಗಳು, ಮಣಿಪಾಲ ವಿವಿ, ಡಿಸಿ ಕಚೇರಿಗಳಿರುವ ಮಣಿಪಾಲದಲ್ಲಿ ಪ್ರತ್ಯೇಕ ಅಗ್ನಿಶಾಮಕ ಠಾಣೆ ಆರಂಭಿಸಲು ಗೃಹಸಚಿವರಿಗೆ ಮನವಿ ಮಾಡಿದರು.

ಸಮಾರಂಭದಲ್ಲಿ ಕಾಪು ಶಾಸಕ ಲಾಲಾಜಿ, ಕ.ಅ.ಪ್ರಾ. ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉ.ನ.ಅ.ಪ್ರಾ. ಅಧ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಅಧ್ಯಕ್ಷೆ ಸುಮಿತ್ರ ನಾಯಕ್‌, ಡಿಸಿ ಎಂ. ಕೂರ್ಮಾ ರಾವ್‌, ಜಿಪಂ ಸಿಇಓ ಡಾ.ನವೀನ್‌ ಭಟ್‌, ನಕ್ಸಲ್‌ ನಿಗ್ರಹ ಪಡೆಯ ಎಸ್ಪಿ ನಿಖಿಲ್‌ ಉಪಸ್ಥಿತರಿದ್ದರು. ಪಶ್ಚಿಮ ವಲಯ ಪೊಲೀಸ್‌ ಮಹಾನಿರೀಕ್ಷಕ ದೇವಜ್ಯೋತ್‌ ರಾಯ್‌ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಉಡುಪಿ ಎಸ್ಪಿ ಎನ್‌. ವಿಷ್ಣುವರ್ಧನ್‌ ಸ್ವಾಗತಿಸಿದರು. ಕಂಟ್ರೋಲ್‌ ರೂಮ್‌ ಪಿಎಸ್‌ಐ ಬಿ. ಮನಮೋಹನ ರಾವ್‌ ಕಾರ್ಯಕ್ರಮ ನಿರೂಪಿಸಿ, ಎಎಸ್ಪಿ ಕುಮಾರಚಂದ್ರ ವಂದಿಸಿದರು.

Follow Us:
Download App:
  • android
  • ios