Asianet Suvarna News Asianet Suvarna News

30 ಲಕ್ಷ ರು. ಮೊತ್ತಕ್ಕೂ ಸೆಲ್ಫ್‌ ಚೆಕ್‌: ಮುರುಘಾ ಶ್ರೀ ಅರ್ಜಿ ಬಗ್ಗೆ ಕೋರ್ಟ್‌ ಅತೃಪ್ತಿ

ಜೈಲಿನಿಂದಲೇ ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಅರ್ಜಿ, ಚೆಕ್‌ಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಹೈಕೋರ್ಟ್‌ ಸೂಚನೆ

Karnataka High Court Unhappy with Murugha Shri Application grg
Author
First Published Sep 30, 2022, 12:00 AM IST

ಬೆಂಗಳೂರು(ಸೆ.30):  ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು ಚೆಕ್‌ಗಳಿಗೆ ಸಹಿ ಹಾಕಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್‌, ಇಂದು(ಶುಕ್ರವಾರ)  ಪರಿಷ್ಕೃತ ಜ್ಞಾಪನಾ ಪತ್ರ (ಮೆಮೋ) ಸಲ್ಲಿಸುವಂತೆ ಸೂಚಿಸಿದೆ.

ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ, 14 ಲಕ್ಷ, 30 ಲಕ್ಷದ ದೊಡ್ಡ ಮೊತ್ತದ ಚೆಕ್‌ಗಳಲ್ಲಿ ಸೆಲ್ಫ್‌ ಎಂದು ನಮೂದಿಸಲಾಗಿದೆ. ಇದು ಸರಿ ಕಾಣುತ್ತಿಲ್ಲ. ನೌಕರರಿಗೆ ಸಂಬಳ ನೀಡಬೇಕಾದ ಚೆಕ್‌ಗಳನ್ನು ಸೆಲ್ಫ್‌ ಎಂದು ತೋರಿಸಲಾಗಿದೆ. ಅರ್ಜಿದಾರರ ಅರ್ಜಿಯಲ್ಲಿ ಸ್ಪಷ್ಟತೆ ಇಲ್ಲ. ಆದ್ದರಿಂದ ಸಂಪೂರ್ಣ ಮತ್ತು ಸ್ಪಷ್ಟಮಾಹಿತಿಯೊಂದಿಗೆ ಶುಕ್ರವಾರ ಹೊಸದಾಗಿ ಮೆಮೋ ಸಲ್ಲಿಸುವಂತೆ ಸೂಚಿಸಿತು.

Murugha Mutt: 'ಸರಕಾರ ಮಧ್ಯ ಪ್ರವೇಶಿಸಿ, ಮುರುಘಾ ಮಠಕ್ಕೆ ಹೊಸ ಪೀಠಾಧ್ಯಕ್ಷರ ನೇಮಕವಾಗಲಿ'

ಮಠವು ಸುಮಾರು 150 ವಿದ್ಯಾಸಂಸ್ಥೆಯನ್ನು ಹೊಂದಿದ್ದು, ಶಿವಮೂರ್ತಿ ಶರಣರು ಜೈಲಿನಲ್ಲಿರುವುದರಿಂದ ಸುಮಾರು 3,500 ಸಿಬ್ಬಂದಿ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ನೌಕರರ ಎರಡು ತಿಂಗಳ ಸಂಬಳದ ಒಟ್ಟು 200 ಚೆಕ್‌ಗಳಿಗೆ ಸಹಿ ಹಾಕಲು ಅಕ್ಟೋಬರ್‌ 1 ರಿಂದ ಅಕ್ಟೋಬರ್‌ 5ರ ಮಧ್ಯೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಮುರುಘಾ ಶರಣರು ಕೋರಿದ್ದಾರೆ.

ಮಠದ ದೈನಂದಿನ ಚಟುವಟಿಕೆ ಮತ್ತು ವ್ಯವಹಾರಗಳಿಗೆ ಹಾಗೂ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸಂಬಂಧಿಸಿದ ಚೆಕ್‌ ಮತ್ತು ದಾಖಲೆಗಳಿಗೆ ಜೈಲಿನಿಂದಲೇ ಸಹಿ ಹಾಕಲು ಅವಕಾಶ ನೀಡಬೇಕು ಎಂದು ಶಿವಮೂರ್ತಿ ಶರಣರು ಮಾಡಿದ್ದ ಮನವಿಯನ್ನು ಚಿತ್ರದುರ್ಗ ಜೈಲು ಅಧಿಕಾರಿಗಳು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಚಿತ್ರದುರ್ಗ ಸೆಷನ್ಸ್‌ ನ್ಯಾಯಾಲಯದಲ್ಲಿ ಶಿವಮೂರ್ತಿ ಶರಣರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶೆ ಬಿ.ಕೆ. ಕೋಮಲಾ ತಿರಸ್ಕರಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
 

Follow Us:
Download App:
  • android
  • ios