ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ರಷ್ಯಾದ ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳ ಗಡೀಪಾರು ಪ್ರಕ್ರಿಯೆಯನ್ನು ಕರ್ನಾಟಕ ಹೈಕೋರ್ಟ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಮಕ್ಕಳ ಹಿತಾಸಕ್ತಿ ಮತ್ತು UNCRC ತತ್ವಗಳನ್ನು ಪರಿಗಣಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 18 ರಂದು ನಡೆಯಲಿದೆ.
ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಗುಹೆಯಲ್ಲಿ ಪತ್ತೆಯಾದ ರಷ್ಯಾದ ಮಹಿಳೆಯ ಇಬ್ಬರು ಮಕ್ಕಳನ್ನು ತಕ್ಷಣವೇ ಗಡೀಪಾರು ಮಾಡುವ ಕ್ರಮವನ್ನು ಕರ್ನಾಟಕ ಹೈಕೋರ್ಟ್ ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ನಿರ್ಣಯವು ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಸಮಾವೇಶ (UNCRC) ತತ್ವಗಳಿಗೆ ಅನುಗುಣವಾಗಿದ್ದು, ಮಕ್ಕಳ ಹಿತಾಸಕ್ತಿಯನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ.
ಯಾರು ಈ ಮಹಿಳೆ?
40 ವರ್ಷದ ನೀನಾ ಕುಟಿನಾ ಎಂಬ ರಷ್ಯಾದ ಮಹಿಳೆ, ತನ್ನ ಇಬ್ಬರು ಮಕ್ಕಳಾದ 6 ವರ್ಷದ ಪ್ರಿಯಾ ಮತ್ತು 4 ವರ್ಷದ ಅಮಾ ಜೊತೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ರಾಮತೀರ್ಥ ಗುಹೆಯಲ್ಲಿ ವಾಸಿಸುತ್ತಿದ್ದರು. ಜುಲೈ 11ರಂದು ಸ್ಥಳೀಯ ಪೊಲೀಸರು ಅವರನ್ನು ಪತ್ತೆ ಹಚ್ಚಿ ರಕ್ಷಿಸಿದರು. ಅಧಿಕಾರಿಗಳ ಪ್ರಕಾರ, ಅವರ ವೀಸಾ ಅವಧಿ ಕೊನೆಗೊಂಡಿದ್ದರೂ ಅವರು ಭಾರತವನ್ನು ತೊರೆದಿರಲಿಲ್ಲ.
ಹಠಾತ್ ಗಡೀಪಾರು ಕ್ರಮದ ಪ್ರಶ್ನೆ
ಮಕ್ಕಳಿಗೆ ನೀಡಲಾದ ತಕ್ಷಣದ ಗಡೀಪಾರ ನೋಟಿಸ್ ವಿರುದ್ಧ ನೀನಾ ಕುಟಿನಾ ರಿಟ್ ಅರ್ಜಿ ಸಲ್ಲಿಸಿದ್ದು, ಆ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರು ಗಡೀಪಾರ ಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಅರ್ಜಿದಾರರ ಪರವಾಗಿ ವಕೀಲ ಬೀನಾ ಪಿಳ್ಳೈ ಅವರು ಪ್ರತಿನಿಧಿಸಿದ್ದು, ಈ ಗಡೀಪಾರ ಕ್ರಮವು ಮಕ್ಕಳ ಹಿತಾಸಕ್ತಿಯನ್ನು ಲೆಕ್ಕಿಸದೆ, ಯುಎನ್‌ಸಿಆರ್‌ಸಿಯ ತತ್ವಗಳನ್ನು ಉಲ್ಲಂಘಿಸುತ್ತಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಆಧಾರದ ಕೊರತೆ ಮತ್ತು ನ್ಯಾಯಾಲಯದ ಪ್ರತಿಕ್ರಿಯೆ
ಭಾರತ ಸರಕಾರದ ಪರವಾಗಿ ಹಾಜರಾದ ಸಹಾಯಕ ಸಾಲಿಸಿಟರ್ ಜನರಲ್, ಮಕ್ಕಳು ಮಾನ್ಯ ಗುರುತಿನ ದಾಖಲೆಗಳು ಅಥವಾ ಪಾಸ್‌ಪೋರ್ಟ್ ಹೊಂದಿಲ್ಲ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು. ಈ ಹಿನ್ನೆಲೆಯಲ್ಲಿ, ಮಕ್ಕಳ ತಕ್ಷಣದ ಗಡೀಪಾರವು ಈ ಹಂತದಲ್ಲಿ ಸೂಕ್ತವಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ವಿಚಾರಣೆಗೆ ಮುಂದಿನ ದಿನಾಂಕ
ಪೂರ್ಣ ದಾಖಲೆಗಳನ್ನು ಪರಿಶೀಲಿಸುವ ಅಗತ್ಯವಿರುವುದರಿಂದ, ನ್ಯಾಯಾಲಯ ಅಧಿಕಾರಿಗಳಿಗೆ ಎರಡು ವಾರಗಳಲ್ಲಿ ತಮ್ಮ ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಲು ಸೂಚಿಸಿತು. ಆಗಸ್ಟ್ 18ರಂದು ಮುಂದಿನ ವಿಚಾರಣೆಯನ್ನು ನಿಗದಿಪಡಿಸಲಾಗಿದೆ. ಅಲ್ಲಿವರೆಗೆ ಯಾವುದೇ ಗಡೀಪಾರ ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಕಠಿಣ ಸೂಚನೆ ನೀಡಿದೆ. ಈ ಪ್ರಕರಣ ಮಕ್ಕಳ ಹಕ್ಕುಗಳು ಮತ್ತು ಗಡೀಪಾರ ನಿಬಂಧನೆಗಳ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತಿದ್ದು, ನ್ಯಾಯಾಲಯವು ಮಕ್ಕಳ ಹಿತಾಸಕ್ತಿಗೆ ಆದ್ಯತೆ ನೀಡಿರುವುದು ಶ್ಲಾಘನೀಯ. ಸದ್ಯ ತುಮಕೂರಿನ ಎಫ್ ಆರ್ ಸಿ ಸೆಂಟರ್ ನಲ್ಲಿ ಮಹಿಳೆ ಹಾಗೂ ಇಬ್ಬರು ಮಕ್ಕಳು ಇದ್ದಾರೆ.
