Asianet Suvarna News Asianet Suvarna News

ಆ್ಯಪ್‌ ನೆಪ ಹೇಳಿ ರಾಗಿ ಖರೀದಿಸದ ಸರ್ಕಾರ: ಚಾಟಿ ಬೀಸಿದ ಹೈಕೋರ್ಟ್‌

ಬೆಳೆಯ ಮಾಹಿತಿಯನ್ನು ಸರ್ಕಾರದ ಆ್ಯಪ್‌ಗೆ ಅಪ್‌ಲೋಡ್‌ ಮಾಡದ ಕಾರಣ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲು ನಿರಾಕರಿಸಿದ ಅಧಿಕಾರಿಗಳ ಧೋರಣೆಗೆ ಕಿಡಿಕಾರಿರುವ ಹೈಕೋರ್ಟ್‌, ತಾಂತ್ರಿಕ ಕಾರಣಗಳಿಂದ ರೈತರು ಈ ಯೋಜನೆಯ ಲಾಭ ಪಡೆಯುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ, ಹಾಗಾಗಿ ಕೂಡಲೇ ಬೆಳೆ ಖರೀದಿಸುವಂತೆ ಆದೇಶಿಸಿದೆ. 

Karnataka High Court Slams On Government Over Not Buy The Millet gvd
Author
First Published Dec 11, 2022, 7:45 AM IST

ವೆಂಕಟೇಶ್‌ ಕಲಿಪಿ

ಬೆಂಗಳೂರು (ಡಿ.11): ಬೆಳೆಯ ಮಾಹಿತಿಯನ್ನು ಸರ್ಕಾರದ ಆ್ಯಪ್‌ಗೆ ಅಪ್‌ಲೋಡ್‌ ಮಾಡದ ಕಾರಣ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸಲು ನಿರಾಕರಿಸಿದ ಅಧಿಕಾರಿಗಳ ಧೋರಣೆಗೆ ಕಿಡಿಕಾರಿರುವ ಹೈಕೋರ್ಟ್‌, ತಾಂತ್ರಿಕ ಕಾರಣಗಳಿಂದ ರೈತರು ಈ ಯೋಜನೆಯ ಲಾಭ ಪಡೆಯುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ, ಹಾಗಾಗಿ ಕೂಡಲೇ ಬೆಳೆ ಖರೀದಿಸುವಂತೆ ಆದೇಶಿಸಿದೆ. ಸುಮಾರು 84 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬೆಳೆದ ರಾಗಿ ಬೆಳೆಗೆ ಬೆಂಬಲ ಬೆಲೆ ನೀಡಲು ಪರಿಗಣಿಸದ ಕೃಷಿ ಇಲಾಖೆ ಆಯುಕ್ತರ ನಡೆಯನ್ನು ಆಕ್ಷೇಪಿಸಿ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಡಮನಹಳ್ಳಿ, ಮೋಟೆಬೆನ್ನೂರು, ಗುಂಡೇನಹಳ್ಳಿ ಮತ್ತು ಅರಬಗೊಂಡ ಗ್ರಾಮಗಳ 80 ರೈತರು ಸಲ್ಲಿಸಿದ ಅರ್ಜಿಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಎನ್‌.ಎಸ್‌. ಸಂಜಯ್‌ ಗೌಡ ಅವರ ಪೀಠ ಈ ಆದೇಶ ಮಾಡಿದೆ. 

ಮುಕ್ತ ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಸಂದರ್ಭದಲ್ಲಿ ರೈತರ ಬೆಳೆಗೆ ನ್ಯಾಯಯುತ ಬೆಲೆ ಒದಗಿಸುವ ಉದ್ದೇಶದಿಂದಲೇ ಎಂಎಸ್‌ಪಿ ರೂಪಿಸಲಾಗಿದೆ. ಈ ಯೋಜನೆಯಡಿ ರೈತರಿಗೆ ಹಣ ಪಾವತಿಸಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಆ್ಯಪ್‌ನಲ್ಲಿ ರೈತರು ತಮ್ಮ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ. ಆದರೆ, ಹೆಸರು ನೋಂದಾಯಿಸಿಕೊಳ್ಳದೇ ಇರುವುದರಿಂದ ಯೋಜನೆಯ ಲಾಭ ಪಡೆಯುವ ಹಕ್ಕನ್ನು ರೈತರು ಕಳೆದುಕೊಳ್ಳುವುದಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟವಾಗಿ ನುಡಿದಿದೆ.

ಅವಧಿಪೂರ್ವ ಚುನಾವಣೆ ಇಲ್ಲ, ಅಧಿಕಾರ ಪೂರೈಸುತ್ತೇವೆ: ಸಿಎಂ ಬೊಮ್ಮಾಯಿ

ಎಲ್ಲ ರೈತ​ರಿಗೂ ಆ್ಯಪ್‌ ಬಳಕೆ ಗೊತ್ತಿ​ಲ್ಲ: ಹೆಸರು ನೋಂದಾಯಿಸಿಕೊಳ್ಳದಿದ್ದರೆ ಯೋಜನೆಯ ಲಾಭ ಪಡೆಯಲು ರೈತರು ಅರ್ಹತೆ ಕಳೆದುಕೊಳ್ಳುತ್ತಾರೆ ಎಂಬುದಾಗಿ ಎಲ್ಲಿಯೂ ಹೇಳಿಲ್ಲ. ತಂತ್ರಜ್ಞಾನದಲ್ಲಿ ಪರಿಣಿತರಲ್ಲದೆ ರೈತರೊಂದಿಗೆ ಸರ್ಕಾರ ವ್ಯವಹರಿಸುತ್ತಿದೆ, ಆ್ಯಪ್‌ನಲ್ಲಿ ತಾವೇ ಖುದ್ದಾಗಿ ಹೆಸರು ನೋಂದಾಯಿಸಿಕೊಳ್ಳುವ ಪರಿಸ್ಥಿತಿಯಲ್ಲಿ ಎಲ್ಲ ರೈತರು ಇಲ್ಲ ಎಂಬುದನ್ನು ಅಧಿಕಾರಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೈಕೋರ್ಟ್‌ ತಿವಿದಿದೆ. 

ಈ ಪ್ರಕರಣದಲ್ಲಿ ಅರ್ಜಿದಾರ ರೈತರು ಬೆಳೆದ ರಾಗಿ ಬೆಳೆ ಕುರಿತು ಜಿಲ್ಲಾಧಿಕಾರಿಯ ಸೂಚನೆ ಮೇರೆಗೆ ಜಂಟಿ ಸಮೀಕ್ಷೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಸಹ ಕನಿಷ್ಠ ಬೆಂಬಲ ಬೆಲೆಯ ಯೋಜನೆಯನ್ನು ರೈತರಿಗೆ ಒದಗಿಸಬೇಕು ಎಂದು ಶಿಫಾರಸು ಸಹ ಮಾಡಿದ್ದಾರೆ. ಹೀಗಿದ್ದರೂ ಕೃಷಿ ಆಯುಕ್ತರು ರೈತರ ರಾಗಿ ಬೆಳೆಯ ಮಾಹಿತಿಯನ್ನು ಆ್ಯಪ್‌ನಲ್ಲಿ ಆಳವಡಿಸಲು ಮತ್ತು ಯೋಜನೆಯ ಲಾಭವನ್ನು ಒದಗಿಸಲು ನಿರಾಕರಿಸಿರುವುದನ್ನು ಒಪ್ಪಲಾಗದು. ಆದ್ದರಿಂದ ರೈತರು ಬೆಳೆದಿರುವ ರಾಗಿಯನ್ನು ಎಂಎಸ್‌ಪಿ ಯೋಜನೆಗೆ ಒಪ್ಪಿ, ನಿಗದಿತ ಬೆಂಬಲ ಬೆಲೆ ನೀಡಬೇಕು ಎಂದು ಹೈಕೋರ್ಟ್‌ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕೇಂದ್ರ ಸರ್ಕಾರ ಎಂಎಸ್‌ಪಿ ಯೋಜನೆಯಡಿ ರಾಗಿ ಬೆಳೆಗೆ 3,377 ರು. ಬೆಂಬಲ ಬೆಲೆ ನಿಗದಿಪಡಿಸಿತ್ತು. 4.24 ಲಕ್ಷ ಮೆಟ್ರಿಕ್‌ ಟನ್‌ ರಾಗಿ ಖರೀದಿಗೆ 2021ರ ಡಿ.14ರಂದು ಸರ್ಕಾರ ಆದೇಶಿಸಿತ್ತು. ಅರ್ಜಿದಾರ ರೈತರು ತಮ್ಮ 85 ಹೆಕ್ಟೇರ್‌ ಜಮೀನಿನಲ್ಲಿ ರಾಗಿ ಬೆಳೆದಿದ್ದು, ಅದನ್ನು ಸರ್ಕಾರಕ್ಕೆ ಮಾರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದರು. ಬೆಳೆಯ ಕುರಿತು ಸರ್ಕಾರ ಸಿದ್ಧಪಡಿಸಿರುವ ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿಲ್ಲ ಎಂಬ ಆಕ್ಷೇಪಿಸಲಾಗಿತ್ತು. ಅದಕ್ಕೆ ರೈತರು ಪ್ರತಿ ಆಕ್ಷೇಪಣೆ ಎತ್ತಿದಾಗ, ರಾಗಿ ಬೆಳೆಯ ಬಗ್ಗೆ ಜಂಟಿ ಸಮೀಕ್ಷೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶಿಸಿತ್ತು.

Ticket Fight: ಹಾಸನದಲ್ಲಿ ಪ್ರೀತಂಗೌಡ VS ಭವಾನಿ ರೇವಣ್ಣ?

ಅದರಂತೆ ಜಂಟಿ ಸಮೀಕ್ಷೆ ನಡೆಸಿ ಸಲ್ಲಿಸಿದ್ದ ವರದಿ ಪರಿಶೀಲಿಸಿದ್ದ ಜಿಲ್ಲಾಧಿಕಾರಿ, ರೈತರ ರಾಗಿ ಬೆಳೆ ಖರೀದಿಸಲು ಒಪ್ಪಿಕೊಳ್ಳುವಂತೆ ಕೃಷಿ ಇಲಾಖೆ ಆಯುಕ್ತರಿಗೆ ಶಿಫಾರಸು ಮಾಡಿದ್ದರು. ಹಾಗೆಯೇ, ಅರ್ಜಿದಾರರ ರಾಗಿ ಬೆಳೆಯ ಮಾಹಿತಿಯನ್ನು ಆ್ಯಪ್‌ನಲ್ಲಿ ಅಳವಡಿಸುವಂತೆ ಆಯುಕ್ತರಿಗೆ ಕೋರಿದ್ದರು. ಆದರೆ, 2022ರ ಮೇ 25ರಂದು ರೈತರಿಗೆ ಹಿಂಬರಹ ನೀಡಿದ್ದ ಆಯುಕ್ತರು, ನಿಗದಿತ ಸಮಯದೊಳಗೆ ಬೆಳೆಯ ಮಾಹಿತಿಯನ್ನು ಆ್ಯಪ್‌ನಲ್ಲಿ ಅಪ್‌ಲೋಡ್‌ ಮಾಡಿಲ್ಲ. ಇದರಿಂದ ಸರ್ವೇ ವರದಿ ಆಧರಿಸಿ ರಾಗಿ ಬೆಳೆಯ ಮಾಹಿತಿಯನ್ನು ಆ್ಯಪ್‌ನಲ್ಲಿ ಅಳವಡಿಸಲಾಗದು ಎಂದಿದ್ದರು. ಅದರ ವಿರುದ್ಧ ರೈತರು ಹೈಕೋರ್ಟ್‌ ಮೆಟ್ಟಿಲೇರಿ, ತಮ್ಮ ರಾಗಿ ಬೆಳೆ ಖರೀದಿಸಿ ಬೆಂಬಲ ಬೆಲೆ ನೀಡಲು ರ್ಸಾರಕ್ಕೆ ನಿರ್ದೇಶಿಸುವಂತೆ ಕೋರಿದ್ದರು.

Follow Us:
Download App:
  • android
  • ios