ಬೆಂಗಳೂರು(ಮಾ.17): ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟರಾಜನ್‌ ಅವರಿಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗಿದೆ ಎಂಬ ಆರೋಪ ಕುರಿತು ಅಂತಿಮ ವರದಿ ಸಲ್ಲಿಸಲು ತನಿಖಾ ತಂಡಕ್ಕೆ ನಿರ್ದೇಶಿಸಬೇಕೆಂಬ ಅರ್ಜಿ ಕುರಿತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ತಮಿಳುನಾಡಿನ ಶಿಕ್ಷಣ ತಜ್ಞೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೆ.ಎಸ್‌.ಗೀತಾ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ರಾಜಕೀಯಕ್ಕೆ ಶಶಿಕಲಾ ದಿಢೀರ್‌ ವಿದಾಯ!

ಅರ್ಜಿ ಕುರಿತು ಕೆಲ ಕಾಲ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕರಿಗೆ ನೋಟಿಸ್‌ ಜಾರಿಗೆ ಮಾಡಿತು. ಜತೆಗೆ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಲ್ಲ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.

ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಹ ಆರೋಪಿಗಳಾಗಿದ್ದ ಶಶಿಕಲಾ ನಟರಾಜನ್‌ ಮತ್ತವರ ಸಂಬಂಧಿ ಇಳವರಸಿ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ ವೇಳೆಗೆ ಅವರಿಗೆ ರಾಜಾತಿಥ್ಯ ನೀಡಲಾಗಿದೆ. ಅದಕ್ಕಾಗಿ ಜೈಲು ಅಧಿಕಾರಿಗಳಿಗೆ ಕೋಟ್ಯಂತರ ರು. ಲಂಚ ಸಂದಾಯವಾಗಿದೆ ಎನ್ನಲಾಗಿದೆ. ಈ ಸಂಬಂಧ ಹಿರಿಯ ಐಎಎಸ್‌ ಅಧಿಕಾರಿ ವಿನಯ್‌ ಕುಮಾರ್‌ ನೇತೃತ್ವದ ತಂಡವು ತನಿಖೆ ನಡೆಸಿ 295 ಪುಟಗಳ ವರದಿ ಸಲ್ಲಿಸಿದೆ. ವರದಿ ಆಧರಿಸಿ ಈ ಕುರಿತು ಕ್ರಿಮಿನಲ್‌ ಪ್ರಕರಣ ದಾಖಲಾಗಿತ್ತು. ಆದರೆ, ತನಿಖೆಯ ಅಂತಿಮ ವರದಿ ಈವರೆಗೆ ಸಲ್ಲಿಕೆಯಾಗಿಲ್ಲ. ಆದ್ದರಿಂದ ಅಂತಿಮ ವರದಿ ಸಲ್ಲಿಸಲು ನಿರ್ದೇಶಿಸಬೇಕೆಂದು ಅರ್ಜಿದಾರರು ಕೋರಿದ್ದಾರೆ.