ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿ ಕಚೇರಿಗಳಿಗೆ ಬೀಗ ಹಾಕಿದ ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಚ್‌ ಆದೇಶಿಸಿದೆ.

ಬೆಂಗಳೂರು (ಮೇ.17) : ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಕಚೇರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಿ ಕಚೇರಿಗಳಿಗೆ ಬೀಗ ಹಾಕಿದ ಜಿಲ್ಲಾಡಳಿತ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಆದೇಶಿಸಿದೆ.

ಈ ಕುರಿತಂತೆ ಎಸ್‌ಡಿಪಿಐನ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್‌ ಸಾದತ್‌ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಪ್ರಕಟಿಸಿತು. ವಿಸ್ತೃತ ಆದೇಶ ಇನ್ನೂ ಲಭ್ಯವಾಗಿಲ್ಲ.

ಇದ್ರೀಶ್ ಪಾಷಾ ಸಾವು ಪ್ರಕರಣ: ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿಗೆ ಜಾಮೀನು

ಸರ್ಕಾರದ ಸಮರ್ಥನೆ:

ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಆಗಿದ್ದ ಅರುಣ್‌ ಶ್ಯಾಮ್‌, ಎಸ್‌ಡಿಪಿಐ ಕಚೇರಿಗಳನ್ನು ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಸಿಎಫ್‌ಐ ಸಂಘಟನೆಗಳ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿತ್ತು ಎಂಬ ಖಚಿತ ಮಾಹಿತಿ ಲಭ್ಯವಾಗಿತ್ತು. ಅದನ್ನು ಆಧರಿಸಿ ಸಮಗ್ರ ಮಾಹಿತಿ ಕಲೆಹಾಕಿ, ತನಿಖೆ ನಡೆಸಿದ ನಂತರವೇ ಎಸ್‌ಡಿಪಿಐ ಶಾಂತಿ ಭಂಗ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಹಾಳು ಮಾಡುವ ಉದ್ದೇಶದ ಕೃತ್ಯಗಳನ್ನು ನಡೆಸುತ್ತಿದೆ ಎಂಬುದನ್ನು ಜಿಲ್ಲಾಡಳಿತ ದೃಢಪಡಿಸಿಕೊಂಡಿತ್ತು. ಬಳಿಕವಷ್ಟೇ ಎಸ್‌ಡಿಪಿಐ ಕಚೇರಿಗಳಿಗೆ ಸೀಲ್‌ ಹಾಕಲಾಗಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದಿದ್ದರು.

ಕೇಂದ್ರ ಸರ್ಕಾರದ ಪರ ಸಹಾಯಕ ಸಾಲಿಸಿಟರ್‌ ಜನರಲ್‌ ಶಾಂತಿಭೂಷಣ್‌, ಕೇಂದ್ರ ಸರ್ಕಾರ ಪಿಎಫ್‌ಐ ನಿಷೇಧಿಸಿದೆ. ಎಸ್‌ಡಿಪಿಐ ಕಚೇರಿಗಳಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ಚಟುವಟಿಕೆಗಳನ್ನು ನಡೆಯುತ್ತಿತ್ತು. ಈ ವಿಚಾರವನ್ನು ರಾಜ್ಯ ಸರ್ಕಾರ ತನ್ನ ಗುಪ್ತಚರ ವಿಭಾಗದಿಂದ ಖಚಿತಪಡಿಸಿತ್ತು. ಆ ಮಾಹಿತಿ ಆಧರಿಸಿ ಎಸ್‌ಡಿಪಿಐ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದರು.

ಎಸ್‌ಡಿಪಿಐ ಆಕ್ಷೇಪ:

ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಾದ ಆಕ್ಷೇಪಿಸಿದ್ದ ಅರ್ಜಿದಾರರ ಪರ ವಕೀಲರು, ಎಸ್‌ಡಿಪಿಐ ಪ್ರಜಾಪ್ರತಿನಿಧಿ ಕಾಯ್ದೆ-1951ರ ಅಡಿ ನೋಂದಾಯಿತ ರಾಜಕೀಯ ಪಕ್ಷವಾಗಿದೆ. ಪಿಎಫ್‌ಐ ಜತೆ ಎಸ್‌ಡಿಪಿಐ ಯಾವುದೇ ಸಂಪರ್ಕ ಹೊಂದಿಲ್ಲ. ಪಿಎಫ್‌ಐ ಮತ್ತದರ ಸಂಸ್ಥೆಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಗೃಹ ಸಚಿವಾಲಯ ಎಸ್‌ಡಿಪಿಐ ಹೆಸರು ಸೇರಿಸಿಲ್ಲ. ಎಸ್‌ಡಿಪಿಐ ತುಳಿತಕ್ಕೊಳಗಾದ ಸಮುದಾಯಗಳ ಪರವಾಗಿ ಕೆಲಸ ಮಾಡುತ್ತಿದೆ. ಇದೇ ಕಾರಣಕ್ಕೆ ಕೆಲ ವಿಭಜನಕಾರಿ ಶಕ್ತಿಗಳ ಕೆಂಗಣ್ಣಿಗೆ ಪಕ್ಷ ಗುರಿಯಾಗಿದ್ದು, ಅದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಕೆಟ್ಟಅಭಿಪ್ರಾಯ ಮೂಡಿಸಲು ಸರ್ಕಾರಿ ಸಂಸ್ಥೆಗಳ ಮೇಲೆ ಒತ್ತಡ ಹಾಕಲಾಗುತ್ತಿದೆ. ಹೀಗಿದ್ದರೂ, ಜಿಲ್ಲಾಡಳಿತ ಪಕ್ಷಕ್ಕೆ ಸೇರಿದ ಸ್ಥಳಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಜಪ್ತಿ ಮಾಡಿದ್ದಾರೆ ಎಂದು ದೂರಿದ್ದರು.

ರಸ್ತೆಗೆ ಜಾಗ ಉಚಿತ ನೀಡುವಂತೆ ಷರತ್ತು: ಹೈಕೋರ್ಟ್‌ ಕಿಡಿ

ಅಲ್ಲದೆ, ಯಾವುದೇ ಮಾಹಿತಿ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐ ಕಚೇರಿಗಳು, ಚುನಾಯಿತ ಕಾರ್ಪೊರೇಟರ್‌ಗಳ ಕಚೇರಿಗಳನ್ನು ಮುಚ್ಚಲಾಗಿದೆ. ಅಧಿಕಾರಿಗಳು ಸೀಲ್‌ ಹಾಕಿರುವ ಕಚೇರಿಗಳು ಬಾಡಿಗೆ ಸ್ಥಳಗಳಾಗಿದ್ದು, ದುರುದ್ದೇಶದಿಂದ ಅವುಗಳನ್ನು ಜಪ್ತಿ ಮಾಡಲಾಗಿದೆ. ಮಂಗಳೂರಿನ ಬೀಗರೆಯಲ್ಲಿರುವ ಎಸ್‌ಡಿಪಿಐ ಮಾಹಿತಿ ಮತ್ತು ಸೇವಾ ಕೇಂದ್ರ, ಬಂಟ್ವಾಳ, ಅದ್ದೂರ್‌, ಕುದ್ರೋಳಿ, ಪಾವೂರು, ಸುರತ್ಕಲ್‌ನ ಚೊಕ್ಕಬೆಟ್ಟು, ಪರಂಗಿಪೇಟೆ, ಕಾಟಿಪಳ್ಳ, ಬಂಟ್ವಾಳದ ಮಂಚಿ, ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿರುವ ಕಚೇರಿ, ತಾಳಪಾಡಿಯ ಕೆ.ಸಿ. ರಸ್ತೆ, ಮಂಗಳೂರಿನ ಉಲ್ಲಾಳದಲ್ಲಿನ ಕಚೇರಿಗಳ ಮೇಲೆ ಅಕ್ರಮವಾಗಿ ದಾಳಿ ನಡೆಸಿ, ಅವುಗಳಿಗೆ ಸೀಲ್‌ ಹಾಕಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಿ, ಜಪ್ತಿ ಮಾಡಿರುವ ಕಚೇರಿಗಳಿಗೆ ಹಾಕಲಾಗಿರುವ ಸೀಲ್‌ ತೆರವುಗೊಳಿಸುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದರು.