ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ರಾಜ್ಯ ಸರ್ಕಾರ ನಿಷೇಧಿಸಿದೆ. ಈ ಕುರಿತು ಆಪರೇಟರ್‌ಗಳ ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್, ಸರ್ಕಾರದ ನಿಷೇಧ ನಿರ್ಧಾರ ಸರಿಯೇ ಎಂದು ಪರಿಶೀಲಿಸುತ್ತೇವೆ ಎಂದಿದೆ. ಇಷ್ಟೇ ಅಲ್ಲ ಬೈಕ್ ಟ್ಯಾಕ್ಸಿ ನಡೆಸುತ್ತೇವೆ ಎಂದರೆ ನಿಯಮ ರೂಪಿಸಬೇಕು ಎಂದಿದೆ.

ಬೆಂಗಳೂರು (ಆ.20) ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಿಸಲಾಗಿದೆ. ಜನರಿಗೆ ತ್ವರಿತವಾಗಿ, ಕಡಿಮೆ ದರದಲ್ಲಿ ಬೈಕ್ ಟ್ಯಾಕ್ಸಿ ಸೇವೆ ನೀಡಲಾಗುತ್ತಿತ್ತು. ಕಚೇರಿಗೆ ತೆರಳವವರು ಸೇರಿದಂತೆ ಹಲವರು ಈ ಬೈಕ್ ಟ್ಯಾಕ್ಸಿ ಬಳಸುತ್ತಿದ್ದರು. ಆದರೆ ರಾಜ್ಯ ಸರ್ಕಾರ ಈ ಬೈಕ್ ಟ್ಯಾಕ್ಸಿಗೆ ನಿಷೇಧ ಹೇರಿತ್ತು. ರಾಜ್ಯ ಸರ್ಕಾರದ ನಿಷೇಧ ಕುರಿತು ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ ಆಪರೇಟರ್‌ಗಳಿಗೆ ಕೊಂಚ ಸಮಾಧಾನವಾಗಿದೆ. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್, ಎಲ್ಲರಿಗೂ ನ್ಯಾಯಯುತ ವ್ಯವಹಾರ ನಡೆಸುವ ಸಂವಿಧಾನಬದ್ದ ಹಕ್ಕಿದೆ. ಬೈಕ್ ಟ್ಯಾಕ್ಸಿ ನಡೆಸುತ್ತಾರೆ ಎಂದರೆ ಸರ್ಕಾರ ನಿಯಮ ರೂಪಿಸಬೇಕು ಎಂದು ಸೂಚಿಸಿದೆ.

ಕರ್ನಾಟಕದ ನಿರ್ಧಾರ ಸರಿಯೇ? ಪರಿಶೀಲಿಸುತ್ತೇವೆ ಎಂದು ಕೋರ್ಟ್

ಬೈಕ್ ಟ್ಯಾಕ್ಸಿ ಸೇವೆ ಹಲವು ರಾಜ್ಯದಲ್ಲಿದೆ. 13 ರಾಜ್ಯಗಳು ಬೈಕ್ ಟ್ಯಾಕ್ಸಿ ಸೇವೆಗೆ ನಿಯಮ ರೂಪಿಸಿದೆ. ಆದರೆ ಕರ್ನಾಟಕ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆ ನಿಷೇಧಿಸಿದೆ. ಈ ರೀತಿಯ ನಿಷೇಧ ನಿರ್ಧಾರ ಸರಿಯೇ ಎಂದು ಹೈಕೋರ್ಟ್ ಪರಿಶೀಲಿಸಲಿದೆ ಎಂದು ನ್ಯಾ.ಸಿ.ಎಂ.ಜೋಶಿ ಅವರಿದ್ದ ಪೀಠ ಹೇಳಿದೆ.

ಸರ್ಕಾರಕ್ಕೆ 1 ತಿಂಗಳ ಗಡುವು

ಬೈಕ್ ಟ್ಯಾಕ್ಸಿಯಿಂದ ಸಂಚಾರ ದಟ್ಟಣೆ ಸಮಸ್ಯೆ ಇರುವುದಿಲ್ಲ. ಸುಲಭವಾಗಿ ಹಾಗೂ ತ್ವರಿತವಾಗಿ ಬೈಕ್ ಟ್ಯಾಕ್ಸಿ ಬಳಕೆಯಾಗಲಿದೆ. ಇತ್ತ ಆಟೋ, ಕಾರು ಸಂಚರಿಸದ ಸ್ಥಳಗಳಲ್ಲೂ ಬೈಕ್ ಟ್ಯಾಕ್ಸಿ ಸಂಚರಿಸಲಿದೆ. ಸರ್ಕಾರ ನೀತಿ ರೂಪಿಸುವ ಆಲೋಚನೆಯಲ್ಲಿದ್ದರೆ ಸಮಯ ನೀಡುತ್ತೇವೆ. 4 ವಾರದೊಳಗೆ ಸರ್ಕಾರದ ನಿಲುವು ತಿಳಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಸೆಪ್ಟೆಂಬರ್ 22ರೊಳಗೆ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಬೇಕು ಎಂದು ಸೂಚಿಸಿದೆ.

ಜೀವನೋಪಾಯದ ಅಂಶ ಅಡಗಿದೆ

ಬೈಕ್ ಟ್ಯಾಕ್ಸಿ ಹಲವರಿಗೆ ಉದ್ಯೋಗ ನೀಡಲಿದೆ. ಹಲವು ಕುಟುಂಬಗಳು ಇದೇ ಆದಾಯದ ಮೂಲವಾಗಿ ಬದುಕು ಕಟ್ಟಿಕೊಳ್ಳುತ್ತದೆ. ಬೈಕ್ ಟ್ಯಾಕ್ಸಿ ಮೂಲಕ ಹಲವರು ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳುತ್ತಾರೆ. ಈ ಬೈಕ್ ಟ್ಯಾಕ್ಸಿಯಲ್ಲಿ ಜೀವನೋಪಾಯದ ಅಂಶವೂ ಇರುವುದರಿಂದ ಸರ್ಕಾರದ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೈಕೋರ್ಟ್ ಸೂಚಿಸಿದೆ.

ನಾಲ್ಕು ವಾರದಲ್ಲಿ ಉತ್ತರಿಸುವುದಾಗಿ ಹೇಳಿದ ಸರ್ಕಾರ

ಹೈಕೋರ್ಟ್ ಸಲಹೆಗೆ ಸರ್ಕಾರದ ಪರ ಎಜಿ ಶಶಿಕಿರಣ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. ನಾಲ್ಕು ವಾರದಲ್ಲಿ ಸರ್ಕಾರದ ನಿಲುವು ತಿಳಿಸುತ್ತೇವೆ ಎಂದು ಎಜಿ ಪ್ರತಿಕ್ರಿಯಿಸಿದ್ದಾರೆ.

ಬೈಕ್ ಟ್ಯಾಕ್ಸಿ ಆಗ್ರಹಿಸಿದ ಬೆಂಗಳೂರು ಜನ

ಬೈಕ್ ಟ್ಯಾಕ್ಸಿ ಬೆಂಗಳೂರು ಜನಕ್ಕೆ ಅತ್ಯಾಪ್ತವಾಗಿತ್ತು. ಬೆಂಗೂರಿನ ಟ್ರಾಫಿಕ್, ಆಟೋ, ಕ್ಯಾಬ್ ದುಬಾರಿ ದರಗಳಿಂದ ಬಹುತೇಕರು ಬೈಕ್ ಟ್ಯಾಕ್ಸಿ ಅವಲಂಬಿಸಿದ್ದರು. ಆದರೆ ಬ್ಯಾನ್ ಬಹುತೇಕ ಬೆಂಗಳೂರಿಗರಿಗೆ ಸಂಕಷ್ಟ ತಂದಿತ್ತು. ಹಲವರು ಬೈಕ್ ಟ್ಯಾಕ್ಸಿ ಮತ್ತೆ ಆರಂಭಿಸುವಂತೆ ಆಗ್ರಹಿಸಿದ್ದಾರೆ. ನಿಯಮಗಳನ್ನು ರೂಪಿಸಿ ಬೈಕ್ ಟ್ಯಾಕ್ಸಿ ಆರಂಭಿಸಬೇಕು. ನಗರ ಪ್ರದೇಶಗಳಲ್ಲಿ ಬೈಕ್ ಟ್ಯಾಕ್ಸ್ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುರಕ್ಷತೆ ಸೇರಿದಂತೆ ಇತರ ಕ್ರಮಗಳ ಬಗ್ಗೆ ಕಟ್ಟು ನಿಟ್ಟಿನ ಕಾನೂನು ರೂಪಿಸಿ, ಬೈಕ್ ಟ್ಯಾಕ್ಸಿ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.