ಬೆಂಗಳೂರು, (ಜೂ.23): ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‍ಡೌನ್ ಮಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಇಂದು (ಮಂಗಳವಾರ) ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ರಾಜ್ಯವನ್ನು ಮತ್ತೊಮ್ಮೆ ಲಾಕ್‍ಡೌನ್ ಮಾಡಬೇಕು ಎಂಬ ಸಲಹೆಗಳು ಕೇಳಿ ಬಂದಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜತೆ ಚರ್ಚೆ ಮಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. 

'ಚೆಲ್ಲಾಟ ನಿಲ್ಲಿಸಿ, ಬೆಂಗಳೂರಿಗರು ಬದುಕುಳಿಯಲು 20 ದಿನ ಲಾಕ್‌ಡೌನ್ ಘೋಷಿಸಿ' 

ಈಗಾಗಲೇ ಈ ಕುರಿತು ಚರ್ಚೆಗಳು ಆರಂಭಗೊಂಡಿದ್ದು, ಬೆಂಗಳೂರಿನಲ್ಲಿ 4 ಏರಿಯಾಗಳನ್ನ ಹುಡುಕಿ ಸೀಲ್‌ಡೌನ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಲಾಕ್‌ಡೌನ್ ಮಾಡುವ ಬಗ್ಗೆ ಚಿಂತನೆಗಳು ನಡೆದಿವೆ ಎಂದು ಹೇಳಿದರು. 

ರಾಜ್ಯಾದ್ಯಂತ ಇದೇ ರೀತಿ ಲಾಕ್‍ಡೌನ್ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳುವ ಮೂಲಕ  ಸರ್ಕಾರದ ಮಟ್ಟದಲ್ಲಿ ಮತ್ತೆ ಲಾಕ್‌ಡೌನ್ ಬಗ್ಗೆ ಚರ್ಚೆಯಾಗುತ್ತಿರುವುದನ್ನು ಬಹಿರಂಗಪಡಿಸಿದರು.

ಇನ್ನು ಮತ್ತೆ ಲಾಕ್‌ಡೌನ್ ಮಾಡುವಂತೆ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸಹ ಸರ್ಕಾರ ಸಲಹೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.