* ಜನರ ವಿರೋಧದ ಕಾರಣ ಆದೇಶ ಹಿಂದಕ್ಕೆ* ಪ್ರಾಣಿವಧೆಗೆ ‘ಸ್ಟನ್ನಿಂಗ್ ನಿಯಮ’ ಕಡ್ಡಾಯವಿಲ್ಲ* ಸಚಿವ ಪ್ರಭು ಚೌಹಾಣ್ ಹೇಳಿಕೆ
ಬೆಂಗಳೂರು(ಏ.04): ಹಲಾಲ್ ಬಾಯ್ಕಾಟ್ ಅಭಿಯಾನ ಬೆನ್ನೆಲ್ಲೇ ಪ್ರಾಣಿಗಳ ವಧೆ ಸಂದರ್ಭದಲ್ಲಿ ‘ಸ್ಟನ್ನಿಂಗ್’ (ಪ್ರಜ್ಞೆ ತಪ್ಪಿಸು) ವಿಧಾನ ಪಾಲಿಸಬೇಕು ಎಂಬ ಪಶುಪಾಲನಾ ಇಲಾಖೆ ಆದೇಶ ಪ್ರತಿಯೊಂದು ವೈರಲ್ ಆಗಿತ್ತು. ಆದರೆ, ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆ ಇಲಾಖೆ ಅದೇಶದಿಂದ ಹಿಂದೆ ಸರಿದಿದ್ದು, ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶ ಜಾರಿಗೊಳಿಸಿಲ್ಲ ಎಂದು ಸಚಿವ ಪ್ರಭು ಚವ್ಹಾಣ್ ಸ್ಟಷ್ಟನೆ ನೀಡಿದ್ದಾರೆ.
‘ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವಾಗ ಪ್ರಾಣಿಗಳಿಗೆ ಹಿಂಸೆ ನೀಡಬಾರದು. ಕಡ್ಡಾಯವಾಗಿ ಸ್ಟನ್ನಿಂಗ್ ಬಳಸಬೇಕು. ಆದರೆ, ಬೆಂಗಳೂರು ಪ್ರಾಣಿವಧಾಗಾರಗಳಲ್ಲಿ ಈ ನಿಯಮ ಪಾಲಿಸುತ್ತಿಲ್ಲ. ಈ ಕುರಿತು ಕ್ರಮವಹಿಸಬೇಕು’ ಎಂದು ಬಿಬಿಎಂಪಿಗೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಉಮಾಪತಿ ಶುಕ್ರವಾರ (ಏ.1)ಆದೇಶ ಹೊರಡಿಸಿದ್ದರು. ಶನಿವಾರ ಆದೇಶ ಪ್ರತಿ ವೈರಲ್ ಆಗಿತ್ತು. ಬಳಿಕ ಈ ಕುರಿತು ಸಚಿವ ಪ್ರಭು ಚವ್ಹಾಣ್ ಮಾತನಾಡಿ, ‘ಸ್ಟನ್ನಿಂಗ್ ಕಡ್ಡಾಯ ನಿಯಮ ಆದೇಶವನ್ನು ನಾವು ಹೊರಡಿಸಿಲ್ಲ. ಪತ್ರದ ಬಗ್ಗೆ ನಾನು ಪರಿಶೀಲನೆ ಮಾಡುತ್ತೇನೆ’ ಎಂದು ತಿಳಿಸಿದರು.
ಏನಿದು ಸ್ಟನ್ನಿಂಗ್ ವಿಧಾನ?:
ಇದು ಪ್ರಾಣಿ ವಧೆಗೂ ಮುನ್ನ ಅವುಗಳ ಪ್ರಜ್ಞೆ ತಪ್ಪಿಸುವ ವಿಧಾನವಾಗಿದೆ. ವಧಾಗಾರಗಳಲ್ಲಿ ಎಲೆಕ್ಟ್ರಿಕ್ ಸ್ಟನ್ನಿಂಗ್ ಯಂತ್ರಗಳು ಇರುತ್ತವೆ. ಅದನ್ನು ಬಳಸಿ ಕುರಿ/ಮೇಕೆ/ಕೋಳಿಯ ತಲೆಗೆ ಚಿಕ್ಕಪ್ರಮಾಣದ ವಿದ್ಯುತ್ ಹರಿಸಿದಾದ ಮೆದುಳು ನಿಷ್ಕಿ್ರಯಗೊಂದು ಪ್ರಜ್ಞೆ ತಪ್ಪಿಸಲಾಗುತ್ತದೆ. ಬಳಿಕ ಕುತ್ತಿಗೆ ಕತ್ತರಿಸಿ ಜೀವ ತೆಗೆಯಲಾಗುತ್ತದೆ. ಈ ವಿಧಾನದಿಂದ ಪ್ರಾಣಿಗಳಿಗೆ ಹೆಚ್ಚಿನ ಹಿಂಸೆಯಾಗುವುದಿಲ್ಲ ಎನ್ನುತ್ತಾರೆ ಪಶುಪಾಲನಾ ಇಲಾಖೆ ಅಧಿಕಾರಿಗಳು. ಪ್ರಾಣಿಗಳ ಮೇಲಿನ ಕ್ರೌರ್ಯದ ತಡೆಗಟ್ಟುವಿಗೆ (ಪಿಸಿಎ) ಕಾಯ್ದೆ 2001 ಕಾಯ್ದೆಯಲ್ಲಿ ಸ್ಟನ್ನಿಂಗ್ ವಿಧಾನ ಕಡ್ಡಾಯಗೊಳಿಸಲಾಗಿದೆ. ನಿಯಮ ಪಾಲಿಸದಿದ್ದರೆ 5000 ರಿಂದ 50,000 ರು. ದಂಡ ವಿಧಿಸಲು ಅವಕಾಶವಿದೆ.
