ಬೆಂಗಳೂರು [ಜ.10]:  ರಾಜ್ಯದ ಜನತೆಗೆ ವಿದ್ಯುತ್‌ ದರ ಹೆಚ್ಚಳದ ಶಾಕ್‌ ನೀಡಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದ್ದು, ರಾಜ್ಯದ ಐದೂ ವಿದ್ಯುತ್‌ ಸರಬರಾಜು ಕಂಪನಿಗಳು ತಮ್ಮ ವ್ಯಾಪ್ತಿಯ ವಿದ್ಯುತ್‌ ಸಂಪರ್ಕಕ್ಕೆ ಏಪ್ರಿಲ್‌ನಿಂದ ವಿದ್ಯುತ್‌ ದರ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿವೆ.

ವಿದ್ಯುತ್‌ ಸರಬರಾಜು ಕಂಪನಿಗಳು ಪ್ರತಿ ಯೂನಿಟ್‌ಗೆ ಸರಾಸರಿ 1 ರು.ಗಳಿಂದ 2.20 ರು.ವರೆಗೆ ಸರಾಸರಿ ವಿದ್ಯುತ್‌ ದರ ಏರಿಕೆ ಮಾಡುವಂತೆ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ, ಕಡಿಮೆ ವಿದ್ಯುತ್‌ ಬಳಕೆ ಮಾಡುವ ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದ ಗೃಹ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗದಂತೆ ಪ್ರಸ್ತಾವನೆ ಸಲ್ಲಿಸಿವೆ. ಸರ್ಕಾರವೇ ವೆಚ್ಚ ಭರಿಸುವ ಕೃಷಿ ಪಂಪ್‌ಸೆಟ್‌ಗಳಿಗೆ ಭಾರೀ ಪ್ರಮಾಣದಲ್ಲಿ ವಿದ್ಯುತ್‌ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ. ಬೆಸ್ಕಾಂ ಕಂಪನಿಯು ತನ್ನ ವ್ಯಾಪ್ತಿಯಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ (10 ಎಚ್‌.ಪಿ.ವರೆಗಿನ) 3.90 ರು.ಗಳಿಷ್ಟಿದ್ದ ವಿದ್ಯುತ್‌ ದರವನ್ನು ಪ್ರತಿ ಯೂನಿಟ್‌ಗೆ ಬರೋಬ್ಬರಿ 6.90 ರು.ಗೆ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲಿಸಿದೆ.

ಪ್ರತಿ ವಿದ್ಯುತ್‌ ಸರಬರಾಜು ಕಂಪನಿಯೂ ಗೃಹಬಳಕೆ ಗ್ರಾಹಕರು, ಸರ್ಕಾರಿ ವಿದ್ಯಾಸಂಸ್ಥೆಗಳು ಹಾಗೂ ಆಸ್ಪತ್ರೆ ಸ್ಥಾವರಗಳಿಗೆ ಒಂದು ದರ ಹಾಗೂ ಕೈಗಾರಿಕಾ ಬಳಕೆದಾರರು, ವಾಣಿಜ್ಯ ಬಳಕೆದಾರರು, ಎಚ್‌.ಟಿ. ವಾಣಿಜ್ಯ ಬಳಕೆದಾರರಿಗೆ ಪ್ರತ್ಯೇಕವಾಗಿ ದರ ಏರಿಕೆ ಪ್ರಸ್ತಾಪಿಸಿವೆ.

ವಿದ್ಯುತ್ ಬಿಲ್ ಕಡಿಮೆಗೊಳಿಸಲು ಸಿಂಪಲ್ ಟಿಪ್ಸ್...

ಆಯೋಗವು ವಿದ್ಯುತ್‌ ಸರಬರಾಜು ಕಂಪನಿಗಳ ದರ ಏರಿಕೆಗೆ ಪರಿಶೀಲನೆ ನಡೆಸುತ್ತಿದ್ದು ರಾಜ್ಯ ಸರ್ಕಾರದ ಜತೆ ಚರ್ಚೆ ನಡೆಸಿ ಸದ್ಯದಲ್ಲೇ ವಿದ್ಯುತ್‌ ದರ ಏರಿಕೆ ಪ್ರಕಟಣೆ ಮಾಡಲಿದೆ. ಏ.1 ರಿಂದ ನೂತನ ವಿದ್ಯುತ್‌ ದರಗಳು ಅನ್ವಯವಾಗಲಿವೆ ಎಂದು ತಿಳಿದುಬಂದಿದೆ. ಆದರೆ, ವಿದ್ಯುತ್‌ ಸರಬರಾಜು ಕಂಪನಿಗಳು ಪ್ರಸ್ತಾವನೆ ಸಲ್ಲಿಸಿದಷ್ಟೂದರ ಏರಿಕೆಯನ್ನು ಕೆಇಆರ್‌ಸಿ ಮಾಡುವುದಿಲ್ಲ. ಸಾರ್ವಜನಿಕರ ಹಿತ ದೃಷ್ಟಿಯಲ್ಲಿಷ್ಟುಕೊಂಡು ಆದಷ್ಟೂಕಡಿಮೆ ದರ ಹೆಚ್ಚಳ ಮಾಡಲಿದೆ ಎಂದು ಕೆಇಆರ್‌ಸಿ ಮೂಲಗಳು ‘ಕನ್ನಡಪ್ರಭಕ್ಕೆ’ ತಿಳಿಸಿವೆ.

ಪ್ರತಿ ಯೂನಿಟ್‌ಗೆ 1.90 ರು. ಹೆಚ್ಚಳಕ್ಕೆ ಬೆಸ್ಕಾಂ ಬೇಡಿಕೆ:

ಬೆಸ್ಕಾಂ ಕಂಪನಿಯು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಕಂಪನಿಗೆ 2018-19ನೇ ಸಾಲಿನಲ್ಲಿ ಬೆಸ್ಕಾಂಗೆ 2,224 ಕೋಟಿ ರು. ಆದಾಯ ಕೊರತೆ ಉಂಟಾಗಿತ್ತು. 2020-21ನೇ ಸಾಲಿನ ವೇಳೆಗೆ ಆದಾಯ ಕೊರತೆ 5,872 ಕೋಟಿ ರು.ನಷ್ಟಾಗಿದೆ.

2020-21ನೇ ಸಾಲಿಗೆ ವಿದ್ಯುತ್‌ ಸರಬರಾಜು ಸರಾಸರಿ ವೆಚ್ಚ ಪ್ರತಿ ಯೂನಿಟ್‌ಗೆ 9.73 ತಗುಲಲಿದ್ದು ಆದಾಯ 7.7 ರು. ಮಾತ್ರ ಇರಲಿದೆ. ಹೀಗಾಗಿ ಎಲ್ಲಾ ವಲಯಗಳಲ್ಲೂ ಪ್ರತಿ ಯೂನಿಟ್‌ಗೆ 1.96 ರು.ಗಳಂತೆ ಸರಾಸರಿ ವಿದ್ಯುತ್‌ ದರ ಹೆಚ್ಚಳ ಮಾಡಬೇಕು ಎಂದು ಪ್ರಸ್ತಾವನೆ ಸಲ್ಲಿಸಿದೆ.

ಬೆಸ್ಕಾಂ ಮಾತ್ರವಲ್ಲದೆ ಮೆಸ್ಕಾಂ, ಚೆಸ್ಕಾಂ, ಹೆಸ್ಕಾಂ ಹಾಗೂ ಜೆಸ್ಕಾಂ ವಿದ್ಯುತ್‌ ಸರಬರಾಜು ಕಂಪನಿಗಳೂ ಪ್ರತ್ಯೇಕವಾಗಿ ಎಲ್ಲಾ ವರ್ಗಗಳ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 0.50 ರು.ಗಳಿಂದ 2.00 ರು.ವರೆಗೆ ದರ ಏರಿಕೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿವೆ ಎಂದು ಕೆಇಆರ್‌ಸಿ ಮೂಲಗಳು ತಿಳಿಸಿವೆ.

ನೀರಾವರಿ ಪಂಪ್‌ಸೆಟ್‌ಗಳಿಗೆ ಭರ್ಜರಿ ಏರಿಕೆ:

ಬೆಸ್ಕಾಂ ಕೆಇಆರ್‌ಸಿಗೆ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಬಿಬಿಎಂಪಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ, ದಾವಣಗೆರೆ ವ್ಯಾಪ್ತಿಯಲ್ಲಿರುವ ಎಲ್ಲಾ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಗೃಹ ಬಳಕೆ ವಿದ್ಯುತ್‌ಗೆ ಮೊದಲ ಎರಡು ಸ್ಲಾ್ಯಬ್‌ಗಳಿಗೆ ವಿದ್ಯುತ್‌ ದರ ಏರಿಕೆಗೆ ಮನವಿ ಮಾಡಿಲ್ಲ. ಉಳಿದ ಸ್ಲಾ್ಯಬ್‌ಗಳಿಗೆ ಕ್ರಮವಾಗಿ ಶೇ.9.03ರಿಂದ ಶೇ.12.88ರಷ್ಟುಹೆಚ್ಚಳ ಮಾಡಬೇಕು ಎಂದು ಹೇಳಿದೆ. 101ನೇ ಯೂನಿಟ್‌ನಿಂದ 200 ಯೂನಿಟ್‌ ವಿದ್ಯುತ್‌ ಬಳಸುವವರಿಗೆ ಪ್ರತಿ ಯೂನಿಟ್‌ಗೆ 6.75 ರು.ಗಳಷ್ಟಿದ್ದ ವಿದ್ಯುತ್‌ ದರವನ್ನು 7.75 ರು.ಗೆ ಹೆಚ್ಚಳ ಮಾಡಬೇಕು. 200 ಯೂನಿಟ್‌ಗಳಿಗಿಂತ ಹೆಚ್ಚು ಬಳಕೆಯ ಸ್ಲಾ್ಯಬ್‌ಗೆ 7.80 ರು.ಗಳಿಂದ 8.80 ರು. ಹೆಚ್ಚಳ ಮಾಡಬೇಕು ಎಂದು ಹೇಳಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಶೇ.9.88ರಿಂದ ಶೇ.10ರಷ್ಟುಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಮೊದಲ ಮೂರು ಸ್ಲಾ್ಯಬ್‌ಗಳಲ್ಲಿ ಯಾವುದೇ ಬದಲಾವಣೆ ಪ್ರಸ್ತಾಪಿಸಿಲ್ಲ. ಆದರೆ, 200ಕ್ಕೂ ಹೆಚ್ಚು ಯೂನಿಟ್‌ ವಿದ್ಯುತ್‌ ಬಳಸುವವರಿಗೆ ಪ್ರತಿ ಯೂನಿಟ್‌ಗೆ 7.30 ರು.ಗಳಿಂದ 8.30 ರು.ಗೆ ಹೆಚ್ಚಳ ಮಾಡುವಂತೆ ಪ್ರಸ್ತಾಪಿಸಿದೆ.

ಸಾರ್ವಜನಿಕರ ಮೇಲೆ ಹೊರೆಗಿಂತ ಸರ್ಕಾರದ ಮೇಲೆ ಹೊರೆ ಹೊರೆಸಲು ಮುಂದಾಗಿರುವ ಬೆಸ್ಕಾಂ ಕಂಪನಿಯು ಕೃಷಿ ಪಂಪ್‌ಸೆಟ್‌ಗಳ ದರವನ್ನು ಪ್ರತಿ ಯೂನಿಟ್‌ಗೆ 3.90 ರು. ಬದಲಿಗೆ 6.90 ರಷ್ಟುಮಾಡಲು ಪ್ರಸ್ತಾವನೆ ಸಲ್ಲಿಸಿದೆ.

ವರ್ಷದ ಹಿಂದೆ 33 ಪೈಸೆ ಏರಿಕೆಯಾಗಿತ್ತು

ಕೆಇಆರ್‌ಸಿ ಕಳೆದ ವರ್ಷವಷ್ಟೇ ರಾಜ್ಯದಲ್ಲಿ ವಿದ್ಯುತ್‌ ಬೆಲೆ ಏರಿಕೆ ಮಾಡಿತ್ತು. 2019ರ ಮಾಚ್‌ರ್‍ನಲ್ಲಿ ಪ್ರತಿ ಯುನಿಟ್‌ಗೆ 29ರಿಂದ 33 ಪೈಸೆ ವಿದ್ಯುತ್‌ ದರ ಏರಿಕೆ ಮಾಡಿ ಆದೇಶಿಸಿತ್ತು. ಇದೀಗ ಅದೇ ಮಾದರಿಯಲ್ಲಿ ದರ ಹೆಚ್ಚಿಸಲು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ವಿದ್ಯುತ್‌ ಸರಬರಾಜು ಕಂಪನಿಗಳು ವಿದ್ಯುತ್‌ ದರ ಹೆಚ್ಚಳಕ್ಕೆ ಕಾರಣಗಳನ್ನೂ ನೀಡಿದ್ದು, ವಿದ್ಯುತ್‌ ದರ ಹೆಚ್ಚಳ ಕುರಿತು ಹೊಸ ಉಷ್ಣ ವಿದ್ಯುತ್‌ ಕೇಂದ್ರಗಳಿಂದ ವಿದ್ಯುತ್‌ ಖರೀದಿ ದರದಲ್ಲಿನ ಏರಿಕೆ, ನವೀಕರಿಸಬಹುದಾದ ಇಂಧನ ಮೂಲಗಳಿಂದ ಖರೀದಿಸುವ ವಿದ್ಯುತ್‌ ದರದಲ್ಲಿನ ಏರಿಕೆ ಹಾಗೂ ವಿದ್ಯುತ್‌ ಖರೀದಿ ವೆಚ್ಚದಲ್ಲಿ ಶೇ.16ರಷ್ಟುಏರಿಕೆಯಾಗಿದೆ.

ನೌಕರರ ವೇತನ ಪರಿಷ್ಕರಣೆಯಿಂದಾಗಿ ಕಾರ್ಯ ಮತ್ತು ನಿರ್ವಹಣೆ ವೆಚ್ಚದಲ್ಲಿ ಶೇ.20 ರಷ್ಟುಹೆಚ್ಚಳ, ಬಡ್ಡಿ ಮತ್ತು ಹಣಕಾಸು ವೆಚ್ಚದಲ್ಲಿ ಶೇ.12ರಷ್ಟುಏರಿಕೆ, ಸವಕಳಿ ದರದಲ್ಲಿ ಸುಮಾರು ಶೇ.20 ಏರಿಕೆಯಾಗಿದೆ. ಹೀಗಾಗಿ ದರ ಏರಿಕೆ ಅನಿವಾರ್ಯ ಎಂಬುದು ವಿದ್ಯುತ್‌ ಸರಬರಾಜು ಕಂಪನಿಗಳ ವಾದ.

ಬೆಸ್ಕಾಂ ಪ್ರತಿ ಯುನಿಟ್‌ ವಿದ್ಯುತ್‌ ಸರಬರಾಜು ಮಾಡಲು ಸರಾಸರಿ 9.73 ರು. ವೆಚ್ಚ ಮಾಡುತ್ತಿದೆ. ಆದರೆ, ಪ್ರತಿ ಯೂನಿಟ್‌ಗೆ ಸರಾಸರಿ 7.77 ರು. ಆದಾಯ ಮಾತ್ರ ಬರುತ್ತಿದ್ದು, 1.96 ರು.ಗಳಷ್ಟುಕೊರತೆ ಉಂಟಾಗುತ್ತಿದೆ. ಹೀಗಾಗಿ ಪ್ರತಿ ಯೂನಿಟ್‌ಗೆ ಸರಾಸರಿ 1.96 ರು. ಹೆಚ್ಚಳ ಮಾಡುವಂತೆ ವಿವಿಧ ಬಳಕೆದಾರರಿಗೆ ಪ್ರತ್ಯೇಕ ದರ ಹೆಚ್ಚಳಕ್ಕೆ ಬೇಡಿಕೆ ಸಲ್ಲಿಸಿ ಕೆಇಆರ್‌ಸಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಕೆಇಆರ್‌ಸಿ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ.

- ಎಂ.ಬಿ.ರಾಜೇಶ್‌ಗೌಡ, ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ