ಬೆಂಗಳೂರು[ಜ.11]: ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಪ್ರಾರಂಭಿಸಬೇಕು. ಈ ಶಾಲೆಗಳಿಗೆ ಹತ್ತು ಅಥವಾ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ದಾಖಲಿಸಿ ಉಚಿತ ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ರಾಜ್ಯದ ಸುಸ್ಥಿರ ಅಭಿವೃದ್ಧಿಗೆ 2020-21ನೇ ಸಾಲಿನ ಬಜೆಟ್‌ನಲ್ಲಿ ಹಮ್ಮಿಕೊಳ್ಳಬೇಕಿರುವ ಯೋಜನೆಗಳ ಬಗ್ಗೆ ವರದಿ ನೀಡಿರುವ ಅವರು, ಹತ್ತು ಹಾಗೂ ಹತ್ತಕ್ಕಿಂತ ಕಡಿಮೆ ಮಕ್ಕಳಿರುವ ಶಾಲೆಗಳಲ್ಲಿ ಒಬ್ಬೊಬ್ಬ ಶಿಕ್ಷಕರು ಮಾತ್ರ ಇರುತ್ತಾರೆ. ಪ್ರತಿ ವಿಷಯಕ್ಕೆ ವಿಷಯವಾರು ಪ್ರತ್ಯೇಕ ಶಿಕ್ಷಕರಿಲ್ಲದೆ ಗುಣಮಟ್ಟದ ಶಿಕ್ಷಣ ಸಾಧ್ಯವಾಗುವುದಿಲ್ಲ. ಹೀಗಾಗಿ ಶಾಲೆಗಳಲ್ಲಿರುವ ಮಕ್ಕಳನ್ನು ಪಬ್ಲಿಕ್‌ ಶಾಲೆಗೆ ಸ್ಥಳಾಂತರಿಸಿ ಅಲ್ಲಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ.

ಈ ಬಗ್ಗೆ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಗುಣಮಟ್ಟದ ಶಿಕ್ಷಣದಲ್ಲಿ 2018-19ರಲ್ಲಿ ದೇಶದಲ್ಲಿ 4ನೇ ಸ್ಥಾನ ಗಳಿಸಿದ್ದ ರಾಜ್ಯವು 2019-20ನೇ ಸಾಲಿಗೆ 7ನೇ ಸ್ಥಾನಕ್ಕೆ ಕುಸಿದಿದೆ. ಇದನ್ನು ಉತ್ತಮಪಡಿಸಲು ಹಾಗೂ ಗುಣಮಟ್ಟದ ಶಿಕ್ಷಣವನ್ನು ಪ್ರತಿಯೊಬ್ಬ ವಿದ್ಯಾರ್ಥಿಗೂ ನೀಡುವಂತೆ ಮಾಡಲು ಈ ಸಲಹೆ ನೀಡಲಾಗಿದೆ ಎಂದರು.

ಇಂತಹ ಸಲಹೆಯಿಂದ ಹತ್ತಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಮುಚ್ಚುವಂತೆ ಸಲಹೆ ನೀಡಿದಂತಾಗುವುದಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಶಾಲೆಗಳನ್ನು ಇದೇ ರೀತಿ ಮುಂದುವರೆಸಿದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇಂತಹ ಶಾಲೆಗಳ ಅಂಕಿ-ಅಂಶವನ್ನು ಶಿಕ್ಷಣ ಇಲಾಖೆ ಬಳಿ ಕೇಳಿದ್ದೇವೆ. ಇದು ಕೇವಲ ಪ್ರಸ್ತಾವನೆಯಷ್ಟೇ. ಈ ವಿಷಯದ ಬಗ್ಗೆ ಸಾರ್ವಜನಿಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

7ನೇ ಕ್ಲಾಸ್‌ಗೆ ‘ಪಬ್ಲಿಕ್‌’ ಪರೀಕ್ಷೆ ಇಲ್ಲ

ಸುಸ್ಥಿರ ಅಭಿವೃದ್ಧಿಯಲ್ಲಿ 2ನೇ ಸ್ಥಾನದ ಗುರಿ:

ರಾಜ್ಯವು ಸುಸ್ಥಿರ ಅಭಿವೃದ್ಧಿಯಲ್ಲಿ ದೇಶಕ್ಕೆ 7ನೇ ಸ್ಥಾನ ಪಡೆದಿದೆ. 2015ರ ಸೆಪ್ಟೆಂಬರ್‌ನಲ್ಲಿ ಸುಸ್ಥಿರ ಅಭಿವೃದ್ಧಿಗಾಗಿ 2030ವರೆಗೆ ಕಾರ್ಯಸೂಚಿಯೊಂದನ್ನು ವಿಶ್ವಸಂಸ್ಥೆ ರೂಪಿಸಿತ್ತು. ಇದು ರಾಜ್ಯದಲ್ಲಿ ಜ.1, 2016ರಿಂದ ಜಾರಿಗೆ ಬಂದಿದ್ದು, ಪ್ರಸ್ತುತ ಬಡತ ನಿರ್ಮೂಲನೆಯಲ್ಲಿ 16ನೇ ಸ್ಥಾನ, ಹಸಿವುಮುಕ್ತ ರಾಜ್ಯದಲ್ಲಿ 17ನೇ ಸ್ಥಾನ, ಗುಣಮಟ್ಟದ ಶಿಕ್ಷಣದಲ್ಲಿ 7ನೇ ಸ್ಥಾನ ಪಡೆದಿದೆ. ತಾಪಮಾನ ನಿಯಂತ್ರಣದ ಕ್ರಮಗಳು ಹಾಗೂ ನೀರಿನ ನಿರ್ವಹಣೆಯಲ್ಲಿ ಮೊದಲ ಸ್ಥಾನ ಪಡೆದಿದ್ದೇವೆ. ಗುಣಮಟ್ಟದ ಶಿಕ್ಷಣ, ಲಿಂಗ ಸಮಾನತೆ, ಸ್ವಚ್ಛ ನೀರು ಮತ್ತು ನೈರ್ಮಲ್ಯ ಸೇರಿದಂತೆ ಎಲ್ಲಾ ವರ್ಗಗಳಲ್ಲೂ ಸೂಕ್ತ ಬದಲಾವಣೆ ತರುವ ಮೂಲಕ ಸುಸ್ಥಿರ ಅಭಿವೃದ್ಧಿಯಲ್ಲಿ ರಾಜ್ಯವನ್ನು 2 ಅಥವಾ 3ನೇ ಸ್ಥಾನಕ್ಕೆ ತರುವ ಗುರಿ ಹೊಂದಿದ್ದೇವೆ ಎಂದರು.

ಇದಕ್ಕಾಗಿ ಮೊದಲ ಸ್ಥಾನಗಳಲ್ಲಿರುವ ಕೇರಳ, ದೆಹಲಿ, ತಮಿಳುನಾಡು, ಗುಜರಾತ್‌ನಲ್ಲಿ ಅಧ್ಯಯನ ಪ್ರವಾಸ ಹಮ್ಮಿಕೊಳ್ಳುವುದಾಗಿಯೂ ಮಾಹಿತಿ ನೀಡಿದರು.

ಬಡವರ ಬಂಧು, ಕೃಷಿ ಹೊಂಡ ಬದಲಾವಣೆ:

ಬಡವರ ಬಂಧು ಯೋಜನೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ನಿತ್ಯ ಸಾಲ ವಸೂಲಿ ಮಾಡುವ ಬದಲು ಪ್ರತಿ ಮೂರು ತಿಂಗಳಿಗೊಮ್ಮೆ ಸಾಲ ವಾಪಸು ಪಡೆಯಬೇಕು. ಅಲ್ಲದೆ ಶಿಸ್ತಾಗಿ ಮರು ಪಾವತಿ ಮಾಡಿದವರಿಗೆ ಮುಂದಿನ ಬಾರಿ ಶೇ.10ರಷ್ಟುಹೆಚ್ಚಿನ ಸಾಲ ನೀಡಬೇಕು. ಆಧಾರ್‌ ಹಾಗೂ ಮತದಾರರ ಗುರುತಿನ ಚೀಟಿ ಕಡ್ಡಾಯಗೊಳಿಸಬೇಕು. ಇದನ್ನು ಎಲ್ಲಾ ನಗರ ಹಾಗೂ ಹೋಬಳಿ ಮಟ್ಟದ ಬೀದಿ ಬದಿ ವ್ಯಾಪಾರಿಗಳಿಗೂ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ನೀಡಿರುವ ವರದಿಯಲ್ಲಿ ತಿಳಿಸಿದ್ದೇವೆ.

ಅಲ್ಲದೆ, ಕೃಷಿ ಹೊಂಡ ಯೋಜನೆಯಲ್ಲಿ ಹೊಂಡದಲ್ಲಿ ಪೇಪರ್‌ ಬಳಕೆ ಮಾಡದೆ ಅಂತರ್ಜಲ ವೃದ್ಧಿಗೂ ಕೊಡುಗೆ ನೀಡಬೇಕು. ಜತೆಗೆ ಪಶುಭಾಗ್ಯವನ್ನು ಸೂಕ್ತ ಫಲಾನುಭವಿಗಳಿಗೆ ತಲುಪಿಸಬೇಕು ಎಂದು ಯೋಜನೆಗಳವಾರು ಸಲಹೆ ನೀಡಿದ್ದೇವೆ ಎಂದರು.