ಬೆಂಗಳೂರು[ಮಾ.08]: ರಾಜ್ಯಾದ್ಯಂತ ಶಂಕಿತ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಹೊಸದಾಗಿ ರಾಜ್ಯದ ಮೂರು ವೈದ್ಯಕೀಯ ಕಾಲೇಜುಗಳಲ್ಲಿ ಕೊರೋನಾ ಸೋಂಕು ಪರೀಕ್ಷಾ ಕೇಂದ್ರ ಹಾಗೂ ಎರಡು ವೈದ್ಯಕೀಯ ಕಾಲೇಜುಗಳಲ್ಲಿ ಮಾದರಿ ಸಂಗ್ರಹ ಕೇಂದ್ರಗಳನ್ನು ಪ್ರಾರಂಭಿಸಲು ವೈದ್ಯಕೀಯ ಶಿಕ್ಷಣ ಇಲಾಖೆ ಮುಂದಾಗಿದೆ.

ಈಗಾಗಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ವಿಕ್ಟೋರಿಯಾ ಆವರಣದಲ್ಲಿ ಹಾಗೂ ರಾಜೀವ್‌ಗಾಂಧಿ ಎದೆರೋಗ ಸಂಸ್ಥೆ ಆವರಣದ ಎನ್‌ಐವಿ ಕೇಂದ್ರದಲ್ಲಿ ಕೊರೋನಾ ಸೋಂಕು ಪರೀಕ್ಷೆಗೆ ವ್ಯವಸ್ಥೆ ಇದೆ.

ದಿನದಿಂದ ದಿನಕ್ಕೆ ಕೊರೋನಾ ಶಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೈಸೂರು, ಹಾಸನ, ಶಿವಮೊಗ್ಗ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಗಳಲ್ಲೂ ಕೊರೋನಾ ಸೋಂಕು ಪರೀಕ್ಷಾ ಕೇಂದ್ರವನ್ನು ತೆರೆಯಲಾಗುವುದು. ಜತೆಗೆ ಬಳ್ಳಾರಿಯ ವಿಜಯನಗರ ವೈದ್ಯಕೀಯ ಕಾಲೇಜು ಹಾಗೂ ಕಲಬುರಗಿ ವೈದ್ಯಕೀಯ ಕಾಲೇಜಿಗಳಲ್ಲಿ ಸೋಂಕು ಪರೀಕ್ಷೆಗೆ ಅಗತ್ಯವಿರುವ ಗಂಟಲು ದ್ರಾವಣ ಹಾಗೂ ರಕ್ತ ಮಾದರಿ ಸಂಗ್ರಹ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ನಿರ್ದೇಶಕ ಡಾ.ಓಂ ಪ್ರಕಾಶ್‌ ಪಾಟೀಲ್‌, ಕೇಂದ್ರಗಳಲ್ಲಿ ಪ್ರಯೋಗಿಕವಾಗಿ ಪರೀಕ್ಷೆ ಮಾಡಲಾಗಿದೆ. ಸೋಮವಾರದಿಂದ ಈ ಪರೀಕ್ಷಾ ಕೇಂದ್ರಗಳು ಹಾಗೂ ಸಂಗ್ರಹ ಕೇಂದ್ರಗಳು ಕಾರ್ಯಾರಂಭಿಸಲಿವೆ ಎಂದರು.

ಜಾವೇದ್‌ ಅಖ್ತರ್‌ ಪರಿಶೀಲನೆ:

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಿದ್ದು ಶನಿವಾರ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ನೇತೃತ್ವದಲ್ಲಿ, ತಪಾಸಣೆ ಕ್ರಮಗಳನ್ನು ಪರಿಶೀಲನೆ ನಡೆಸಲಾಯಿತು. ವಿಮಾನ ನಿಲ್ದಾಣ ಮತ್ತು ಆಸ್ಪತ್ರೆಗಳಲ್ಲಿ ಪ್ರಯಾಣಿಕರ ತಪಾಸಣೆ ಮತ್ತು ಶಂಕಿತರ ಸರ್ವೇಕ್ಷಣೆ ನಡೆಸಲು ವೈದ್ಯಕೀಯ ಕಾಲೇಜುಗಳ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಯೋಜಿಸಿಕೊಳ್ಳಲಾಗಿದೆ.

ಗುಂಪು ಸೇರಲು ಅವಕಾಶವಿಲ್ಲ:

ಕೊರೋನಾ ರಾಜ್ಯದಲ್ಲಿ ಪ್ರವೇಶಿಸದಿರಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ 30 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆ ನಡೆಸಲಾಗಿದೆ. ಇದಲ್ಲದೆ ಹಬ್ಬ, ಉತ್ಸವ, ಜಾಥ ಮುಂತಾದ ಕಾರಣಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವಂತೆ ಎಲ್ಲಾ ಜಿಲ್ಲೆಗಳಿಗೂ ಸುತ್ತೋಲೆ ಕಳುಹಿಸಲಾಗಿದೆ.

ಯಾರಲ್ಲೂ ಸೋಂಕು ಇಲ್ಲ:

ರಾಜ್ಯದಲ್ಲಿ ಈವರೆಗೂ ವಿಮಾನ ನಿಲ್ದಾಣಗಳು, ಬಂದರುಗಳು ಸೇರಿದಂತೆ 77,469 ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇವರಲ್ಲಿ ರೋಗ ಲಕ್ಷಣ ಆಧರಿಸಿ 400 ಮಂದಿಯ ಸ್ವಾ$್ಯಬ್‌ (ಗಂಟಲಿನ ದ್ರವ) ಮತ್ತು ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, 326 ಮಂದಿಯ ವರದಿ ಬಂದಿದ್ದು, ಯಾರಲ್ಲೂ ಸೋಂಕು ದೃಢಪಟ್ಟಿಲ್ಲ. ಉಳಿದಂತೆ ಶಂಕಿತ 525 ಮಂದಿಯನ್ನು ಮನೆಯಲ್ಲಿ ಪ್ರತ್ಯೇಕವಾಗಿರಿಸಿ ನಿಗಾ ವಹಿಸಲಾಗಿದೆ. ಅವರಲ್ಲಿ 251 ಮಂದಿ 28 ದಿನಗಳ ನಿಗಾದಿಂದ ಹೊರಬಂದಿದ್ದಾರೆ.

ಹೆಚ್ಚು ಬೆಲೆಗೆ ಮಾಸ್ಕ್‌ ಮಾರಿದರೆ ಕ್ರಮ

ಪರಿಸ್ಥಿತಿಯ ಲಾಭ ಪಡೆಯಲು ಗರಿಷ್ಠ ದರಕ್ಕಿಂತ ಹೆಚ್ಚು ಬೆಲೆಗೆ ಮಾಸ್ಕ್‌ ಮಾರಾಟ ಮಾಡುವುದನ್ನು ತಪಾಸಣೆ ನಡೆಸಿ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ತಂಡಗಳನ್ನು ರಚಿಸಲಾಗಿದೆ.

ಈ ನಡುವೆ, ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಗತ್ಯ ಔಷಧಗಳು, ಮಾಸ್ಕ್‌ ಹಾಗೂ ಚಿಕಿತ್ಸಾ ಪರಿಕರಗಳನ್ನು 3 ತಿಂಗಳ ಮಟ್ಟಿಗೆ ಸಿದ್ಧಪಡಿಸಿಕೊಳ್ಳುವಂತೆ ಎಲ್ಲಾ ವೈದ್ಯಕೀಯ ಕಾಲೇಜುಗಳಿಗೆ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌ ಆದೇಶ ಹೊರಡಿಸಿದ್ದಾರೆ. ಜತೆಗೆ ಆರು ತಿಂಗಳಿಗೆ ಅಗತ್ಯವಿರುವ ಔಷಧಗಳ ಪ್ರಮಾಣ ಅಂದಾಜಿಸಿ ಸಂಗ್ರಹಿಸಬೇಕು. ಜತೆಗೆ ಪ್ರತಿ ವೈದ್ಯಕೀಯ ಸಂಸ್ಥೆಯಲ್ಲಿ 10 ಪ್ರತ್ಯೇಕ ಹಾಸಿಗೆ ವ್ಯವಸ್ಥೆ, ವೆಂಟಿಲೇಟರ್‌ ವ್ಯವಸ್ಥೆ, ಆಮ್ಲಜನಕ ಸೇರಿ ಅಗತ್ಯವಿರುವ ಪರಿಕರ ಸಿದ್ಧಪಡಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.