ಎಲ್‌.ಎನ್‌. ಶಿವಮಾದು

ಬೆಂಗಳೂರು[ಡಿ.19]: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳ ವಾಸ್ತವ ಚಿತ್ರಣ ತಿಳಿಯುವುದಕ್ಕಾಗಿಯೇ ಉನ್ನತ ಶಿಕ್ಷಣ ಇಲಾಖೆಯು ಟೋಲ್‌ ಫ್ರೀ ನಂಬರ್‌, ವಾಟ್ಸ್‌ ಆ್ಯಪ್‌ ಹಾಗೂ ಇ-ಮೇಲ್‌ ಆರಂಭಿಸುತ್ತಿದೆ.

ಸರ್ಕಾರಿ ಕಾಲೇಜುಗಳಲ್ಲಿ ಮೂಲಸೌಕರ್ಯ, ಬೋಧನಾ ಗುಣಮಟ್ಟಯಾವ ರೀತಿ ಇದೆ, ಕಾಲೇಜಿನ ವಾತಾವರಣ ಹೇಗಿದೆ, ಉನ್ನತ ಶಿಕ್ಷಣದಲ್ಲಿ ಹಾಗೂ ವಿವಿಗಳಲ್ಲಿರುವ ಸವಾಲುಗಳೇನು, ರಾಜ್ಯದ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಎಂತಹ ದೃಷ್ಟಿಕೋನ ಹೊಂದಿದ್ದಾರೆ ಎಂದು ಕರೆ ಅಥವಾ ವಾಟ್ಸ್‌ ಆ್ಯಪ್‌ ಮಾಡಿ ಮಾಹಿತಿ ನೀಡಬಹುದು. ವಾಟ್ಸ್‌ ಆ್ಯಪ್‌ ಸಂಖ್ಯೆ, ಇ-ಮೇಲ್‌ ವಿಳಾಸ, ಟೋಲ್‌ ಫ್ರೀ ಸಂಖ್ಯೆಗಳನ್ನು ಸಂಕ್ರಾಂತಿ ನಂತರ ಸರ್ಕಾರ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಪ್ರಮುಖವಾಗಿ ಬೋಧನಾ ಗುಣಮಟ್ಟತಿಳಿಯುವುದು ಯೋಜನೆಯ ಉದ್ದೇಶವಾಗಿದೆ. ಹಾಸ್ಟೆಲ್‌ಗಳು, ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ರಾಜಕೀಯ ಕೂಡ ಇತ್ತೀಚಿನ ದಿನಗಳಲ್ಲಿ ಮಿತಿ ಮೀರುತ್ತಿದೆ. ಇಂತಹ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ನೀಡಬಹುದು. ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ದೂರುಗಳು, ಸಮಸ್ಯೆಗಳು ಮಾತ್ರವಲ್ಲದೆ, ಉನ್ನತ ಶಿಕ್ಷಣ ಸುಧಾರಣೆಗಾಗಿ ವಿದ್ಯಾರ್ಥಿಗಳು ಹೊಂದಿರುವ ದೃಷ್ಟಿಕೋನ, ಚಿಂತನೆಗಳನ್ನು ಸಹ ಹಂಚಿಕೊಳ್ಳಲು ವೇದಿಕೆ ಕಲ್ಪಿಸುತ್ತಿದೆ.

--

ಸಂಕ್ರಾಂತಿ ಬಳಿಕ ಸಚಿವರ ದಿಢೀರ್‌ ಭೇಟಿ

ರಾಜ್ಯದ ಉನ್ನತ ಶಿಕ್ಷಣ ಸುಧಾರಣೆಗೆ ಮುಂದಾಗಿರುವ ಉಪ ಮುಖ್ಯಮಂತ್ರಿಗಳೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್‌. ಅಶ್ವತ್ಥ ನಾರಾಯಣ ಸಂಕ್ರಾಂತಿ ಬಳಿಕ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳಿಗೆ ದಿಢೀರ್‌ ಭೇಟಿ ನೀಡುವ ಮೂಲ ಸೌಕರ್ಯ, ಬೋಧನಾ ಗುಣಮಟ್ಟಮತ್ತು ಕಾಲೇಜುಗಳ ನೈಜ ಚಿತ್ರಣ ತಿಳಿಯುವುದಕ್ಕೆ ನಿರ್ಧರಿಸಿದ್ದಾರೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆಯ 400 ಕಾಲೇಜುಗಳಿಗೆ ಕಾಯಂ ಪ್ರಾಂಶುಪಾಲರಿಲ್ಲ, 12,500ಕ್ಕೂ ಹೆಚ್ಚಿನ ಅತಿಥಿ ಪ್ರಾಧ್ಯಾಪಕರು ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಶೈಕ್ಷಣಿಕವಾಗಿ ಆಡಳಿತ ಯಂತ್ರ ಚುರುಕಾಗಿ ನಡೆಯುತ್ತಿಲ್ಲ. ಅಲ್ಲದೆ, ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ, ಬೇಡದ ವಿಷಯಗಳಿಗೆ ವಿವಾದ ಸೃಷ್ಟಿಮಾಡುತ್ತಿವೆ. ಪ್ರಾಧ್ಯಾಪಕರ ಒಳ ರಾಜಕೀಯಗಳು, ಹತ್ತಾರು ಕಾಲೇಜುಗಳಲ್ಲಿ ಸಮರ್ಪಕ ಕಟ್ಟಡಗಳು, ಆಟದ ಮೈದಾನ, ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಇಂತಹ ಸಮಸ್ಯೆಗಳನ್ನು ಸ್ಥಳೀಯವಾಗಿ ಗುರುತಿಸಿ ಪರಿಹಾರ ಸೂಚಿಸುವುದು, ಸರಿಯಾಗಿ ಪಾಠ ಮಾಡದ ಪ್ರಾಧ್ಯಾಪಕರಿಗೆ ಬಿಸಿ ಮುಟ್ಟಿಸುವ ಚಿಂತನೆ ನಡೆಸಿದ್ದಾರೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಅವರು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಿಂದ ಸ್ಥಳೀಯವಾಗಿ ಸಮಸ್ಯೆಗಳನ್ನು ಆಲಿಸುವುದಕ್ಕಾಗಿಯೇ ‘ಸಂವೇದನಾ’ ಎಂಬ ಫೋನ್‌ ಇನ್‌ ಕಾರ್ಯಕ್ರಮ ಆರಂಭಿಸಿದ್ದಾರೆ. ಇದೀಗ ಉನ್ನತ ಶಿಕ್ಷಣ ಸಚಿವರು ದಿಢೀರ್‌ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ರಾಜ್ಯದ ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ದೃಷ್ಟಿಯಿಂದ ಈ ಭೇಟಿ ಪೂರಕವಾಗಲಿದೆ ಎಂದು ಪ್ರಾಧ್ಯಾಪಕರ ಸಂಘದ ಅಧ್ಯಕ್ಷ ಪ್ರಕಾಶ್‌ ಸ್ವಾಗತಿಸಿದ್ದಾರೆ.